Advertisement

ಕಾಂಗ್ರೆಸ್‌ ವಿರುದ್ಧ ವೀರಶೈವರು ಕಿಡಿ

02:35 PM Apr 08, 2018 | |

ಹಿರಿಯೂರು: ನಗರದ ತನ್ಯಾಸಿ ಗೌಂಡರ್‌ ಕಲ್ಯಾಣಮಂಟಪದಲ್ಲಿ ಶನಿವಾರ “ಒಂದುಗೂಡಿ ಬನ್ನಿ ನಾಡಸೇವೆಗೆ’ ಶೀರ್ಷಿಕೆ ಅಡಿ ವೀರಶೈವ ಸಮುದಾಯದ ಸಭೆ ನಡೆಯಿತು.

Advertisement

ಹೊಸದುರ್ಗದ ಬಿಜೆಪಿ ಮುಖಂಡ ಲಿಂಗಮೂರ್ತಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯ ಒಡೆದಿದ್ದಕ್ಕೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬುದ್ದಿ ಕಲಿಸಬೇಕು. “ಇವ ನಮ್ಮವ, ಇವ ನಮ್ಮವ’ ಎಂದು ಎಲ್ಲರನ್ನೂ ಅಪ್ಪಿಕೊಳ್ಳುವ ವೀರಶೈವರು ಪ್ರಜ್ಞಾವಂತಿಕೆ ಪ್ರದರ್ಶಿಸಬೇಕು. ಹೊಸದುರ್ಗದಲ್ಲಿ ಗೂಳಿಹಟ್ಟಿ ಶೇಖರ್‌, ಹಿರಿಯೂರಿನಲ್ಲಿ ಪೂರ್ಣಿಮಾ ಅಥವಾ
ಡಿ.ಟಿ. ಶ್ರೀನಿವಾಸ್‌ ಅವರನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ರೈತ ಮುಖಂಡ ಆರನಕಟ್ಟೆ ಶಿವಕುಮಾರ್‌ ಮಾತನಾಡಿ, ಇಷ್ಟೊಂದು ಪ್ರಮಾಣದಲ್ಲಿ ವೀರಶೈವರು ಸೇರಿರುವುದು ಇದೇ ಪ್ರಥಮ. 800 ವರ್ಷಗಳ ಹಿಂದೆಯೇ ಅನ್ನ ಹಾಗೂ ಅಕ್ಷರ ಭಾಗ್ಯ ಕೊಟ್ಟದ್ದು ವೀರಶೈವ ಸಮಾಜ. ನಮ್ಮಲ್ಲಿನ ಒಳ ಪಂಗಡಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ. ಚುನಾವಣೆಗೆ ಮಾತ್ರ ನಮ್ಮ ಒಗ್ಗಟ್ಟು ಸೀಮಿತವಾಗಬಾರದು ಎಂದು ಎಚ್ಚರಿಸಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌ ಮಾತನಾಡಿ, ವೀರಶೈವರು ಎಲ್ಲ ಸಮುದಾಯದವರನ್ನು ಗೌರವದಿಂದ ಕಾಣುತ್ತಾರೆ. ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ 110 ವೀರಶೈವ ಶಾಸಕರಿದ್ದರು. ನಮ್ಮ ಮೇಲೆ ಇತರೆ ಸಮುದಾಯದವರಿಗೆ ಇದ್ದ ಪ್ರೀತಿ,
ವಿಶ್ವಾಸದಿಂದ ಈ ಸಾಧನೆ ಸಾಧ್ಯವಾಗಿತ್ತು. ಈಗ ಈ ಸಂಖ್ಯೆ 45ಕ್ಕೆ ಇಳಿದಿದೆ.

ನಮ್ಮ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದ ಹೊಳಲ್ಕೆರೆ, ಮಾಯಕೊಂಡ, ಸಕಲೇಶಪುರದಂತಹ ಕ್ಷೇತ್ರಗಳನ್ನು ಮೀಸಲು ಕ್ಷೇತ್ರಗಳನ್ನಾಗಿಸಿ ವೀರಶೈವರು ಗೆಲ್ಲದಂತೆ ಮಾಡಲಾಗಿದೆ. ಅಲ್ಲಿಂದ ಆರಂಭವಾದ ಸಮಾಜ ಒಡೆಯುವಿಕೆ ಸಿದ್ದರಾಮಯ್ಯನವರ ಆಡಳಿತದಲ್ಲಿ ತಾರ್ಕಿಕ ಹಂತಕ್ಕೆ ಬಂದಿದೆ ಎಂದು ಆರೋಪಿಸಿದರು. ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಟಿ. ಶಿವಪ್ರಸಾದ್‌ ಮಾತನಾಡಿ, ಇಷ್ಟಲಿಂಗ ಪೂಜೆ ಎಂದರೆ ಏನೆಂದು ತಿಳಿಯದವರು ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ.

Advertisement

ಕೇವಲ ