Advertisement

ಬದುಕಿನ ಬವಣೆಗೆ ಪುರಾಣವೇ ದೀವಿಗೆ: ಡಾ|ವೀರೇಂದ್ರ ಹೆಗ್ಗಡೆ

01:08 AM Jul 18, 2022 | Team Udayavani |

ಬೆಳ್ತಂಗಡಿ: ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಹಿಂದೆ ಪ್ರತಿ ಮನೆಯಲ್ಲಿ ಪುರಾಣ ವಾಚನ ಮಾಡುವ ಸಂಪ್ರದಾಯವಿತ್ತು. ಆದರೆ, ಆಧುನಿಕ ಜೀವನ ಶೈಲಿ ಮತ್ತು ಕೆಲಸದ ಒತ್ತಡದಿಂದ ಸಂಪ್ರದಾಯವೆಲ್ಲ ಮರೆಯಾಗುತ್ತಿದೆ. ನಮ್ಮ ಬದುಕಿನ ಎಲ್ಲ ಸಮಸ್ಯೆಗಳಿಗೆ, ಸವಾಲುಗಳಿಗೆ, ಸಾಂಸಾರಿಕ ತಾಪತ್ರಯಗಳಿಗೆ ಪುರಾಣ ಗಳಿಂದ ಸೌಹಾರ್ದಯುತ ಪರಿಹಾರ ದೊರೆಯುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

Advertisement

ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ರವಿವಾರ ಹಮ್ಮಿಕೊಂಡ 51ನೇ ವರ್ಷದ ಪುರಾಣಕಾವ್ಯ ವಾಚನ – ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನೇಕ ಮಂದಿ ಭಕ್ತರು ತಮ್ಮ ಶಾಪ-ತಾಪ ಪರಿಹಾರಕ್ಕಾಗಿ ಕೌಟುಂಬಿಕ ಸಮಸ್ಯೆಗಳ ಇತ್ಯರ್ಥಕ್ಕಾಗಿ ಧರ್ಮಸ್ಥಳಕ್ಕೆ ಬರುತ್ತಾರೆ. ಮಹಿಳೆಯರು, ಹಿರಿಯರು, ನೊಂದವರ ಕಣ್ಣೀರೇ ಶಾಪವಾಗಿ ಪರಿಣಮಿಸುತ್ತದೆ. ಆದುದರಿಂದ ಪುರಾಣ ವಾಚನ – ಪ್ರವಚನದ ಮೂಲಕ ಜ್ಞಾನ ಸಂಗ್ರಹ ಮಾಡಿ ಸಾಂಸಾರಿಕ ಸಮಸ್ಯೆಗಳಿಗೆ ಪರಿಹಾರ ಪಡೆದು ಶಾಂತಿ – ನೆಮ್ಮದಿಯ ಜೀವನ ನಡೆಸಬಹುದು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಪುರಾಣಕಾವ್ಯ ವಾಚನ -ಪ್ರವಚನ ಉದ್ಘಾಟಿಸಿದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವ ಸ್ಥಾನದ ಲಕ್ಷ್ಮೀ
ನಾರಾಯಣ ಆಸ್ರಣ್ಣರು ಮಾತನಾಡಿ, ಲೋಕದ ಹಿತವೇ ಶ್ರದ್ಧಾ- ಭಕ್ತಿಯಿಂದ ಧರ್ಮದ ಮರ್ಮವನ್ನರಿತು, ಸಾತ್ವಿಕ ರಾಗಿ, ಸಭ್ಯ – ಸುಸಂಸ್ಕೃತ ನಾಗರಿಕರಾಗಿ ಬಾಳಬೇಕೆಂಬುದು. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನಿತ್ಯವೂ ಅಷ್ಟಾವಧಾನ ನಡೆಸುವ ಸಂಪ್ರದಾಯವಿದೆ. ಮುಂದುವರಿದ ಭಾಗವಾಗಿ ಮುಂದೆ ಎಲ್ಲ ತೀರ್ಥ ಕ್ಷೇತ್ರಗಳಲ್ಲಿಯೂ ಪುರಾಣ ವಾಚನ – ಪ್ರವಚನ ನಡೆಯಬೇಕು ಎಂದು ಆಶಿಸಿದರು.

ಧರ್ಮಸ್ಥಳ ಯಕ್ಷಗಾನ ಮೇಳದ ನಿವೃತ್ತ ಕಲಾವಿದ ಕೆ.ಗೋವಿಂದ ಭಟ್‌ ಮಾತನಾಡಿ, ಧರ್ಮಸ್ಥಳಕ್ಕೆ ಭಕ್ತರು ಆರ್ತರಾಗಿ, ಜ್ಞಾನಿಗಳಾಗಿ, ಜಿಜ್ಞಾಸುಗಳಾಗಿ ಕುತೂಹಲದಿಂದ ತಮ್ಮ ಸವåಸ್ಯೆಗಳ ಪರಿಹಾರ ಹಾಗೂ ಶಾಂತಿ ಪಡೆಯಲು ಬರುತ್ತಾರೆ. ಅವರಿಗೆ ಬೇಕಾದ ಸಕಾಲಿಕ ಪರಿಹಾರ ಮತ್ತು ಮಾರ್ಗದರ್ಶನ ಹಾಗೂ ಸುಜ್ಞಾನದ ಬೆಳಕನ್ನು ನೀಡಿ ಸಾರ್ಥಕ ಬದುಕಿಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಹೇಳಿದರು.

Advertisement

ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣರು ಮತ್ತು ನಿವೃತ್ತ ಕಲಾವಿದ ಕೆ.ಗೋವಿಂದ ಭಟ್‌ ಅವರನ್ನು ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಸಮ್ಮಾನಿಸಿದರು. ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್‌ ಸ್ವಾಗತಿಸಿದರು. ಶ್ರೀನಿವಾಸ ರಾವ್‌ ಧರ್ಮಸ್ಥಳ ವಂದಿಸಿದರು.

ಸೆ. 17ರ ವರೆಗೆ ವಾಚನ – ಪ್ರವಚನ
ಪ್ರತಿಯೊಬ್ಬರಿಗೂ ಜ್ಞಾನದಾಹವಿರಬೇಕು. ಧರ್ಮಸ್ಥಳದಲ್ಲಿ ಭಕ್ತರ ಜ್ಞಾನದಾಹ ನಿವಾರಣೆಗಾಗಿ ವಸ್ತು ಸಂಗ್ರಹಾಲಯ, ಕಾರು ಮ್ಯೂಸಿಯಂ, ಉದ್ಯಾನವನ, ತಾಳೆಗರಿ ಸಂಗ್ರಹ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಸೆ. 17ರ ವರೆಗೆ ಪ್ರತಿದಿನ ಸಂಜೆ 6.30ರಿಂದ 8ರ ವರೆಗೆ ಧರ್ಮಸ್ಥಳದಲ್ಲಿ ಪುರಾಣಕಾವ್ಯ ವಾಚನ – ಪ್ರವಚನ ನಡೆಯುತ್ತದೆ ಎಂದು ಡಾ|ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next