Advertisement

ಜಾತಿವಾರು ಮತಬೇಟೆಗೆ ವೇಣುಗೋಪಾಲ್‌ ರಣತಂತ್ರ

06:00 AM Oct 27, 2018 | Team Udayavani |

ಬಾಗಲಕೋಟೆ: ಜಮಖಂಡಿ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ವೇಣುಗೋಪಾಲ್‌ ತಂತ್ರಗಾರಿಕೆ ಹೆಣೆದಿದ್ದು, ಗುರುವಾರ ತಡರಾತ್ರಿ ಗುಪ್ತಸಭೆ ನಡೆಸಿ, ಹಲವರಿಗೆ ವಿವಿಧ ಜವಾಬ್ದಾರಿ ನೀಡಿದ್ದಾರೆ. ಜಮಖಂಡಿಯ ರಾಯಲ್‌ ಪ್ಯಾಲೆಸ್‌ ನಲ್ಲಿ ಕೆಲವೇ ಪ್ರಮುಖರ ಸಭೆ ನಡೆಸಿ ಜಮಖಂಡಿ ಉಪ ಚುನಾವಣೆಯ ಸಮಗ್ರ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಕಾಂಗ್ರೆಸ್‌ನಿಂದ ಉಸ್ತುವಾರಿಗಳಾಗಿ ನೇಮಕಗೊಂಡ 26 ಜನರ ಸಮಗ್ರ ಮಾಹಿತಿಯೂ ಕಲೆಹಾಕಿ, ಯಾರು ಪ್ರಚಾರಕ್ಕೆ ಬಂದಿಲ್ಲವೋ ಅವರಿಗೆ ಖಡಕ್‌ ಸೂಚನೆ ಕೊಟ್ಟು ಹೋಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವರಾದ ಸತೀಶ ಜಾರಕಿಹೋಳಿ, ಎಂ.ಬಿ. ಪಾಟೀಲ ಹಾಗೂ ಉಪ ಚುನಾವಣೆಯ  ಅಭ್ಯರ್ಥಿ ಆನಂದ ನ್ಯಾಮಗೌಡ ಅವರೊಂದಿಗೆ ಗುಪ್ತ ಸಭೆ ನಡೆಸಿದ ಅವರು, ಇಡೀ ಕ್ಷೇತ್ರದಲ್ಲಿ ಯಾವ ಜಾತಿಯ ಎಷ್ಟು ಮತದಾರರಿದ್ದಾರೆ ಎಂಬ ಮಾಹಿತಿ ಪಡೆದಿದ್ದಾರೆ.

Advertisement

ಕ್ಷೇತ್ರದ ಲಿಂಗಾಯತ ಮತಗಳನ್ನು ಸೆಳೆಯಲು ಉಸ್ತುವಾರಿ ಸಚಿವ ಶಿವಾನಂದ ಪಾಟೀಲರಿಗೆ ಪೂರ್ಣ ಜವಾಬ್ದಾರಿ ಕೊಟ್ಟಿದ್ದಾರೆ. ಅವರೊಂದಿಗೆ ಶಾಸಕಿ ಲಕ್ಷ್ಮೀ ಹೆಬ್ಟಾಳಕರ, ವಿನಯ ಕುಲಕರ್ಣಿ ಹಾಗೂ ಈಶ್ವರ ಖಂಡ್ರೆ ಅವರು ಕ್ಷೇತ್ರದ ಲಿಂಗಾಯತ ಮತ ಸೆಳೆಯಲು ಎಲ್ಲ ರೀತಿಯ ಪ್ರಯತ್ನ ಮಾಡಬೇಕೆಂದು ಸೂಚಿಸಿದ್ದಾರೆ. ಎಸ್‌ಸಿ ಎಡಗೈ  ಸಮುದಾಯದ ಮತ ಸೆಳೆಯಲು ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ, ಎಸ್‌ಟಿ ಮತ ಸೆಳೆಯಲು ಮಾಜಿ ಸಚಿವ ಸತೀಶ ಜಾರಕಿಹೊಳಿ, ಎಸ್‌ಸಿ ಬಲಗೈ ಸಮುದಾಯದ ಮತ ಪಡೆಯಲು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಮರಾಠಿಗರ ಮತ ಸೆಳೆಯಲು ಶಾಸಕಿ ಅಂಜಲಿ ನಿಂಬಾಳಕರ, ಮುಸ್ಲಿಂ ಮತಗಳ ಪೂರ್ಣ ಜವಾಬ್ದಾರಿಯನ್ನು ಸಿ.ಎಂ. ಇಬ್ರಾಹಿಂ, ಬೀದರ ಜಿಲ್ಲೆಯ ಶಾಸಕ ರಹೀಮ್‌ಖಾನ್‌, ಸಚಿವ ಜಮೀರ ಅಹ್ಮದ ಖಾನ್‌ ಅವರಿಗೆ ವಹಿಸಿದ್ದಾರೆ.

