Advertisement

ಪಾಣೆಮಂಗಳೂರು ಪೇಟೆ, ನರಿಕೊಂಬು-ದಾಸಕೋಡಿ ರಸ್ತೆಯಲ್ಲಿ ವಾಹನಗಳ ಸಂಚಾರ

09:12 PM Sep 22, 2019 | Team Udayavani |

ಬಂಟ್ವಾಳ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ. ರೋಡ್‌ – ಮೆಲ್ಕಾರ್‌ – ಮಾಣಿ ಮಧ್ಯೆ ಸಾಕಷ್ಟು ಹೊಂಡಗಳು ಕಾಣಿಸಿಕೊಂಡಿರುವ ಕಾರಣ ಪ್ರಸ್ತುತ ಕೆಲವು ವಾಹನಗಳು ಪಾಣೆ ಮಂಗಳೂರು – ಮೆಲ್ಕಾರ್‌, ನರಿಕೊಂಬು – ದಾಸಕೋಡಿ ರಸ್ತೆಯನ್ನು ಬಳಸುತ್ತಿದ್ದು, ಇದು ಪಾಣೆಮಂಗಳೂರು ಪೇಟೆಯಲ್ಲಿ ಸಂಚಾರ ದಟ್ಟಣೆಗೂ ಕಾರಣ ವಾಗುತ್ತಿದೆ.

Advertisement

ಹೆದ್ದಾರಿಯ ಬಿ.ಸಿ. ರೋಡ್‌-ಮಾಣಿ ಮಧ್ಯೆ ಸಾಕಷ್ಟು ಹೊಂಡಗಳಿದ್ದು, ಹೀಗಾಗಿ ವಾಹನಗಳು ಎದ್ದು ಬಿದ್ದು ಸಾಗಬೇಕಿದ್ದು, ಸ್ಥಳೀಯ ವಾಹನದವರು ಹೊಂಡಗಳನ್ನು ತಪ್ಪಿಸುವ ದೃಷ್ಟಿಯಿಂದ ಪರ್ಯಾಯ ರಸ್ತೆಗಳನ್ನು ಬಳಸುತ್ತಿದ್ದಾರೆ. ಹೊಂಡಗಳಿಗೆ ಪೂರ್ತಿ ಮುಕ್ತಿ ಲಭಿಸುವವರೆಗೆ ವಾಹನ ಚಾಲಕರು/ಸವಾರರು ಇದೇ ರಸ್ತೆಯನ್ನು ಬಳಸುವ ಸಾಧ್ಯತೆ ಇದೆ.

ಪಾಣೆಮಂಗಳೂರು ಪೇಟೆಯಲ್ಲಿ ಸಂಚಾರ
ಬಿ.ಸಿ. ರೋಡ್‌ – ಮೆಲ್ಕಾರ್‌ ಮಧ್ಯೆ ಸಾಗುವವರು ಬಿ.ಸಿ. ರೋಡ್‌ನಿಂದ ಗೂಡಿನಬಳಿ ರಸ್ತೆಯಲ್ಲಿ ಸಾಗಿ ಪಾಣೆ ಮಂಗಳೂರು ಪೇಟೆಯ ಮೂಲಕ ಮೆಲ್ಕಾರ್‌ ಸಾಗುತ್ತಿದ್ದಾರೆ. ಇಲ್ಲಿ ರಸ್ತೆ ಕಿರಿದಾಗಿದ್ದರೂ ಸಂಚಾರಯೋಗ್ಯವಾಗಿರುವುದ ರಿಂದ ಚಾಲಕರು/ಸವಾರರು ತಮ್ಮ ವಾಹನಗಳ ಹಿತದೃಷ್ಟಿಯಿಂದ ಕೊಂಚ ತಡವಾದರೂ ಇದೇ ರಸ್ತೆಯನ್ನು ಬಳಸುತ್ತಾರೆ.ಈ ರೀತಿ ಏಕಕಾಲದಲ್ಲಿ ಹೆಚ್ಚಿನ ವಾಹನ ಗಳು ಸಾಗುವುದರಿಂದ ಪಾಣೆಮಂಗಳೂರು ಪೇಟೆಯಲ್ಲಿ ಕೊಂಚ ಮಟ್ಟಿನ ಟ್ರಾಫಿಕ್‌ ಜಾಮ್‌ ಸಂಭವಿಸುತ್ತಿದೆ. ಈ ಪೇಟೆಯು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಸ್ಥಳೀಯ ವಾಹನಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಾಗುತ್ತಿವೆ.

