Advertisement

ಗದುಗಿಗೆ ಕೀರ್ತಿ ತಂದ ವೀರೇಶ್ವರ ಪುಣ್ಯಾಶ್ರಮ

05:15 PM Jun 19, 2022 | Team Udayavani |

ಗದಗ: ಜಗತ್ತಿನಲ್ಲಿ ಮಾನವ ಹಕ್ಕುಗಳ ಕಲ್ಪನೆ ಬರುವ ಮೊದಲೇ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಿ, ವಿಕಲಚೇತನರಿಗೆ ಸಮಾಜದಲ್ಲಿ ಗೌರವ, ಉದ್ಯೋಗ ಹಾಗೂ ಸ್ವಾಭಿಮಾನಿಯಾಗಿ ಬದುಕಲು ಪ್ರೇರಣೆ, ಶಿಕ್ಷಣ ನೀಡಿದ ಯಾವುದಾದರೂ ಪುಣ್ಯಕ್ಷೇತ್ರವಿದ್ದರೆ ಅದು ಗದುಗಿನ ವೀರೇಶ್ವರ ಪುಣ್ಯಾಶ್ರಮ ಎಂದು ಶಾಸಕ ಡಾ|ಎಚ್‌.ಕೆ. ಪಾಟೀಲ ಹೇಳಿದರು.

Advertisement

ನಗರದ ಪಂ| ಪಂಚಾಕ್ಷರ ಗವಾಯಿಗಳ 78ನೇ ಹಾಗೂ ಡಾ|ಪಂ|ಪುಟ್ಟರಾಜ ಕವಿ ಗವಾಯಿಗಳ 12ನೇ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಶಿವಾನುಭವಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಿಕಲಚೇತನರ ಅಭಿವೃದ್ಧಿ ಬಗ್ಗೆ ಚಿಂತನೆ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಅಂಧ-ಅನಾಥರಿಗೆ ಬದುಕಲು ಕಲಿಸಿಕೊಟ್ಟ ವೀರೇಶ್ವರ ಪುಣ್ಯಾಶ್ರಮ ಗದುಗಿಗೆ ಕೀರ್ತಿಯ ಗರಿ ಮೂಡಿಸಿದೆ. ಅಲ್ಲದೆ, ಕಲ್ಲಯ್ಯಜ್ಜನವರು ಪುಣ್ಯಾಶ್ರಮವನ್ನು ಅಭಿವೃದ್ಧಿಪಡಿಸುವತ್ತ ಐತಿಹಾಸಿಕ ದಾಖಲೆ ಮಾಡಲು ದಾಪುಗಾಲು ಹಾಕಿದ್ದಾರೆ. ಅವರಿಗೆ ಉಭಯ ಗುರುಗಳು ಶಕ್ತಿ ತುಂಬಲಿ ಎಂದು ಹೇಳಿದರು. ಬಹುತೇಕ ಮಠಗಳಿಗೆ ಜಾತಿಯ ಲೇಪನ ಇರುತ್ತದೆ. ಆದರೆ, ಈ ಮಠವನ್ನು ನಮ್ಮ ಮಠ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಮಠವಾಗಿ ಬೆಳೆದಿದೆ. ಅದು ಈ ಮಠದ ಹಿರಿಮೆಯಾಗಿದೆ. ಬೇರೆ ಬೇರೆ ಧರ್ಮಗಳು ಈ ಮಠಕ್ಕೆ ನಡೆದುಕೊಳ್ಳುತ್ತಿರುವುದು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿರುವುದರಿಂದ ವೀರೇಶ್ವರ ಪುಣ್ಯಾಶ್ರಮ ಮಾದರಿಯಾಗಿದೆ ಎಂದರು.

