ಬಂಟ್ವಾಳ: ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಸ್‌ಗಳು ಸರಾಗವಾಗಿ ನಿಲ್ದಾಣವನ್ನು ಪ್ರವೇಶಿಸುವ ನಿಟ್ಟಿನಲ್ಲಿ ಸರ್ಕಲ್ ಮಾಡುವ ಪ್ರಸ್ತಾವಕ್ಕೆ ರಾ.ಹೆದ್ದಾರಿ ಪ್ರಾಧಿಕಾರ ಅನುಮತಿ ನಿರಾಕರಿಸಿದ್ದು, ಕೇಂದ್ರದ ಕಾನೂನಿನ ಪ್ರಕಾರ ಫ್ಲೈಓವರ್ ಬಳಿಯಿಂದ 300 ಮೀ. ಅಂತರದೊಳಗೆ ವಾಹನ ಕ್ರಾಸಿಂಗ್‌ಗೆ ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಲ್ಲಿನ ಬಸ್ ನಿಲ್ದಾಣವು ಸುಸಜ್ಜಿತ ವಾಗಿದ್ದರೂ, ಹೆದ್ದಾರಿಯ ಎರಡೂ ಬದಿಗಳಲ್ಲಿ ಸಾಗುವ ಬಸ್‌ಗಳಿಗೆ ಸರಾಗವಾಗಿ ನಿಲ್ದಾಣವನ್ನು ಪ್ರವೇಶಿಸುವ ಅವಕಾಶ ಇಲ್ಲದಂತಾಗಿದೆ. ಕೇವಲ ಬೇರೆ ಬೇರೆ ಊರುಗಳಿಂದ ಮಂಗಳೂರಿಗೆ ತೆರಳುವ ಬಸ್‌ಗಳು ಮಾತ್ರ ನಿಲ್ದಾಣ ಪ್ರವೇಶಿಸಿ ಹೋಗುತ್ತಿದ್ದು, ಇದರಿಂದ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗುತ್ತಿಲ್ಲ. ಕೆಎಸ್‌ಆರ್‌ಟಿಸಿ ನಿಲ್ದಾಣದ ಬಳಿ ಸ್ವಲ್ಪ ಮುಂದಕ್ಕೆ ಅಜ್ಜಿಬೆಟ್ಟು ಕ್ರಾಸ್ ಹತ್ತಿರ ಇರುವ ಡಿವೈಡರ್ ಬಳಿ ಬಸ್‌ಗಳು ಕ್ರಾಸ್ ಮಾಡುವುದು ಅಪಾಯಕಾರಿಯಾಗಿದ್ದು, ಅಪಘಾತವನ್ನು ಆಹ್ವಾನಿಸುವಂತಿದೆ. ಹೀಗಾಗಿ ಬಸ್‌ಗಳು ಸುರಕ್ಷಿತವಾಗಿ ತಿರುಗಲು ಹೊಸ ಕ್ರಾಸಿಂಗ್ ವ್ಯವಸ್ಥೆ ಅನಿವಾರ್ಯವಾಗಿತ್ತು.
ಅಪಾಯಕಾರಿ ಕ್ರಾಸಿಂಗ್ !
ಬಿ.ಸಿ.ರೋಡ್‌ನ ನಿಲ್ದಾಣದಿಂದ ಗ್ರಾಮೀಣ ಭಾಗಗಳಿಗೆ ತೆರಳುವ ಬಸ್ ಗಳು ಅಜ್ಜಿಬೆಟ್ಟು ಕ್ರಾಸ್ ಬಳಿಯೇ ಹೆದ್ದಾರಿ ಕ್ರಾಸ್ ಮಾಡಬೇಕಿದ್ದು, ಇದರಿಂದ ಬಹಳ ತೊಂದರೆಯಾಗುತ್ತಿದೆ. ಮಂಗಳೂರು ಭಾಗದಿಂದ ಆಗಮಿಸುವ ವಾಹನಗಳು ವೇಗವಾಗಿ ಬರುವುದರಿಂದ ಅಪಘಾತದ ಸಾಧ್ಯತೆಯೇ ಹೆಚ್ಚಿರುತ್ತದೆ. ಮಂಗಳೂರಿಂದ ಬಿ.ಸಿ.ರೋಡ್ ಮೂಲಕ ದೂರದೂರಿಗೆ ತೆರಳುವ ಬಸ್‌ಗಳು ನಿಲ್ದಾಣಕ್ಕೆ ಹೋಗಬೇಕು ಎಂಬ ಒತ್ತಾಯವಿದ್ದರೂ, ಕ್ರಾಸಿಂಗ್ ಕಾರಣಕ್ಕಾಗಿಯೇ ಅವುಗಳು ಸದ್ಯಕ್ಕೆ ನಿಲ್ದಾಣಕ್ಕೆ ತೆರಳುತ್ತಿಲ್ಲ.
ಆದರೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಿ.ಸಿ.ರೋಡ್ ಡಿಪ್ಪೋದ ಬಸ್‌ಗಳು ನಿಲ್ದಾಣಕ್ಕೆ ಹೋಗಲೇಬೇಕಿದ್ದು, ಆದರೆ ಮಂಗಳೂರಿನಿಂದ ಬಿ.ಸಿ.ರೋಡ್ ಜಂಕ್ಷನ್‌ಗೆ ಆಗಮಿಸಿ ಅಲ್ಲಿ ಬಸ್ ಅನ್ನು ಕ್ರಾಸ್ ಮಾಡಿ ಮತ್ತೆ ನಿಲ್ದಾಣಕ್ಕೆ ಬಂದು ಅಲ್ಲಿಂದ ಅಜ್ಜಿಬೆಟ್ಟು ಕ್ರಾಸ್ ಬಳಿ ಡಿವೈಡರ್ ಕ್ರಾಸ್ ಮಾಡಿ ಹೋಗಬೇಕಿದೆ.
Related Articles
ಇದು ಬಸ್‌ನ ಚಾಲಕರಿಗೂ ತ್ರಾಸದಾಯಕ ಕೆಲಸವಾಗಿದೆ. ಕಳೆದ ವರ್ಷ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರು ಹೆದ್ದಾರಿಯ ಪರಿಶೀಲನೆಗೆ ಆಗಮಿಸಿದ ಸಂದರ್ಭದಲ್ಲಿ ಪ್ರಾಧಿಕಾರದ ಎಂಜಿನಿಯರ್‌ಗಳ ಜತೆ ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ ಆ ಸಂದರ್ಭದಲ್ಲಿ ಎನ್‌ಎಚ್‌ಎಐನ ಯೋಜನಾ ನಿರ್ದೇಶಕರು ಇಲ್ಲದ ಹಿನ್ನೆಲೆ ಯಲ್ಲಿ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಂಡಿರಲಿಲ್ಲ. ಕೆಲವು ತಿಂಗಳ ಹಿಂದೆ ಸಂಸದರು, ಶಾಸಕರು ಅಧಿಕಾರಿಗಳ ಜತೆ ಸಭೆ ನಡೆಸಿ, ಸರ್ಕಲ್ ನಿರ್ಮಾಣಕ್ಕೆ ಉದ್ದೇಶಿತ ಸ್ಥಳ ಪರಿಶೀಲನೆಗೆ ಎನ್‌ಎಚ್ ಎಐನ ಯೋಜನಾ ನಿರ್ದೇಶಕರನ್ನೇ ಕಳುಹಿಸಿದ್ದರು. ಬಿ.ಸಿ.ರೋಡ್‌ನ ಫ್ಲೈಓವರ್ ಈ ಸ್ಥಳದಿಂದ ಅನತಿ ದೂರದಲ್ಲೇ ಹೆದ್ದಾರಿ ಸೇರುವುದರಿಂದ ಫ್ಲೈಓವರ್ ಮುಗಿಯುವ ಸ್ಥಳದಿಂದ 300 ಮೀ. ಅಂತರದೊಳಗೆ ವಾಹನಗಳು
ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ಕ್ರಾಸ್ ಮಾಡಲು ಎನ್‌ಎಚ್‌ಎಐನ ಕಾನೂನಿನಲ್ಲೇ ಅವಕಾಶವಿಲ್ಲ ಎಂದು ಯೋಜನಾ ನಿರ್ದೇಶಕರು ಬೂಡಾ ಅಧ್ಯಕ್ಷರಲ್ಲಿ ಸ್ಪಷ್ಟಪಡಿಸಿದ್ದಾರೆ.
ಬೂಡಾದಿಂದ 25 ಲಕ್ಷ ರೂ.
ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ದಾಣಕ್ಕೆ ಪ್ರವೇಶಿಸಲು ಅನುಕೂಲವಾಗುವ ದೃಷ್ಟಿಯಿಂದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ(ಬೂಡಾ)ದಿಂದ ಸುಸಜ್ಜಿತ ಸರ್ಕಲ್ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ಮೀಸಲಿಟ್ಟು ಒಂದೂವರೆ ವರ್ಷ ಗಳೇ ಕಳೆದಿದೆ. ಆದರೆ ಹೆದ್ದಾರಿಯು ಎನ್‌ಎಚ್‌ಎಐ ವ್ಯಾಪ್ತಿಗೆ ಬರುವುದರಿಂದ ಅನುಮತಿಗಾಗಿ ಕಾಯಲಾಗಿತ್ತು. ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಿದರೂ ಅನುಮತಿ ಮಾತ್ರ ಸಿಕ್ಕಿರಲಿಲ್ಲ.
ಎನ್‌ಎಚ್‌ಎಐ ಅವಕಾಶವಿಲ್ಲ ಎಂದಿದೆ
ಕೆಎಸ್‌ಆರ್‌ಟಿಸಿ ನಿಲ್ದಾಣದ ಮುಂಭಾಗದಲ್ಲಿ ಬೂಡಾದಿಂದ ಸರ್ಕಲ್ ನಿರ್ಮಾಣ ಮಾಡುವುದಕ್ಕೆ 25 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿತ್ತಾದರೂ, ಕಳೆದ ಕೆಲವು ಸಮಯಗಳ ಹಿಂದೆ ಸಂಸದರು ಹಾಗೂ ಶಾಸಕರ ಸೂಚನೆಯಂತೆ ಎನ್ ಎಚ್‌ಎಐನ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕಾನೂನು ಪ್ರಕಾರ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
-ಬಿ. ದೇವದಾಸ್ ಶೆಟ್ಟಿ, ಅಧ್ಯಕ್ಷರು, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ
ಕಿರಣ್ ಸರಪಾಡಿ