ಹೀಗಾಗಿ ರಸ್ತೆಗಳು ಕಿರಿದಾಗಿ ಪದೇ ಪದೇ ಬ್ಲಾಕ್‌ ಆಗುತ್ತಿದೆ.ಬಂಟ್ವಾಳ ಸಂಚಾರ ಪೊಲೀಸರು ಪಾಣೆಮಂಗಳೂರು ಪೇಟೆಯ ಮೂಲಕ ಲಾರಿಗಳು ಸಹಿತ ಘನ ವಾಹನಗಳು ಸಂಚರಿಸದಂತೆ ಕ್ರಮ ಕೈಗೊಂಡಿದ್ದಾರೆ. ಕಲ್ಲುರ್ಟಿ ದೈವಸ್ಥಾನದ ಬಳಿ ಹಳೆ ಸೇತುವೆ ಸಂಪರ್ಕ, ಪಾಣೆಮಂಗಳೂರು ಪೇಟೆಗೆ ಬಾರದಂತೆ ಮೆಲ್ಕಾರ್‌ನಲ್ಲಿ ಘನ ವಾಹನಗಳನ್ನು ತಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನರಿಕೊಂಬು-ದಾಸಕೋಡಿ ರಸ್ತೆ
ನರಿಕೊಂಬು-ದಾಸಕೋಡಿ ರಸ್ತೆಯ ಕುರಿತು ತಿಳಿದಿರುವ ವಾಹನದವರು ಬಿ.ಸಿ. ರೋಡ್‌-ಮಾಣಿ ಹೆದ್ದಾರಿ ಸಂಚಾರದ ಬದಲು ಪರ್ಯಾಯ ರಸ್ತೆಯಾಗಿ ನರಿಕೊಂಬು ರಸ್ತೆಯಲ್ಲಿ ಸಾಗುತ್ತಿದ್ದಾರೆ. ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಬಳಿ ನರಿಕೊಂಬು ರಸ್ತೆಗೆ ಸಂಚರಿಸಿ, ದಾಸಕೋಡಿಯಲ್ಲಿ ಹೆದ್ದಾರಿ ಯನ್ನು ಸೇರುತ್ತಿದ್ದಾರೆ. ಈ ರಸ್ತೆಯು ಸುಸ್ಥಿತಿ ಯಲ್ಲಿರುವ ಜತೆಗೆ ವಾಹನಗಳ ಸಂಖ್ಯೆ ಕಡಿಮೆ ಇರುವ ವಾಹನ ಸುಗಮವಾಗಿ ಸಾಗುವುದಕ್ಕೆ ಅನುಕೂಲವಾಗಿದೆ.

Advertisement

ಹೆದ್ದಾರಿಯಲ್ಲಿ ಧೂಳಿನ ಸಮಸ್ಯೆ
ಹೆದ್ದಾರಿಯ ಹೊಂಡಗಳಲ್ಲಿ ಜಲ್ಲಿ ಹುಡಿ ಹಾಕುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸೆ. 20, 21ರ ರಾತ್ರಿಯೂ ಪೊಲೀಸರ ನಿರ್ದೇಶನದಂತೆ ಹೆದ್ದಾರಿ ಇಲಾಖೆಯವರು ಜಲ್ಲಿ ಹುಡಿ ಹಾಕುವ ಕಾರ್ಯ ನಡೆಸಿದ್ದಾರೆ. ಆದರೆ ಪ್ರಸ್ತುತ ಮಳೆ ಕೊಂಚ ಕಡಿಮೆಯಾಗಿರುವುದರಿಂದ ಧೂಳಿನ ಸಮಸ್ಯೆ ಸೃಷ್ಟಿಯಾಗಿದೆ. ಆದರೆ ಮಳೆ ಪೂರ್ತಿ ನಿಲ್ಲದೆ ತೇಪೆ ಕಾರ್ಯವನ್ನೂ ನಡೆಸುವಂತಿಲ್ಲ.

 ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ
ಎನ್‌ಎಚ್‌ಎಐನವರ ಮೂಲಕ ರಾಷ್ಟ್ರೀಯ ಹೆದ್ದಾರಿಗಳ ಹೊಂಡ ಮುಚ್ಚುವ ಕಾರ್ಯ ನಡೆಯುತ್ತಿದ್ದು, ಶನಿವಾರ ರಾತ್ರಿಯೂ ಹೊಂಡಗಳನ್ನು ಮುಚ್ಚುವ ಕಾಮಗಾರಿ ನಡೆದಿದೆ. ಹೊಂಡಗಳಿಂದಾಗಿ ಜನರು ಪರ್ಯಾಯ ರಸ್ತೆಗಳನ್ನು ಬಳಸುತ್ತಿದ್ದು, ಪಾಣೆಮಂಗಳೂರು ಪೇಟೆಗೆ ಘನವಾಹನಗಳು ತೆರಳದಂತೆ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಸಂಚಾರಕ್ಕೆ ಯಾವುದೇ ತೊಂದರೆಯಿಲ್ಲ.
 - ರಾಮ ನಾಯ್ಕ ಜಿ.,
ಸಬ್‌ಇನ್ಸ್‌ಪೆಕ್ಟರ್‌, ಸಂಚಾರ ಪೊಲೀಸ್‌ ಠಾಣೆ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next