Advertisement
ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಅಂಗಡಿ, ಮಳಿಗೆಗಳು, ಸರಕಾರಿ ಕಚೇರಿಗಳಿವೆ. ಆದರೆ ಹೆಚ್ಚಿನ ಕಡೆ ಇಲ್ಲಿಗೆ ಬರುವ ಜನರು ವಾಹನ ನಿಲ್ಲಿಸುವುದಕ್ಕೆ ವ್ಯವಸ್ಥೆ ಇಲ್ಲವಾಗಿದೆ. ಇನ್ನು ಪುರಸಭೆಯಿಂದ ಅಂಗಡಿ, ವಾಣಿಜ್ಯ ಮಳಿಗೆಗಳಿಗೆ ಪರವಾನಿಗೆ ನೀಡಲಾಗುತ್ತಿದೆ. ಆದರೆ ಅಂಗಡಿ ಎದುರು ವಾಹನ ನಿಲ್ಲಿಸಲು ಮಾತ್ರ ಜಾಗ ಇರುವುದಿಲ್ಲ. ಒಂದು ವೇಳೆ ನಿಲ್ಲಿಸಿದರೆ ದಂಡ ಬೀಳುತ್ತದೆ. ಕಾರಣ ಅಲ್ಲಿ ಪಾರ್ಕಿಂಗ್‌ಗೆ ಅನುಮತಿ ಇಲ್ಲ.
Related Articles
ಯಾರು ರಸ್ತೆ ಬದಿ ವಾಹನ ನಿಲ್ಲಿಸಿ ಹೋದರೂ ಸಂಚಾರ ಠಾಣೆ ಪೊಲೀಸರು ಬಂದು ದಂಡ ಹಾಕುತ್ತಾರೆ. ಚಕ್ರಕ್ಕೆ ಲಾಕ್ ಹಾಕುತ್ತಾರೆ. ಆದರೆ ನೋ ಪಾರ್ಕಿಂಗ್‌ಗೆ ಸೂಕ್ತ ನೋಟಿಫಿಕೇಶನ್ ಆಗದೆ ವಾಹನ ನಿಲ್ಲಿಸಿದವರ ಮೇಲೆ ಹೇಗೆ ಕೇಸು ಹಾಕುತ್ತಾರೆ ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಉತ್ತರ ಇಲ್ಲ. ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಹೊರತು ಎಲ್ಲಿಯೂ ವಾಹನ ನಿಲ್ಲಿಸಬಾರದು ಎನ್ನುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಾರೆ. ವಾಹನ ನಿಲ್ಲಿಸಲು ಅಂಗಡಿ ಮಾಲಕ ಸಹಾಯ ಮಾಡುವುದು ಮುಖ್ಯ. ಜತೆಗೆ ಆ ಮಾಲಕ ಪುರಸಭೆಗೆ ತೆರಿಗೆ ಕಟ್ಟುವ ಕಾರಣ ವ್ಯಾಪಾರಕ್ಕೆ ಅನುಕೂಲವಾಗುವಂತೆ ಅಲ್ಲಿಗೆ ಬರುವ ಗ್ರಾಹಕರ ವಾಹನ ಇಡಲು ಸ್ಥಳೀಯಾಡಳಿತ ವ್ಯವಸ್ಥೆ ಮಾಡಿಕೊಡುವುದೂ ಅಷ್ಟೇ ಅವಶ್ಯ.
Advertisement
ನಗರದಲ್ಲಿ ಅಡ್ಡಗೋಡೆಯಂತೆ ಫ್ಲೈಓವರ್ ನಿರ್ಮಾಣವಾಗುತ್ತಿದ್ದು ಅದರ ಕೆಳಗೆ ವಾಹನ ನಿಲ್ಲಿಸಲು ಅವಕಾಶ ನೀಡಬೇಕೆಂಬ ಬೇಡಿಕೆ ಇದೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿಯವರು ಒಪ್ಪಿಗೆ ನೀಡುವ ಭರವಸೆ ನೀಡಿ ದ್ದಾರೆ. ಇದಲ್ಲದೇ ಬೇರೆ ಕಡೆಗಳಲ್ಲೂ ಪುರಸಭೆ ಮುತುವರ್ಜಿ ವಹಿಸಿ ಪಾರ್ಕಿಂಗ್‌ಗೆ ಸೂಕ್ತ ಏರ್ಪಾಟು ಮಾಡಿಕೊಡಬೇಕಿದೆ. ಅದು ಪಾವತಿ ಪಾರ್ಕಿಂಗ್ ಆದರೂ ಸರಿಯೇ ಎಂಬಷ್ಟರ ಮಟ್ಟಿಗೆ ಜನ ಈಗಿನ ಅವ್ಯವಸ್ಥೆಗೆ ರೋಸಿ ಹೋಗಿದ್ದಾರೆ. ಮಲ್ಟಿ ಸ್ಟೋರೇಜ್
