Advertisement
ಕಳೆದ ತಿಂಗಳಷ್ಟೇ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿಯಾಗಿ ನೇಮಕಗೊಳ್ಳುವ ಮೂಲಕ, ಈ ಹುದ್ದೆಗೇರಿದ ಮೊದಲ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಭೈರೋನ್ ಸಿಂಗ್ ಶೇಖಾವತ್(2002-2007) ಅವರ ಬಳಿಕ ಉಪರಾಷ್ಟ್ರಪತಿ ಹುದ್ದೆಗೇರುತ್ತಿರುವ ಬಿಜೆಪಿಯ ಎರಡನೇ ನಾಯಕ ಎಂಬ ಖ್ಯಾತಿಯನ್ನು ವೆಂಕಯ್ಯ ನಾಯ್ಡು ಅವರು ಗಳಿಸಿದ್ದಾರೆ. ಶನಿವಾರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ನಾಯ್ಡು ಅವರು ಭರ್ಜರಿ ಮತಗಳನ್ನು ಪಡೆದು 13ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇದರ ಜತೆಗೆ ಅವರು ರಾಜ್ಯಸಭೆಯ ಸಭಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ವೆಂಕಯ್ಯ ನಾಯ್ಡು ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ. ಉಪರಾಷ್ಟ್ರಪತಿ ಎಂಬ ಹುದ್ದೆಯು ನಿಷ್ಪಕ್ಷಪಾತ ಪಾತ್ರವನ್ನು ವಹಿಸಿ ಮೇಲ್ಮನೆಯನ್ನು ಸುಗಮವಾಗಿ ಸಾಗುವಂತೆ ಮಾಡುವಂಥ ಸವಾಲಿನ ಕೆಲಸ. ಸರಕಾರದ ನೀತಿಗಳು ಹಾಗೂ ಶಾಸನಗಳ ಪರಿಣಾಮಕಾರಿ ಪರಿಶೀಲನೆಯ ಕೆಲಸದಲ್ಲಿ ರಾಜ್ಯಸಭೆಯನ್ನು ಬಲಿಷ್ಠಗೊಳಿಸುವಲ್ಲಿ ಪಕ್ಷ ಯಾವತ್ತೂ ಬೆಂಬಲವಾಗಿ ನಿಲ್ಲಲಿದೆ ಎಂದಿದ್ದಾರೆ.
Related Articles
ಶನಿವಾರ ಮತದಾನ ಆರಂಭವಾಗುವುದಕ್ಕೂ ಮೊದಲೇ ಪ್ರಧಾನಿ ಮೋದಿ ಅವರು ಕ್ಯೂನಲ್ಲಿ ನಿಂತಿದ್ದು ಕಂಡುಬಂತು. ಬೆಳಗ್ಗೆ 10 ಗಂಟೆಗೆ ವೋಟಿಂಗ್ ಹಾಲ್ ತೆರೆಯುವ ಮುಂಚೆಯೇ ಅಲ್ಲಿಗೆ ಆಗಮಿಸಿದ್ದ ಮೋದಿ ಅವರು ಸರತಿಯಲ್ಲಿ ನಿಂತು ಕಾಯುತ್ತಿದ್ದರು.
Advertisement
ಕಾಂಗ್ರೆಸ್‌ಗೆ ಅಡ್ಡ ಮತದಾನದ ಶಾಕ್ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಿದ್ದು, ವಿಪಕ್ಷಗಳ 24ರಷ್ಟು ಸಂಸದರು ಎನ್‌ಡಿಎ ಅಭ್ಯರ್ಥಿ ನಾಯ್ಡು ಪರ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ನಾಯ್ಡು ಅವರಿಗೆ ಸಿಕ್ಕಿರುವ ಬೆಂಬ ಲದ ಲೆಕ್ಕಾಚಾರ ನೋಡಿದರೆ ಅವರಿಗೆ 495 ಮತಗಳು ಸಿಗಬೇಕಿತ್ತು. ಆದರೆ, ಅವರಿಗೆ 516 ಮತ ದೊರೆತಿವೆ. ಹೀಗಾಗಿ, ಅಡ್ಡಮತದಾನ ನಡೆದಿರುವುದು ಸ್ಪಷ್ಟ ಎನ್ನಲಾಗಿದೆ. ಪೋಸ್ಟರ್‌ನಿಂದ ವೈಸ್ ಪ್ರಸಿಡೆಂಟ್‌ವರೆಗೆ