ಇನ್ನು ನೇಕಾರರ ಮತ ಸೆಳೆಯುವ ಹೊಣೆಗಾರಿಕೆ ಮಾಜಿ ಸಚಿವೆ ಉಮಾಶ್ರೀ ಅವರಿಗೆ ವಹಿಸಲಾಗಿದೆ. ಕುರುಬ ಸಮುದಾಯ ಮತಗಳೊಂದಿಗೆ ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರವಾಗಿ ಅಲೆ ಸೃಷ್ಟಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಖಡಕ್‌ ಸೂಚನೆ
ಜಮಖಂಡಿ ಉಪ ಚುನಾವಣೆಗೆ ಕಾಂಗ್ರೆಸ್‌ ನಿಂದ ಒಟ್ಟು 26 ಜನರಿಗೆ ಉಸ್ತುವಾರಿ ನೀಡಿದ್ದು, ಅದರಲ್ಲಿ ಯಾರು ಕ್ಷೇತ್ರಕ್ಕೆ
ಬಂದು ಎಲ್ಲೆಲ್ಲಿ ಪ್ರಚಾರ ಮಾಡಿದ್ದಾರೆ, ಯಾರು ಬಂದಿಲ್ಲ ಎಂಬುದರ ಮಾಹಿತಿಯನ್ನು ವೇಣುಗೋಪಾಲ್‌
ಪಡೆದಿದ್ದಾರೆ. ಪ್ರಚಾರಕ್ಕೆ ಹಾಗೂ ಪಕ್ಷ ವಹಿಸಿರುವ ಕಾರ್ಯಕ್ಕೆ ಬಾರದವರ ವಿರುದ್ಧ ಖಡಕ್‌ ವರದಿ ಸಿದಟಛಿಪಡಿಸಿಕೊಂಡು,
ಎಐಸಿಸಿಗೆ ರವಾನಿಸಲು ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪ
ಬಾಗಲಕೋಟೆ: ಜಮಖಂಡಿ ತಾಲೂಕಿನ ಹಿರೇಪಡಸಲಗಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿ ಬಂದಿದೆ. “ಈ ಭಾಗದ ನೀರಾವರಿ ಯೋಜನೆಗಳು  ಪೂರ್ಣಗೊಳಿಸಲು ಕಾಂಗ್ರೆಸ್‌ಗೆ ಮತ ನೀಡಿ. ಜಮಖಂಡಿ ಉಪ ಚುನಾವಣೆಯಲ್ಲಿ ಆನಂದ ನ್ಯಾಮಗೌಡ ಅವರನ್ನು ಗೆಲ್ಲಿಸಿದರೆ, ನಮ್ಮ ಸರ್ಕಾರದಿಂದ ನೀರಾವರಿ ಯೋಜನೆ ಪೂರ್ಣಗೊಳಿಸಿ ಕೊಡುತ್ತೇನೆ’ ಎಂದು ಭರವಸೆ ನೀಡಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next