Advertisement

ಗೋಲಗುಂಬಜ,ಪಿಸುಗುಟ್ಟುವ ಗ್ಯಾಲರಿ ವಾಸ್ತು ವಿನ್ಯಾಸ ಕಂಡು ಅಚ್ಚರಿಪಟ್ಟ ಡಾ.ವೀರೇಂದ್ರ ಹೆಗ್ಗಡೆ

09:46 PM Nov 12, 2021 | Team Udayavani |

ವಿಜಯಪುರ: ಧರ್ಮಸ್ಥಳ ಮಂಜುನಾಥೇಶ್ವರ ಶ್ರೀಕ್ಷೇತ್ರದ ಧರ್ಮದರ್ಶಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರು ಜಗದ್ವಿಖ್ಯಾತ ಪಾರಂಪರಿಕ ಗೋಲಗುಂಬಜ ಸ್ಮಾರಕ ವೀಕ್ಷಿಸಿ ಸಂಭ್ರಮಿಸಿದರು.

Advertisement

ಶುಕ್ರವಾರ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಐತಿಹಾಸಿಕ ಗೋಲಗುಂಬಜ ಸ್ಮಾರಕವನ್ನೂ ವೀಕ್ಷಿಸಿದರು.

ಕುಟುಂಬದ ಸದಸ್ಯೆ ಶ್ರಧ್ದಾ ಹೆಗ್ಗಡೆ ಅವರೊಂದಿಗೆ  ಗೋಲಗುಂಬಜ ಸ್ಮಾರಕ ಆವರಣಕ್ಕೆ  ಆಗಮಿಸುತ್ತಲೇ ಡಾ.ಹೆಗ್ಗಡೆ ಅವರು ಸ್ಮಾರಕದ ವಾಸ್ತು ವಿನ್ಯಾಸ ಕಂಡು ಮೂಕ ವಿಸ್ಮಿತರಾದರು.

ನಂತರ ಯಾರ ಸಹಾಯವೂ ಇಲ್ಲದೇ ಯುವಕರಂತೆ ಗುಮ್ಮಟವನ್ನು ಏರಿದ ಡಾ.ಹೆಗ್ಗಡೆ ಅವರು, ತಮ್ಮ ಮೊಬೈಲ್ ನಲ್ಲಿ ಗುಮ್ಮಟದ ಮೇಲಿಂದ ವಿಜಯಪುರ ನಗರದ ಸುಂದರ ನೋಟವನ್ನು ಕುತೂಹಲದಿಂದ ಸೆರೆ ಹಿಡಿದು ಸಂತಸ ವ್ಯಕ್ತಪಡಿಸಿದರು.

ನಂತರ ಗುಮ್ಮಟದಲ್ಲಿ  ಹೊರಹೊಮ್ಮುವ ಸಪ್ತಧ್ವನಿ ಕೇಳಿ, ಬಾಲ್ಯದಲ್ಲಿ ಈ ಸ್ಮಾರಕ ವೀಕ್ಷಣೆಗೆ ಆಗಮಿಸಿದ ನೆನಪಿನ ಬುತ್ತಿ ಬಿಚ್ಚಿದರು.

Advertisement

ಒಂದೇ ಒಂದು ಕಂಬದ ಆಸರೆ ಇಲ್ಲದೇ ವಿಶಿಷ್ಟ ವಿನ್ಯಾಸದಲ್ಲಿ ನಿರ್ಮಿಸಿರುವ ಸ್ಮಾರಕ ಜಾಗತಿಕ ಆಕರ್ಷಣೆ ಆಗಿರುವಲ್ಲಿ ಅಚ್ಚರಿ ಪಡುವಂತಿದೆ ಎಂದರು.

ಎಲ್ಲಕ್ಕಿಂತ ಹೆಚ್ಚಾಗಿ ಗುಮ್ಮಟದ ಗೋಡೆಯ ಗ್ಯಾಲರಿಯ ಕಿಂಡಿಗಳಿಂದ ಹೊರ ಹೊಮ್ಮುವ ಪಿಸುಮಾತಿನ ವಿನ್ಯಾಸದಿಂದ ಹೊರ ಹೊಮ್ಮಿದ ಧ್ವನಿಯನ್ನು ಆಲಿಸಿ ಅಚ್ಚರಿ ವ್ಯಕ್ತಪಡಿಸಿದರು.

ತಾವು ಗುಮ್ಮಟ ವೀಕ್ಷಣೆಗೆ ಬರುವ ಸಂದರ್ಭದಲ್ಲಿ ಗೋಲಗುಂಬಜ ಸಿಬ್ಬಂದಿ, ಪ್ರವಾಸಿ ಮಾರ್ಗದರ್ಶಿಗಳು ಜನರನ್ನು ದೂರ ಸರಿಸುವಾಗ, ನನ್ನಿಂದಾಗಿ ಯಾವ ಪ್ರವಾಸಿಗರಿಗೂ ತೊಂದರೆ ಆಗುವುದು ಬೇಡ. ಅವರು ಕೂಡ ನಮ್ಂಮತೆಯೇ ಸ್ಮಾರಕ ವೀಕ್ಷಣೆಗೆ ಬಂದಿದ್ದಾರೆ. ಹೀಗಾಗಿ ಯಾರಿಗೂ ತಮ್ಮಿಂದ ತೊಂದರೆ ಆಗಬಾರದು ಎಂದು ತಮಗೆ ವಿಶೇಷ ಆದ್ಯತೆ ನೀಡುವುದನ್ನು ನಿರಾಕರಿಸಿ, ಸರಳತೆ ಮೆರೆದರು.

ವಿಜಯಪುರ ಇತಿಹಾಸ, ಗೋಲಗುಮ್ಮಟ ಸ್ಮಾರಕ ನಿರ್ಮಾಣದ ಹಿನ್ನೆಲೆ, ಗುಮ್ಮಟದ ಹೊರತಾಗಿ ವಿಜಯಪುರ ನಗರದಲ್ಲಿ ಶಾಹಿ ಅರಸರು ನಿರ್ಮಿಸಿರುವ ನೂರಾರು ಸ್ಮಾರಕಗಳು ಒಂದಕ್ಕಿಂತ ಒಂದು ವಿಭಿನ್ನ, ವಿಶಿಷ್ಟ ವಾಸ್ತು ವಿನ್ಯಾಸ ಹೊಂದಿರುವುದನ್ನು ಕೇಳಿ ಅಚ್ಚರಿ ವ್ಯಕ್ತಪಡಿಸಿದರು.

ಇದಲ್ಲದೇ ತಮಗೆ ವಿಜಯಪುರ ಇತಿಹಾಸ, ಸ್ಮಾರಕಗಳ ವೈಶಿಷ್ಟ್ಯದ ಕುರಿತು ವಿವರಿಸಿದ ಪ್ರವಾಸಿ ಮಾರ್ಗದರ್ಶಿ ರಾಜಶೇಖರ  ಕಲ್ಯಾಣಮಠ ಅವರ ನಿರೂಪಣಾ ಶೈಲಿಯನ್ನು ಶ್ಲಾಘಿಸಿದ ಧರ್ಮಸ್ಥಳ ಧರ್ಮದರ್ಶಿ ಡಾ.ಹೆಗ್ಗಡೆ ಅವರು, ಶ್ರೀ ಮಠದ ಶಾಲು ನೀಡಿ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next