Advertisement

ವೇಣೂರಿಗೆ ಶೀಘ್ರ ಪ್ರಥಮ ದರ್ಜೆ ಕಾಲೇಜು: ವಸಂತ ಬಂಗೇರ

04:26 PM Oct 08, 2017 | Team Udayavani |

ಮರೋಡಿ : ಶೀಘ್ರದಲ್ಲೇ ವೇಣೂರಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ. ವಸಂತ ಬಂಗೇರ ತಿಳಿಸಿದ್ದಾರೆ.ನಾರಾವಿ ಮತ್ತು ಮರೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಂಜೂರಾದ 2 ಕೋ.ರೂ. ಮೊತ್ತದ ಪುರುಷಗುಡ್ಡೆ-ಬಜಿಲಪಾದೆ- ಕೂಕ್ರಬೆಟ್ಟು ರಸ್ತೆ ಅಭಿವೃದ್ಧಿ ಕಾಮಗಾರಿಗೆ
ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

Advertisement

ಮುಂದಿನ ಡಿಸೆಂಬರ್‌ ಒಳಗೆ ಶಿಲಾನ್ಯಾಸಗೊಂಡಿರುವ ಕೋಟ್ಯಂತರ ರೂ. ಮೊತ್ತದ ತಾಲೂಕಿನ ಹೆಚ್ಚಿನ ರಸ್ತೆಗಳ ಉದ್ಘಾಟನೆಯ ಇಚ್ಛೆ ಹೊಂದಿದ್ದು ಇದಕ್ಕೆ ಗುತ್ತಿಗೆದಾರರು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸಬೇಕಾಗಿದೆ. ಅಕ್ರಮ- ಸಕ್ರಮ ಯೋಜನೆಯಡಿ ತಾಲೂಕಿನಲ್ಲಿ ಈವರೆಗೆ 20 ಸಾವಿರ ಹಕ್ಕುಪತ್ರವನ್ನು ಕೈಯಾರೆ ನೀಡಿದ್ದು 94ಸಿ ಅಡಿಯಲ್ಲಿ 15 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ತನ್ನ ಅಧಿಕಾರಾವಧಿ ಮುಗಿಯುವುದರೊಳಗೆ ವಿಲೇವಾರಿ ಮಾಡಲಾಗುವುದು ಎಂದರು.

ಗ್ರಾಮ ವಿಕಾಸ ಯೋಜನೆಗೆ ಪೆರಾಡಿ ಸಹಿತ ತಾಲೂಕಿನ ನಾಲ್ಕು ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ತಲಾ 1 ಕೋ.ರೂ. ಅನುದಾನ ದೊರೆಯಲಿದೆ. ಮರೋಡಿ ಉಮಾಮಹೇಶ್ವರ ದೇವಸ್ಥಾನದ ರಸ್ತೆ, ಉಚ್ಚಾರು ಬೈಪಾಸ್‌ ರಸ್ತೆ, ನೀರಲ್ಕೆ-ಕಲ್ಲಟ ರಸ್ತೆ, ರಾಗಿಮೇಲು ರಸ್ತೆಯ ಅಭಿವೃದ್ಧಿಗೆ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮರೋಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ನಾರಾವಿ ತಾ.ಪಂ. ಸದಸ್ಯೆ ರೂಪಲತಾ, ನಾರಾವಿ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ, ಉಪಾಧ್ಯಕ್ಷೆ ಯಶೋದಾ, ಮರೋಡಿ ಗ್ರಾ.ಪಂ. ಉಪಾಧ್ಯಕ್ಷೆ ವನಿತಾ, ನಾರಾವಿ ಕೃ.ಪ.ಸ. ಸಂಘದ ಅಧ್ಯಕ್ಷ ಜೀವಂಧರ ಕುಮಾರ್‌, ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ, ಪಿ.ಕೆ. ರಾಜು ಪೂಜಾರಿ ಕಾಶಿಪಟ್ಣ, ಜಿಲ್ಲಾ ಕೆಡಿಪಿ ಸದಸ್ಯ ಶ್ರೀನಿವಾಸ ಕಿಣಿ, ಕೃಷಿಕ ಸಮಾಜದ ಮಹಾವೀರ ಜೈನ್‌, ಬೆಳ್ಳಿಬೀಡುವಿನ ಹೇಮರಾಜ್‌, ಗ್ರಾ.ಪಂ. ಸದಸ್ಯರಾದ ಕೃಷ್ಣಪ್ಪ ಪೂಜಾರಿ, ವಿಠ್ಠಲ ಪೂಜಾರಿ ಸಾವ್ಯ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮಾನ 
ಶಾಸಕ ಕೆ. ವಸಂತ ಬಂಗೇರ ಅವರನ್ನು ಬೆಳ್ಳಿ ಕಿರೀಟ ತೊಡಿಸಿ ಸಮ್ಮಾನಿಸಲಾಯಿತು. ಅನುದಾನ ಲಭಿಸುವಲ್ಲಿ ಸಹಕಾರ ನೀಡಿದ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಪ್ರಸಾದ್‌ ಅಜಿಲ ಅವರನ್ನು ಸಮ್ಮಾನಿಸಲಾಯಿತು. ಸಂಗೀತ  ರಸಮಂಜರಿ ಜರಗಿತು. ಎಂ. ಕೆ. ಆರಿಗ ಸ್ವಾಗತಿಸಿ, ಕರುಣಾಕರ ಸುವರ್ಣ ವಂದಿಸಿದರು. ವಿಶು ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

ಮುಖ್ಯಮಂತ್ರಿಗೆ ಮನವಿ
ಗರ್ಭಿಣಿ, ಬಾಣಂತಿಯರ ಆರೋಗ್ಯದ ದೃಷ್ಟಿಯಿಂದ ಮಾತೃಪೂರ್ಣ ಯೋಜನೆ ಉತ್ತಮವಾದುದು. ಆದರೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕುಚ್ಚಲಕ್ಕಿ ಅನ್ನ ನೀಡಬೇಕು, ಜತೆಗೆ ಅಂಗನವಾಡಿ ಕೇಂದ್ರಕ್ಕೆ ಮತ್ತೋರ್ವ ಸಹಾಯಕರನ್ನು ನೇಮಿಸಬೇಕು ಮತ್ತು ಕಾರ್ಯಕರ್ತರ ಗೌರವ ಧನ ಹೆಚ್ಚಿಸಬೇಕು ಎಂಬ ಮನವಿಯನ್ನು ಮುಖ್ಯಮಂತ್ರಿಗೆ ಶೀಘ್ರದಲ್ಲೇ ಸಲ್ಲಿಸುತ್ತೇನೆ.
– ಕೆ. ವಸಂತ ಬಂಗೇರ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next