Advertisement

ವೇಣೂರು: ಸಮಸ್ಯೆಗಳಿಗೆ ಪರಿಹಾರದ ರೂಪ ಕೊಟ್ಟರೆ ಅಭಿವೃದ್ಧಿ 

10:39 AM Aug 04, 2018 | Team Udayavani |

ವೇಣೂರು: ಐತಿಹಾಸಿಕ ಬಾಹುಬಲಿ ಮೂರ್ತಿ ಮೂಲಕ ರಾಜ್ಯದ ಪ್ರವಾಸಿ ತಾಣಗಳಲ್ಲಿ ಮಹತ್ವದ ಸ್ಥಾನ ಪಡೆದ ಊರು ವೇಣೂರು. ದಿನವೊಂದಕ್ಕೆ ನೂರಾರು ಯಾತ್ರಿಗಳು, ಸಾವಿರಾರು ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಬರುವ ಇಲ್ಲಿನ ಜಂಕ್ಷನ್‌ ಅನ್ನು ಇಡೀ ಊರಿನ ಅಭಿವೃದ್ಧಿಗೆ ಬಳಸಿಕೊಂಡೇ ಇಲ್ಲ. ವೇಣೂರು ಜಂಕ್ಷನ್‌ನಲ್ಲಿ ಒಮ್ಮೆ ನಿಂತು ನೋಡಿದರೆ ಈ ಮಾತು ಅನುಭವಕ್ಕೆ ಬರುತ್ತದೆ. ಮೂಲ ಸೌಕರ್ಯಗಳನ್ನು ಕಲ್ಪಿಸುವತ್ತ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಮನಸ್ಸು ಮಾಡಿದರೆ ಬಹಳ ದೊಡ್ಡದೇನೂ ಅಲ್ಲ.

Advertisement

ಬಸ್‌ ನಿಲ್ದಾಣ
ವೇಣೂರು ಪೇಟೆ ಕಿರಿದು. ರಾಜ್ಯ ಹೆದ್ದಾರಿಗೆ ತಾಗಿಕೊಂಡ ಪಂಚಾಯತ್‌ ಕಟ್ಟಡ ಬಳಿಯ ಬರೆಯನ್ನು ಸಮತಟ್ಟುಗೊಳಿಸಿದರೆ ಜಂಕ್ಷನ್‌ ಸ್ವಲ್ಪ ವಿಸ್ತರಣೆಯಾಗಬಲ್ಲದು. ಒಂದು ಕಿ.ಮೀ. ಅಂತರದ ವೇಣೂರು ಕೆಳಗಿನ ಪೇಟೆ (ಶ್ರೀರಾಮ ನಗರ) ಹಾಗೂ ಮೇಲಿನ ಪೇಟೆ (ಮಹಾವೀರ ನಗರ) ಇದೆ. ಆದರೆ ಪೇಟೆಯ ಅಲ್ಲಲ್ಲಿ ಬಸ್‌ ತಂಗುದಾಣಗಳಿವೆ. 

2016ರ ಆಗಸ್ಟ್‌ನಲ್ಲಿ ಇಲ್ಲಿಯ ಮುಖ್ಯ ಜಂಕ್ಷನ್‌ ಬಳಿಯಲ್ಲೇ 9 ಸೆಂಟ್ಸ್‌ ಜಾಗವನ್ನು ಬಸ್‌ ನಿಲ್ದಾಣಕ್ಕೆ ಕಾಯ್ದಿರಿಸಿ ಸಮತಟ್ಟು ಮಾಡಲಾಗಿದೆ. ಆದರೆ ಬಸ್‌ಗಳು ಇನ್ನೂ ರಸ್ತೆ ಬದಿಯಲ್ಲೇ ನಿಲ್ಲುತ್ತಿವೆ. ಖಾಸಗಿ ಬಸ್‌ಗಳು ಗಂಟೆಗಟ್ಟಲೆ ಹೆದ್ದಾರಿ ಬದಿಯಲ್ಲೇ ಲಂಗರು ಹಾಕುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿರುವುದು ಸುಳ್ಳಲ್ಲ. ಜತೆಗೆ ಜನರ ಸುರಕ್ಷತೆಗೂ ಸಮಸ್ಯೆಯೇ. ಅಂಗಡಿಗಳ ಮುಂಭಾಗದಲ್ಲಿ ಅಡ್ಡವಾಗಿ ಬಸ್ಸನ್ನು ನಿಲ್ಲಿಸುವುದರಿಂದ ವ್ಯಾಪಾರ ವಹಿವಾಟಿಗೂ ತೊಂದರೆ ಆಗುತ್ತಿದೆ ಎಂಬುದು ಸುತ್ತಲಿನ ಜನರ ಅಭಿಪ್ರಾಯ.