ಡಾ|ತೋಂಟದ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕಣ್ಣಿದ್ದ ಹಾನಗಲ್‌ ಗುರು ಕುಮಾರ ಶ್ರೀಗಳು ಕಣ್ಣಿಲ್ಲದ ಪಂಚಾಕ್ಷರ ಗವಾಯಿಗಳವರಿಗೆ ಗುರುಕೃಪೆ ನೀಡಿ ಗಾನಯೋಗಿಗಳನ್ನಾಗಿಸಿದರು. ಕಷ್ಟಗಳು ಗುರುವಿನ ಕೃಪೆಯಿಂದ ಕರಗುತ್ತವೆ. ಗುರುವಿನ ಕೃಪೆಯಿಂದ ಪಂ. ಪಂಚಾಕ್ಷರ ಗವಾಯಿಗಳು, ಪಂ. ಪುಟ್ಟರಾಜ ಗವಾಯಿಗಳು ಸಾವಿರಾರು ಅಂಧ-ಅನಾಥ ಮಕ್ಕಳ ಬಾಳಿಗೆ ಬೆಳಕಾದರು. ಬಸವಾದಿ ಶರಣರು ಬಿಟ್ಟುಹೋದ ಮೌಲ್ಯಗಳನ್ನು ಉಭಯ ಶ್ರೀಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮೇರು ಪರ್ವತಗಳಂತಾಗಿದ್ದಾರೆ. ನಿಜವಾದ ಭಕ್ತ ಎಂದರೆ ಗುರುಗಳ ಪಾದಕ್ಕೆ ಅಡ್ಡ ಬೀಳುವುದಲ್ಲ. ಆಸೆ ಆಮಿಷಗಳನ್ನು ಬಿಟ್ಟು ಸತ್ಯ ಶುದ್ಧವಾದ ಕಾಯಕ ಮಾಡುವವನೇ ನಿಜವಾದ ಭಕ್ತ ಎಂದು ಹೇಳಿದರು.

ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಯಲಬುರ್ಗಾ ಬಸವಲಿಂಗೇಶ್ವರ ಶಿವಾಚಾರ್ಯರು, ಗುಳೇದಗುಡ್ಡ ಒಪ್ಪತ್ತೇಶ್ವರ ಸಂಸ್ಥಾನಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

Advertisement

ಅಟ್ನೂರ ದಾಸೋಹ ಮಠದ ಪಂಚಾಕ್ಷರ ಶಿವಾಚಾರ್ಯರು, ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಶ್ರೀಗಳು, ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀಗಳು, ಶಿವಾನಂದ ಮಠದ ಸದಾಶಿವಾನಂದ ಶ್ರೀಗಳು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಪಿ.ಸಿ. ಹಿರೇಮಠ, ರಾಜು ರೇವಣಕರ, ಪರಶುರಾಮ ಕಟ್ಟಿಮನಿ, ಫಿರಸಾಬ್‌ ಕೌತಾಳ, ಪರಶುರಾಮ ಬೆಕ್ಕಿನಕಣ್ಣವರ, ಬಿ.ಜಿ. ಅಮ್ಮಿನಭಾವಿ, ಎ.ಎಸ್‌. ಮೃತ್ಯುಂಜಯ ಅಜ್ಜಂಪುರಶೆಟ್ರಾ ಭಾಗವಹಿಸಿದ್ದರು. ಇದೇ ವೇಲೆ ಆಶ್ರಮಕ್ಕೆ ಸಹಾಯ ಸಹಕಾರ ಸಲ್ಲಿಸಿದ ಭಕ್ತಾಧಿಗಳನ್ನು ಸನ್ಮಾನಿಸಲಾಯಿತು.

ನೀಲಮ್ಮ ಸೋಮಪ್ಪ ಉಡಮಕಲ್ಲ ಅವರಿಂದ ಪೂಜ್ಯರಿಗೆ ತುಲಭಾರ ಸೇವೆ ಜರುಗಿತು. ದಿಯಾ ಕೌತಾಳ ಪ್ರಾರ್ಥಿಸಿ, ಸಿದ್ಧೇಶ್ವರಶಾಸ್ತ್ರಿ ಬೂದಿಹಾಳ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next