ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತರಕಾರಿ ದರ ಸಮರ ದಾಖಲೆಯ ಪ್ರಮಾಣದಲ್ಲಿ ತಾರಕಕ್ಕೇರಿದೆ. ಟೊಮೆಟೋ 100ರ ಗಡಿ ದಾಟಿ ಗ್ರಾಹಕರನ್ನು ಹೈರಾಣಗಿಸಿರುವ ಬೆನ್ನಲೇ, ಒಂದರೆಡು ವಾರಗಳಿಂದ ತರಕಾರಿ ಬೆಲೆ ಗಗನಕ್ಕೇರಿ ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಎರಡು ಮೂರು ವಾರಗಳಿಂದ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಬೆನ್ನಲೇ ಈಗ ಬೀನ್ಸ್, ಶುಂಠಿ, ಹಸಿ ಮೆಣಸಿನ ಕಾಯಿ ಬೆಲೆ ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದಲ್ಲಿ ಹೆಚ್ಚಿಸಿಕೊಂಡು ಗ್ರಾಹಕರನ್ನು ಕಂಗಾಲಾಗುವಂತೆ ಮಾಡುತ್ತಿದೆ. ಮಳೆಗಾಲದಲ್ಲೇ ಅಗತ್ಯವಾದ ತರಕಾರಿ ಬೆಳೆಗಳು ಗಗನಕ್ಕೇರುತ್ತಿರುವುದು ಜನ ಸಾಮಾನ್ಯರ ನಿದ್ದೆಗೆಡಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕೆ.ಜಿ. ಟೊಮೆಟೋ 120, 130 ರು ತಲುಪಿದೆ. ಈಗ ದರ ಏರಿಕೆ ಸರದಿ ಶುಂಠಿ, ಬೀನ್ಸ್ ಹಾಗೂ ಹಸಿಮೆಣಸಿನ ಕಾಯಿ ಸೇರಿದೆ. ಶುಂಠಿ ವಾರದ ಹಿಂದೆ 250ರಿಂದ 300 ರು ಇತ್ತು ಕೆ.ಜಿ.. ಈಗ 300 ರೂ. ಗಡಿ ದಾಟಿದೆ. ಬೀನ್ಸ್ ಕೂಡ 120 ರೂ.ಕೆ.ಜಿ. ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ಮಳೆ ಗಾಲ ದಲ್ಲಿ ಸಾಮಾನ್ಯ ತರಕಾರಿ ಬೆಲೆ ಕಡಿಮೆ ಇರುತ್ತದೆ. ಆದರೆ, ಈ ಬಾರಿ ಮಳೆ ಕೈ ಕೊಟ್ಟಿರುವ ಪರಿಣಾಮ ತರಕಾರಿ ನಿರೀಕ್ಷಿತ ಪ್ರಮಾಣ ದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ. ಜನವರಿ, ಫೆಬ್ರವರಿ ತಿಂಗಳಲ್ಲಿ ಬಿದ್ದ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಿಂದಾಗಿ ರೈತರು ಬೆಳೆದಿದ್ದ ಅಪಾರ ಪ್ರಮಾ ಣದ ತರಕಾರಿ ನೆಲಕಚ್ಚಿದೆ. ಹೀಗಾಗಿ ಮಾರು ಕಟ್ಟೆಯಲ್ಲಿ ತರಕಾರಿ ಬೆಳೆಗಳ ಬೆಲೆ ವಿಪರೀತ ಏರಿಕೆ ಆಗಿವೆ. ಕ್ಯಾರೆಟ್, ಆಲೂಗಡ್ಡೆ, ಹಾಗಲಕಾಯಿ, ಪಡ ವಲಕಾಯಿ, ಹೀರೆಕಾಯಿ ಮತ್ತಿತರ ತರಕಾರಿ ಕೆ.ಜಿ. 50 ರಿಂದ 60 ರೂ. ಮೇಲೆ ಮಾರಾಟವಾಗುತ್ತಿದೆ.
