ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಪತ್ರಗಳು ಇಲ್ಲದೆ ವಾಹನಗಳಲ್ಲಿ ಸಾಗಾಟ ಮಾಡುತ್ತಿದ್ದ ಒಟ್ಟು 4.33 ಲ.ರೂ. ನಗದು ಹಣವನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಂತೂರಿನಲ್ಲಿ 1.10 ಲ.ರೂ.
ಮಾ. 26ರಂದು ರಾತ್ರಿ 7.35ಕ್ಕೆ ಮಂಗಳೂರು ಪೂರ್ವ ಠಾಣಾ ಪೊಲೀಸರು ನಂತೂರು ಪೊಲೀಸ್ ಚೆಕ್‌ಪಾಯಿಂಟ್‌ನಲ್ಲಿ ವಾಹನಗಳನ್ನು ತಪಾಸಣೆ ನಡೆಸುವಾಗ ಇಯಾನ್ ಕಾರಿನ ಹಿಂಬದಿ ಸೀಟಿನಲ್ಲಿ ಕಪ್ಪು ಬಣ್ಣದ ಸ್ಕೂಲ್ ಬ್ಯಾಗ್‌ನಲ್ಲಿ 1.10 ಲ.ರೂ. ಹಣ ಪತ್ತೆಯಾಗಿದೆ. ಕಾರಿನಲ್ಲಿದ್ದ ಕಾಸರಗೋಡಿನ ಅನಿಲ್ (35) ಮತ್ತು ಶಮೀಲ್ (38) ಎಂಬವರನ್ನು ವಿಚಾರಿಸಿದಾಗ ಯಾವುದೇ ದಾಖಲೆಪತ್ರ ಹಾಗೂ ಸಮರ್ಪಕ ಉತ್ತರ ನೀಡಲು ವಿಫಲರಾಗಿದ್ದು, ಹಣವನ್ನು ಸ್ವಾಧೀನಪಡಿಸಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ರಥಬೀದಿಯಲ್ಲಿ 3.23 ಲ.ರೂ.
ನಗರದ ರಥಬೀದಿಯ ಬಳಿ ಮಾ. 27ರಂದು ಸಂಜೆ 5 ಗಂಟೆಗೆ ಉತ್ತರ ಠಾಣಾ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಲ್ಟೋ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ 3,23,600 ರೂ. ನಗದು ಪತ್ತೆಯಾಗಿದೆ. ಕಾರು ಚಾಲಕ ಬಂಟ್ವಾಳ ಅಮ್ಮುಂಜೆ ಮೂಡಾಯಿ ಕೋಡಿಯ ಸಿ.ಎಂ. ಹಝೀಮ್ (21)ನನ್ನು ವಿಚಾರಿಸಿದಾಗ ಆತ ಯಾವುದೇ ದಾಖಲೆ ಪತ್ರ ಇಲ್ಲ ಎಂದು ತಿಳಿಸಿದ್ದಾನೆ. ಆ ಹಣವನ್ನು ತನ್ನ ಚಿಕ್ಕಪ್ಪ ಇಸ್ಮಾಯಿಲ್ ರಥಬೀದಿಯ ಚಿನ್ನದ ಅಂಗಡಿಯೊಂದರಿಂದ ತೆಗೆದು ಕೊಂಡು ಹೋಗಿ ಬಿ.ಸಿ. ರೋಡ್‌ನಲ್ಲಿರುವ ಅವರ ಪತ್ನಿಗೆ ನೀಡುವಂತೆ ತಿಳಿಸಿದ್ದಾರೆ. ಅದರಂತೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಪೊಲೀಸರು ಹಣ, ಕಾರು ಮತ್ತು ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.