ಭಾರತೀಯ ಜನತಾ ಪಕ್ಷದ ವಿಧೇಯ ಕಾರ್ಯಕರ್ತ. ನಾಯಕರ ಆದೇಶ ಪಾಲಕ. ಅದ್ಭುತ ವಾಗ್ಮಿ. ಸರಳ ನಡೆ-ನುಡಿಗೆ ಹೆಸರಾಗಿ, ಪಕ್ಷ ನಿಷ್ಠೆ, ಸೇವೆ ಆಧಾರದಲ್ಲೇ ರಾಜ್ಯಸಭಾ ಸದಸ್ಯರ ಹುದ್ದೆಗೇರಿದ, ನಾಯಕ ಎಂದೆನಿಸಿಕೊಂಡಿರುವ ಮುಪ್ಪಾವರಪು ವೆಂಕಯ್ಯ ನಾಯ್ಡು, 13ನೇ ಉಪರಾಷ್ಟ್ರಪತಿಯಾಗಿ ಆಯ್ಕೆ ಆಗುವವರೆಗಿನ ಹಾದಿ ಸುದೀರ್ಘ. 1949ರ ಜುಲೈ 1ರಂದು, ಆಂಧ್ರದ ನೆಲ್ಲೂರು ಜಿಲ್ಲೆಯ ಚವತಪಲೆಮ್ ಗ್ರಾಮದ ಸಾಧಾರಣ ರೈತ ಕುಟುಂಬದಲ್ಲಿ ಜನಿಸಿದ ವೆಂಕಯ್ಯ ನಾಯ್ಡು, ತಮ್ಮ 68 ವರ್ಷಗಳ ಜೀವನದಲ್ಲಿ 4 ದಶಕಕ್ಕೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿರುವ ನಾಯ್ಡು, ಅತ್ಯಂತ ಸುದೀಘ ಅವಧಿಯ ರಾಜ್ಯಸಭೆ ಸದಸ್ಯರಾಗಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1970ರಲ್ಲಿ ದಕ್ಷಿಣ ಭಾರತದಲ್ಲಿ ಅಷ್ಟೇನೂ ಜನಮನ್ನಣೆ ಗಳಿಸಿರದ ಜನ ಸಂಘ ಸೇರಿದ ನಾಯ್ಡು, ಮುಂದೆ ಬಿಜೆಪಿಯ ಯುವ ಕಾರ್ಯಕರ್ತರಾಗಿ, ವಾಜಪೇಯಿ ಹಾಗೂ ಲಾಲ್ ಕೃಷ್ಣ ಆಡ್ವಾಣಿ ಅವರಂಥ ಧೀಮಂತ ನಾಯಕರ ಪೋಸ್ಟರ್‌ಗಳನ್ನು ಗೋಡೆಗೆ ಅಂಟಿಸಿಕೊಂಡು ಬೆಳೆದುಬಂದವರು. 1978 ಮತ್ತು 1983ರಲ್ಲಿ ಆಂಧ್ರದ ಉದಯಗಿರಿ ಕ್ಷೇತ್ರದಿಂದ ಶಾಸಕ ರಾಗಿ ಆಯ್ಕೆಯಾದ ನಾಯ್ಡು, 1998ರಲ್ಲಿ ಮೊದಲ ಬಾರಿ ಕರ್ನಾಟಕ ದಿಂದ ರಾಜ್ಯಸಭೆ ಪ್ರವೇಶಿಸಿದ್ದು, ಇಲ್ಲಿಂದಲೇ 3 ಬಾರಿ (2003, 2010) ಹಾಗೂ 2016ರಲ್ಲಿ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. 1996ರಿಂದ 2000ದವರೆಗೆ ಬಿಜೆಪಿ ವಕ್ತಾರರಾಗಿ, 2004ರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಇವರು, 1999ರಲ್ಲಿ ಅಟಲ್ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2014ರ ಮೇ 26ರಿಂದ ಪ್ರಧಾನಿ ಮೋದಿ ಸಂಪುಟದಲ್ಲಿ ನಗರಾಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ನಾಯ್ಡು ಈಗ 13ನೇ ಉಪರಾಷ್ಟ್ರಪತಿ. ಆ.10: ನಿರ್ಗಮಿತ ಉಪರಾಷ್ಟ್ರಪತಿ ಅನ್ಸಾರಿ ಅವರ ಅಧಿಕಾರಾವಧಿ ಮುಕ್ತಾಯ
ಆ.11: ನೂತನ ಉಪರಾಷ್ಟ್ರಪತಿ ಯಾಗಿ ವೆಂಕಯ್ಯ ನಾಯ್ಡು ಅಧಿಕಾರ ಸ್ವೀಕಾರ
785: ಮತದಾನ ಮಾಡಬೇಕಿದ್ದ ಸಂಸದರ ಸಂಖ್ಯೆ
14: ಗೈರಾದ ಸಂಸದರು ಇದು ಮತಕ್ಕೆ ಸಿಕ್ಕಿದ ಜಯ. ಜೊತೆಗೆ ಮುಕ್ತ ಅಭಿವ್ಯಕ್ತಿಗೆ ದೊರೆತ ಜಯ. ಈ ಪೈಕಿ ಎರಡನೇ ಗೆಲುವು ಇಡೀ ಭಾರತಕ್ಕೆ ಸೇರಿದ್ದು. ನನಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದಗಳು. ಏಕೆಂದರೆ, ಅವರು ಮತ ಹಾಕಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬಹುತ್ವಕ್ಕೆ.
– ಗೋಪಾಲಕೃಷ್ಣ ಗಾಂಧಿ,
ವಿಪಕ್ಷಗಳ ಅಭ್ಯರ್ಥಿ