ಶತಕ ಬಾರಿಸಿರುವ ತರಕಾರಿ: ಬೆಲೆಗೆ ಗ್ರಾಹಕರು ಹೈರಾಣು: ಜಿಲ್ಲೆಯ ಮಾರುಕಟ್ಟೆಯಲ್ಲಿ ಸದ್ಯ ಟೊಮೆಟೋ ಕೆ.ಜಿ. 100 ರಿಂದ 110, ಸ್ವಲ್ಪ ಗುಣಮಟ್ಟದ ಟೊಮೆಟೋ 120 ರೂ. ವರೆಗೂ ಮಾರಾಟವಾಗುತ್ತಿದೆ. ಶುಂಠಿ ಅಂತೂ ಕೆ.ಜಿ. ಈಗ 300 ರೂ. ಗಡಿ ದಾಟಿದೆ. ಎರಡು ವಾರಗಳ ಹಿಂದೆ ಶುಂಠಿ ಬರೀ 200ರಿಂದ 250 ರೂ. ಇತ್ತು. ಈಗ ಹೆಚ್ಚಳ ಕಂಡಿದೆ. ಆದೇ ರೀತಿ ಬೀನ್ಸ್ ಕೂಡ ಕೆ.ಜಿ. 100 ರಿಂದ 120ರು ವರೊ ಮಾರಾಟ ಆಗುತ್ತಿದ್ದಂತೆ ಹಸಿ ಮೆಣಸಿನಕಾಯಿ ಕೆ.ಜಿ. 100 ರೂ. ಗಡಿ ದಾಟಿ ಗ್ರಾಹಕರನ್ನು ಹೈರಾಣ ಮಾಡುತ್ತಿದೆ.
ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸದ್ಯ ಸೊಪ್ಪುಗಳು ಮಾತ್ರ ಸಲೀಸು: ಮಾರುಕಟ್ಟೆಯಲ್ಲಿ ಸೊಪ್ಪು ಮಾತ್ರ ಗ್ರಾಹಕರಿಗೆ ಸಲೀಸು ಆಗಿದ್ದು, ಬಡವರ ಹಾಗೂ ಮಧ್ಯವ ವರ್ಗದ ಜನರ ಕೈ ಹಿಡಿದಿದೆ. ತರಕಾರಿ ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ಗ್ರಾಹಕರು ಈಗ ಸೊಪ್ಪು ಕಡೆ ವಾಲಿದ್ದಾರೆ. ವಿವಿಧ ಬಗೆಯ ಪಾಲಕ್, ಮೆಂತೆ ಸೊಪ್ಪು, ದಂಟು, ನಗ್ಗೆ ಸೊಪ್ಪು, ಪುದೀನಾ ಕಟ್ಟು 20 ರೂ.ಗೆ ಮಾರಾಟವಾಗುತ್ತಿದೆ. ಏರಿಕೆ ಆಗಿರುವ ತರಕಾರಿ ಬೆಳೆಗಳಿಗೆ ಹೋಲಿಸಿಕೊಂಡರೆ ಸದ್ಯ ಸೊಪ್ಪುಗಳೇ ಬಡವರ ಕೈ ಹಿಡಿದಿವೆ. ಕೆಲವೊಮ್ಮೆ ಸೊಪ್ಪುಗಳ ಬೆಲೆ ಕಟ್ಟು 30 ರೂ. ಏರಿಕೆ ಆಗಿತ್ತು. ಆದರೆ, ಮಳೆ ಬೀಳುತ್ತಿರುವುದರಿಂದ ಉತ್ಪಾದನೆ ಹೆಚ್ಚಾಗಿದ್ದು, ಕಟ್ಟು 15ರಿಂದ 20 ರೂ.ಗೆ ಮಾರಾಟವಾಗುತ್ತಿವೆ.
ಮಾರುಕಟ್ಟೆಯಲ್ಲಿ ಶುಂಠಿ ದರ ಇಷ್ಟೊಂದು ಬೆಲೆ ಹೆಚ್ಚಳ ಕಂಡಿರುವುದನ್ನು ನಾವು ನೋಡಿರಲಿಲ್ಲ. ಶುಂಠಿ, ಟೊಮೆಟೋ, ಬೀನ್ಸ್ ಹಾಗೂ ಹಸಿ ಮೆಣಸಿನಕಾಯಿ ಸಾಕಷ್ಟು ದುಬಾರಿ ಆಗಿದೆ.
● ಸೌಜನ್ಯ, ಗೃಹಿಣಿ, ಚಿಕ್ಕಬಳ್ಳಾಪುರ
-ಕಾಗತಿ ನಾಗರಾಜಪ್ಪ.