ತಿರುವನಂತಪುರ: ದೇಶದ ಎರಡನೇ ಅತಿ ದೊಡ್ಡ ಜೌಗು ಪ್ರದೇಶ ವೆಂಬನಾಡ್ ಸರೋವರವು ನಶಿಸುತ್ತಿದೆ. ಅದರ ವಿಶಿಷ್ಟವಾದ ಜೀವವೈವಿಧ್ಯತೆ ಅಪಾಯದ ಅಂಚಿನಲ್ಲಿದೆ.
20 ವರ್ಷಗಳ ಹಿಂದೆಯೇ ಈ ಸರೋವರವನ್ನು ರಾಮ್‌ಸರ್ ಪ್ರದೇಶ(ಸಂರಕ್ಷಿತ ಪ್ರದೇಶ) ಎಂದು ಘೋಷಿಸಲಾಗಿತ್ತು. ಈ ಸರೋವರವು ಕುಟ್ಟನಾಡ್‌ನ ರೈತರು ಮತ್ತು ಮೀನುಗಾರರ ಜೀವಸೆಲೆಯಾಗಿದೆ. ಸರೋವರದ ದಡದಲ್ಲಿ ಅನಧಿಕೃತ ನಿರ್ಮಾಣ ಕಾಮಗಾರಿ ಮತ್ತು ಮಾಲಿನ್ಯದಿಂದಾಗಿ ಇಲ್ಲಿನ ಪರಿಸರ ಅವನತಿಯತ್ತ ಸಾಗುತ್ತಿದೆ. ಜೌಗು ಪ್ರದೇಶವನ್ನು ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಒತ್ತಾಯಿಸುತ್ತಲೇ ಇದ್ದಾರೆ.
2,000 ಚದರ ಕಿ.ಮೀ.ಗೂ ಹೆಚ್ಚು ವಿಸ್ತೀರ್ಣ ಮತ್ತು ಸುಮಾರು 96 ಕಿಮೀ ಉದ್ದ ಹರಿಯುವ ವೆಂಬನಾಡ್ ಸರೋವರವು ಕೇರಳದ ಅತಿದೊಡ್ಡ ಮತ್ತು ದೇಶದಲ್ಲೇ ಅತಿ ಉದ್ದವಾದ ಸರೋವರಗಳಲ್ಲಿ ಒಂದಾಗಿದೆ. ಇದು ಅಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆ ಗಳಿಂದ ಸುತ್ತುವರಿದಿದೆ.
“ಸರೋವರವು ಗಂಭೀರ ಪರಿಸರ ಅವನತಿಯನ್ನು ಎದುರಿಸುತ್ತಿದೆ. ಸರೋವರದ ಸಂರಕ್ಷಣೆಗೆ ಕೇರಳ ಸರ್ಕಾರ ಕೈಗೊಂಡಿರುವ ಕ್ರಮಗಳು ಕೇವಲ ದಾಖಲೆಗಳಲ್ಲಿ ಉಳಿದಿದೆ. ಇದುವರೆಗೂ ಪ್ರಾಯೋಗಿಕವಾಗಿ ಕಾರ್ಯಗತವಾಗಿಲ್ಲ,” ಎಂದು ಜೌಗು ಪ್ರದೇಶಗಳ ರಾಷ್ಟ್ರೀಯ ಸಮಿತಿಯ ಮಾಜಿ ಸದಸ್ಯ, ಪರಿಸರ ತಜ್ಞ ಇ.ಜೆ.ಜೇಮ್ಸ್ ಬೇಸರ ವ್ಯಕ್ತಪಡಿಸಿದರು.