Advertisement

ಮಹಾರಾಷ್ಟ್ರದಲ್ಲಿ ನೂತನ ವಾಹನಗಳ ನೋಂದಣಿಯಲ್ಲಿ ಶೇ. 15ರಷ್ಟು ಕುಸಿತ

10:02 AM Jan 04, 2020 | Team Udayavani |

ಮುಂಬಯಿ: ವಾಹನ ಉದ್ಯಮದಲ್ಲಿ ಮಂದಗತಿಯ ಸಂಕೇತವೆಂಬಂತೆ, 2019 ರಲ್ಲಿ ಮಹಾರಾಷ್ಟ್ರದಲ್ಲಿ ನೂತನ ವಾಹನಗಳ ನೋಂದಣಿ ಶೇ. 15ರಷ್ಟು ಕುಸಿದಿದ್ದು, ಇದು ಆದಾಯ ಸಂಗ್ರಹಣೆಯ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ರಸ್ತೆ ಸಾರಿಗೆ ಇಲಾಖೆ ಒದಗಿಸಿದ ಅಂಕಿ ಅಂಶಗಳು ತಿಳಿಸಿವೆ.

Advertisement

ಮಹಾರಾಷ್ಟ್ರವು ದೇಶದ ಅತಿದೊಡ್ಡ ವಾಹನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲಾಖೆಯು 2019-20ರ ಆರ್ಥಿಕ ವರ್ಷಕ್ಕೆ ಕಡಿಮೆ ಆದಾಯದ ಗುರಿಯನ್ನು ನಿಗದಿಪಡಿಸಿತ್ತು, ಆದರೆ ನವೆಂಬರ್‌ವರೆಗಿನ ಸ್ಥಿತಿಯನ್ನು ಗಮನಿಸಿದರೆ ಆ ಗುರಿಯನ್ನು ಕೂಡ ಸಾಧಿಸುವುದು ಕಷ್ಟಕರವೆಂದು ತೋರುತ್ತಿದೆ.

ರಾಜ್ಯದ ಉನ್ನತ ಆದಾಯ ಗಳಿಸುವ ಏಜೆನ್ಸಿಗಳಲ್ಲಿ ಒಂದಾದ ರಸ್ತೆ ಸಾರಿಗೆ ಇಲಾಖೆಯು 2015ರ ಆರ್ಥಿಕ ವರ್ಷದಿಂದೀಚೆಗೆ ತನ್ನ ಗುರಿಗಿಂತ ಹೆಚ್ಚಿನ ಆದಾಯವನ್ನು ನೀಡುತ್ತ ಬಂದಿರುವುದು ಇಲ್ಲಿ ಗಮನಿಸುವಂತಹ ವಿಚಾರವಾಗಿದೆ.

2018-19ರ ಸಾಲಿನ 8,672 ಕೋಟಿ ರೂ.ಗಳ ವಿರುದ್ಧ ಇಲಾಖೆಯು 2019-20ರಲ್ಲಿ ವಾಹನ ನೋಂದಣಿ, ತೆರಿಗೆ ಮತ್ತು ಇತರ ಸುಂಕಗಳಿಂದ 8,249 ಕೋಟಿ ರೂ. ಗಳ ಆದಾಯವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ.

2019ರ ನವೆಂಬರ್‌ ಹೊತ್ತಿಗೆ ಅದು ಕೇವಲ 5,466 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಮಾಹಿತಿಯ ಪ್ರಕಾರ, ನೂತನ ವಾಹನಗಳ ನೋಂದಣಿಯಲ್ಲಿ ಶೇ. 15 ರಷ್ಟು ಕುಸಿತ ಕಂಡುಬಂದಿದೆ. 2018ರಲ್ಲಿ 27.14 ಲಕ್ಷ ನೂತನ ವಾಹನಗಳು ನೋಂದಣಿಯಾಗಿದ್ದರೆ, 2019ರಲ್ಲಿ 23.10 ಲಕ್ಷ ವಾಹನಗಳು ನೋಂದಣಿಯಾಗಿವೆ.

Advertisement

ಎಪ್ರಿಲ್‌-ನವೆಂಬರ್‌ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 2,00,000 ಕಡಿಮೆ ವಾಹನಗಳು ನೋಂದಣಿಯಾಗಿವೆ. ಇದು ಇಲಾಖೆಯ ಆದಾಯ ಸಂಗ್ರಹದ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ಸಾರಿಗೆ ಆಯುಕ್ತ ಶೇಖರ್‌ ಚನ್ನೆ ಈ ವಾರದ ಆರಂಭದಲ್ಲಿ ಪಿಟಿಐಗೆ ತಿಳಿಸಿದ್ದಾರೆ.

ಆದರೆ ಇಲಾಖೆಯು ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಗುರಿಯನ್ನು ಸಾಧಿಸುವ ಆಶಯವನ್ನು ಹೊಂದಿದೆ ಎಂದವರು ಹೇಳಿದ್ದಾರೆ.

ನೂತನ ದ್ವಿಚಕ್ರ ವಾಹನಗಳ ನೋಂದಣಿಯಲ್ಲೂ ಇಳಿಕೆ ದಾಖಲಾಗಿದೆ. ಹಿಂದಿನ ವರ್ಷದ 19.69 ಲಕ್ಷ ವಾಹನಗಳ ತುಲನೆಯಲ್ಲಿ 2019ರಲ್ಲಿ ರಾಜ್ಯದಲ್ಲಿ ಕೇವಲ 16.92 ಲಕ್ಷ ನೂತನ ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ ಎಂದು ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಮಾಹಿತಿಯು ತಿಳಿಸಿದೆ.

ನಾಲ್ಕು ಚಕ್ರಗಳ ವಾಹನಗಳ ಮಾರಾಟವು 2018ರ 3.97 ಲಕ್ಷದ ವಿರುದ್ಧ 2019ರಲ್ಲಿ 3.66 ಲಕ್ಷಕ್ಕೆ ಇಳಿದಿದ್ದರೆ, ತ್ರಿಚಕ್ರ ವಾಹನಗಳ ನೋಂದಣಿ ಕೂಡ 2018ರ 1.72 ಲಕ್ಷದ ತುಲನೆಯಲ್ಲಿ 2019ರಲ್ಲಿ 95,808ಕ್ಕೆ ಇಳಿದಿದೆ. ಸಣ್ಣ ಸರಕುಗಳ ವಾಹಕಗಳ ನೋಂದಣಿ 2018ರ 80,063 ರಿಂದ 76,182 ಕ್ಕೆ ಇಳಿದಿದೆ ಎಂದು ಅದು ಬಹಿರಂಗಪಡಿಸಿದೆ. ಅಂಕಿಅಂಶಗಳ ಪ್ರಕಾರ, 11 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯದಲ್ಲಿ 3.53 ಕೋಟಿ ನೋಂದಾಯಿತ ವಾಹನಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next