ಸಂಪರ್ಕ ಕೊಂಡಿ
ವೇಣೂರು ಬಂಟ್ವಾಳ ಕ್ರಾಸ್‌ ಜಂಕ್ಷನ್‌ ಎರಡು ತಾಲೂಕಿಗೆ ಸಂಪರ್ಕಿಸುವ ಸಂಪರ್ಕ ಕೊಂಡಿ. ಆರಂಬೋಡಿ, ಗುಂಡೂರಿ, ಬಜಿರೆ, ಪೆರಿಂಜೆ, ಕರಿಮಣೇಲು, ಅಂಡಿಂಜೆ, ನಿಟ್ಟಡೆ, ಕುಕ್ಕೇಡಿ ಹಾಗೂ ಇನ್ನಿತರ ಗ್ರಾಮದ ಜನರು ವೇಣೂರು ಪೇಟೆಯನ್ನೇ ಅವಲಂಬಿಸಿದ್ದಾರೆ. ವೇಣೂರು ಎಂಬುದು ಮೂಡಬಿದಿರೆ ಮತ್ತು ತಾಲೂಕು ಕೇಂದ್ರ ಬೆಳ್ತಂಗಡಿಗೆ ಸಂಪರ್ಕಿಸುವ ಮಧ್ಯ ಭಾಗವೂ ಹೌದು. ಬಿಸಿರೋಡ್‌ನಿಂದ ವಾಮದಪದವು ಮಾರ್ಗವಾಗಿ ಹಾಗೂ ಸಿದ್ದಕಟ್ಟೆ ಮಾರ್ಗವಾಗಿ ವೇಣೂರಿಗೆ ಸಂದಿಸುವ ಕೇಂದ್ರ ಸ್ಥಳ ಇದು. 

ಇಲ್ಲಿಯ ಹೆದ್ದಾರಿಯಲ್ಲಿ ಹೆಚ್ಚುಕಮ್ಮಿ ಅರ್ಧ ಗಂಟೆಗೊಂದರಂತೆ ಕೆಎಸ್‌ಆರ್‌ಟಿಸಿ ಬಸ್‌ ಗಳು ಓಡಾಡುತ್ತವೆ. ಇದಲ್ಲದೇ ಸುಮಾರು 40ಕ್ಕೂ ಅಧಿಕ ಖಾಸಗಿ ಹಾಗೂ 15 ಕೆಎಸ್‌ಆರ್‌ ಟಿಸಿ ಬಸ್‌ಗಳು ಹೆದ್ದಾರಿಯಲ್ಲಿ ಈ ಜಂಕ್ಷನ್‌ ಮೂಲಕ ಹಾದು ಹೋಗುತ್ತವೆ. ರಾತ್ರಿ ಹಾಗೂ ಮುಂಜಾನೆಯ ವೇಳೆ ವೇಗದೂತ ವೋಲ್ವೊ ಬಸ್‌ಗಳ ಸಂಚಾರವೂ ಇದೆ. ಬಿಸಿರೋಡ್‌ನಿಂದ ಸಿದ್ದಕಟ್ಟೆ ಮಾರ್ಗವಾಗಿ ವೇಣೂರಿಗೆ 15 ಖಾಸಗಿ ಬಸ್‌ಗಳು, ಬಿಸಿರೋಡ್‌ನಿಂದ ವಾಮದಪದವು ಮಾರ್ಗವಾಗಿ 15 ಬಸ್‌ಗಳು ವೇಣೂರು ಮೂಲಕ ನಾರಾವಿಗೆ ತೆರಳುತ್ತವೆ. ಹೀಗೆ ಸದಾ ಈ ಜಂಕ್ಷನ್‌ ಬ್ಯುಸಿ.

Advertisement

ಇದ್ದರೂ ಇಲ್ಲದಂತೆ
ಇರುವ ಬಸ್‌ ನಿಲ್ದಾಣ ಕಿರಿದು. ಒಂದೇ ಬದಿಯಲ್ಲಿ ಇರುವ ಕಾರಣ ಮತ್ತೂಂದು ಬದಿಯ ಪ್ರಯಾಣಿಕರಿಗೆ ಇತರೆ ಅಂಗಡಿಗಳ ಎದುರೇ ಆಶ್ರಯ. ರಾಜ್ಯ ಹೆದ್ದಾರಿಯೂ ಹೊಂಡಗಳಿಂದ ಮುಕ್ತವಾಗಿಲ್ಲ. ಪ್ರಮುಖವಾಗಿ ಖಾಸಗಿ ಬಸ್‌ಗಳು ಒಂದೇ ಕಡೆ ನಿಲ್ಲುವಂತಾಗಬೇಕು.