ದತ್ತಾತ್ರೇಯ ದೇವಸ್ಥಾನ ಬಳಿ ಇರುವ ಜಾಗದಲ್ಲಿ ಮಲ್ಟಿ ಸ್ಟೋರೇಜ್ ಕಟ್ಟಡ ನಿರ್ಮಿಸಿ ಅಲ್ಲಿ ಬಹುಮಹಡಿಗಳಲ್ಲೂ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಿಕೊಡಬೇಕೆಂಬ ಬೇಡಿಕೆಯೂ ಇದೆ. ಇದಕ್ಕೆ ದೊಡ್ಡ ಮೊತ್ತವೂ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಹಣ ವಸೂಲಿ ಮಾಡಿ ನಗರಕ್ಕೆ ಬರುವ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡಬಹುದು. ಆದರೆ ಇಷ್ಟು ದೊಡ್ಡ ಮೊತ್ತದ ಯೋಜನೆ ಮಂಜೂರಾತಿಗೆ ಆಡಳಿತದ ಇಚ್ಛಾಶಕ್ತಿಯೂ ಮುಖ್ಯವಾಗುತ್ತದೆ. ದ್ವಿಚಕ್ರ ವಾಹನ ನಗರದಲ್ಲಿ ಇಟ್ಟು ಉಡುಪಿ, ಮಂಗಳೂರು ಕಡೆಗೆ ಉದ್ಯೋಗಕ್ಕಾಗಿ ಹೋಗುವ ಅನೇಕರಿಗೆ ಇಂತಹ ಪಾರ್ಕಿಂಗ್ ತಾಣಗಳು ಪ್ರಯೋಜನ ತರಬಲ್ಲವು. ಇಕ್ಕಟ್ಟು
ಶಾಸ್ತ್ರಿ ಸರ್ಕಲ್‌ನಿಂದ ಪಾರಿಜಾತ ವೃತ್ತದವರೆಗೆ ದ್ವಿಪಥ ಇದ್ದು ರಸ್ತೆಯ ಬದಿಯಲ್ಲಿ ಸರಿಯಾದ ಮಾರ್ಕಿಂಗ್ ಮಾಡಿದರೆ ಅದರೊಳಗೆ ಗೊಂದಲ ಇಲ್ಲದೆ ವಾಹನ ನಿಲ್ಲಿಸಿದರೆ ತೊಂದರೆಯಾಗದು. ಆದರೆ ಪಾರಿಜಾತ ವೃತ್ತದಿಂದ ಹೊಸ ಬಸ್ ನಿಲ್ದಾಣವರೆಗೆ ವೆಂಕಟ್ರಮಣ ದೇವಸ್ಥಾನ ಮೂಲಕ ಹೋಗುವ ರಸ್ತೆ ತೀರಾ ಇಕ್ಕಟ್ಟಾಗಿದೆ. ಇಲ್ಲೇ ಬಸ್‌ಗಳು, ಲಾರಿಗಳು ಕೆಲ ಕಾಲ ನಿಂತರೆ ಇತರ ವಾಹನಗಳ ಓಡಾಟಕ್ಕೆ ಕಷ್ಟ. ಇನ್ನು ಇತರ ವಾಹನಗಳನ್ನೂ ನಿಲ್ಲಿಸಿದರೆ ಹೇಳುವುದೇಬೇಡ. ಒಳ ರಸ್ತೆಗಳಲ್ಲೂ ಅಡಚಣೆ
ನಗರದ ಮುಖ್ಯ ರಸ್ತೆ ಮಾತ್ರ ಅಲ್ಲ, ಒಳ ರಸ್ತೆಗಳಲ್ಲೂ ಪಾರ್ಕಿಂಗ್ ಸಮಸ್ಯೆ ಇದೆ. ಚಿಕ್ಕನ್ ಸಾಲ್ ರಸ್ತೆ, ಫಿಶ್ ಮಾರ್ಕೆಟ್ ರಸ್ತೆ, ಫೆರ್ರಿ ರಸ್ತೆ, ಸೂರ್ನಳ್ಳಿ ರಸ್ತೆ, ಗುರು ನಾರಾಯಣ ರಸ್ತೆ, ಚರ್ಚ್ ರಸ್ತೆ ಮೊದಲಾದೆಡೆಯೂ ಅಂಗಡಿ ಮತ್ತಿತರ ಕಡೆಗೆ, ಮಾರುಕಟ್ಟೆಗೆ ಬರುವವರಿಗೆ ವಾಹನ ನಿಲ್ಲಿಸುವುದು ಎಲ್ಲ ದಿನ ಸುಲಭದ ಮಾತಲ್ಲ. ಏಕೆಂದರೆ ಇಲ್ಲಿ ಹೆಚ್ಚಿನ ದಿನಗಳಲ್ಲಿ ವಾಹನದಟ್ಟಣೆ ಇದ್ದೇ ಇದೆ.