Advertisement

ಮೊಬೈಲ್‌ ಟವರಿಗೆ ತರಕಾರಿ ಬಳ್ಳಿ ಹಬ್ಬಿಸಿ ಪ್ರತಿಭಟನೆ

10:11 PM Jun 18, 2019 | mahesh |

ಸುಬ್ರಹ್ಮಣ್ಯ: ಮೊಬೈಲ್‌ ಸೇವೆಯಲ್ಲಿ ವ್ಯತ್ಯಯ ಆಗುತ್ತಿರುವುದಕ್ಕೆ ಬೇಸತ್ತ ಹರಿಹರ ಪಳ್ಳತ್ತಡ್ಕ ಗ್ರಾಮಸ್ಥರು ಮಂಗಳವಾರ ಮೊಬೈಲ್‌ ಟವರಿಗೆ ತರಕಾರಿ ಗಿಡಗಳನ್ನು ಹಬ್ಬಿಸುವ ಮೂಲಕ ವಿನೂತನ ಶೈಲಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

Advertisement

ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ಮೊಬೈಲ್‌ ಟವರ್‌ ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಕಳೆದ 8 ತಿಂಗಳಿಂದ ಸರಿಯಾಗಿ ಕಾರ್ಯಾಚರಿಸುತ್ತಿರಲಿಲ್ಲ. ಇದರಿಂದ ಹರಿಹರ, ಬಾಳುಗೋಡು, ಐನಕಿದು, ಕಲ್ಲೇಮಠ, ಕಲ್ಲೇರಿಕಟ್ಟ, ಮಿತ್ತ ಮಜಲು, ಕಿರಿಭಾಗ ಮೊದಲಾದ ಭಾಗದ ಜನತೆ ತೊಂದರೆ ಅನುಭಸುತ್ತಿದ್ದರು. ಟವರ್‌ನ ಸಿಗ್ನಲ್‌ ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸರಿಯಾಗಿರಲಿಲ್ಲ. ಇದಕ್ಕೆ ಬೇಸತ್ತ ಗ್ರಾಮಸ್ಥರು ಉಪಯೋಗಕ್ಕೆ ಬಾರದ ಮೊಬೈಲ್‌ ಟವರಿಗೆ ತರಕಾರಿ ಗಿಡಗಳನ್ನು ನೆಟ್ಟು ಪ್ರತಿಭಟಿಸಿದರು.

ಶಾಂತಿಯುತ ಪ್ರತಿಭಟನೆ
ಈ ಭಾಗದಲ್ಲಿ ಬಿಎಸ್ಸೆನ್ನೆಲ್‌ ಹೊರತುಪಡಿಸಿ ಬೇರೆ ಖಾಸಗಿ ಮೊಬೈಲ್‌ ಸೇವೆಗಳೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಇಲ್ಲಿರುವ ಏಕಮಾತ್ರ ಸರಕಾರಿ ಸ್ವಾಮ್ಯದ ಮೊಬೈಲ್‌ ಸಿಗ್ನಲ್‌ ದಿನದ ಬಹುತೇಕ ಹೊತ್ತು ಕಣ್ಮರೆಯಾಗುತ್ತಿದೆ. ಮೊದಲೆಲ್ಲ ವಿದ್ಯುತ್ತಿದ್ದಾಗ ಇರುತಿದ್ದ ಸಿಗ್ನಲ್‌ ಪ್ರಸ್ತುತ ಕರೆಂಟಿದ್ದರೂ ಸ್ಥಗಿತಗೊಳ್ಳುತ್ತಿದೆ. ಹೀಗಾಗಿ ಇಲ್ಲಿನ ಟವರ್‌ ಊಟಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಇದರಿಂದ ಬೇಸತ್ತು ಗ್ರಾಮಸ್ಥರು ಅಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆಯಲು ಶಾಂತಿಯುತವಾಗಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಇಲ್ಲಿನ ಮೊಬೈಲ್‌ ಟವರ್‌ ಸೇವೆ ಅಗತ್ಯಕ್ಕೆ ಸಿಗುತ್ತಿಲ್ಲ. ಟವರಿನ ಸಿಗ್ನಲ್‌ ಸರಿಪಡಿಸುವಂತೆ ಎಲ್ಲ ಪ್ರಯತ್ನ ನಡೆಸಿದ ಮೇಲೆಯೂ ಸರಿ ಹೋಗಿಲ್ಲ. ಹೀಗಾಗಿ ನಮ್ಮ ಬೇಡಿಕೆ ಅರಣ್ಯರೋದನವಾಗಿದೆ. ಮುಂದೆ ಬಳಕೆಗೆ ಸಿಗದ ಟವರ್‌ ಸ್ಥಳಾಂತರಕ್ಕೆ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನೆಯಲ್ಲಿದ್ದ ನೂಪ ಮಲ್ಲಾರ ತಿಳಿಸಿದರು.

ಪ್ರತಿಭಟನೆಯಲ್ಲಿ ಮಧುಸೂದನ ಕಾಪಿಕಾಡು, ಸಂತೋಷ ಪಳಂಗಾಯ, ಬಾಲಸುಬ್ರಹ್ಮಣ್ಯ ಎಂ., ಲವ ಮಲ್ಲಾರ, ಕುಸುಮಾಧರ ಐಪಿನಡ್ಕ, ಉಮೇಶ್‌ ಕಜೊjàಡಿ, ಉಲ್ಲಾಸ ಮುಚ್ಚಾರ, ಯೋಗಿಶ್‌ ಮೆತ್ತಡ್ಕ, ಪ್ರಸಾದ್‌ ತಂಟೆಪ್ಪಾಡಿ, ಸೋಮಶೇಖರ ಬಟ್ಟೋಡಿ, ಹವೀನ್‌ ಕಲ್ಲೆಮಠ, ನಂದನ್‌, ಬಾಲಕೃಷ್ಣ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next