ವೇಣೂರಲ್ಲಿ ಏನೇನಿದೆ?
ನಾಡಕಚೇರಿ, ಕಂದಾಯ ನಿರೀಕ್ಷಕರ ಕಚೇರಿ, ಗ್ರಾಮಕರಣಿಕರ ಕಚೇರಿ, ಪೊಲೀಸ್‌ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ಮೆಸ್ಕಾಂ, ಅಂಚೆ ಕಚೇರಿ, ರೈತ ಸಂಪರ್ಕ ಕೇಂದ್ರ, ರಾಷ್ಟ್ರೀಕೃತ ಬ್ಯಾಂಕ್‌ಗಳು, ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳು, ಕ್ಯಾಂಪ್ಕೊ, ನೆಮ್ಮದಿ ಕೇಂದ್ರ, ಸರಕಾರಿ ಪ.ಪೂ. ಕಾಲೇಜು, ಸರಕಾರಿ ಮತ್ತು ಖಾಸಗಿ ಶಾಲೆಗಳು, ಪುರಾತನ ಧಾರ್ಮಿಕ ಪ್ರಾರ್ಥನಾ ಕೇಂದ್ರಗಳು.

ಮೂಲಸೌಲಭ್ಯ
ಜಂಕ್ಷನ್‌ ಪಕ್ಕದಲ್ಲೇ ಪಂಚಾಯತ್‌ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಕರಣಿಕರ ಕಚೇರಿ ಹಾಗೂ ಸಾರ್ವಜನಿಕ ಶೌಚಾಲಯ ಇದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಆಗಿ ವರ್ಷ ಕಳೆದಿದ್ದರೂ ಕಾರ್ಯಾರಂಭ ಮಾಡಿಲ್ಲ. ಸಾವಿರಾರು ಮಂದಿ ಸಂಧಿಸುವ ಇಲ್ಲಿ ಮುಖ್ಯವಾಗಿ ವ್ಯವಸ್ಥಿತ ಪಾರ್ಕಿಂಗ್‌ ಗೆ ಜಾಗ ಬೇಕು. ಅಂಗಡಿಗಳ ಎದುರೇ ವಾಹನ ನಿಲ್ಲಿಸಲಾಗುತ್ತಿದ್ದು, ರಿಕ್ಷಾ ಪಾರ್ಕಿಂಗ್‌ಗೂ ಜಾಗವಿಲ್ಲದ ಬಸ್‌ ನಿಲ್ದಾಣವೇ ಆಶ್ರಯವಾಗಿದೆ. ಇದೇ ಜಂಕ್ಷನ್‌ನಲ್ಲಿ ಚಿಕ್ಕದೊಂದು ವೃತ್ತ ನಿರ್ಮಿಸಬೇಕೆಂಬ ಬೇಡಿಕೆಯೂ ಇದೆ. 

ಜಂಕ್ಷನ್‌ ಅಭಿವೃದ್ಧಿ
ದಾನಿಗಳ ಸಹಕಾರದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ವೇಣೂರಿನ ಮುಖ್ಯ ಜಂಕ್ಷನ್‌ ಬಳಿ ಶೀಘ್ರ ಆಗಲಿದೆ. ಬಸ್‌ ತಂಗುದಾಣಕ್ಕೆ ಗೊತ್ತುಪಡಿಸಿದ ಜಾಗದಲ್ಲಿ ಖಾಸಗಿ ಬಸ್‌ ನಿಲ್ಲಿಸಬಹುದು. ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿತ್ತಾದರೂ ತಾಂತ್ರಿಕ ದೋಷದಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಇವೆಲ್ಲವನ್ನೂ ಸರಿಪಡಿಸಿ ಜಂಕ್ಷನ್‌ ಅಭಿವೃದ್ಧಿಗೆ ಗಮನ ಹರಿಸಲಾಗುವುದು.
– ಮೋಹಿನಿ ವಿಶ್ವನಾಥ ಶೆಟ್ಟಿ
ಅಧ್ಯಕ್ಷರು ಗ್ರಾ.ಪಂ. ವೇಣೂರು

ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next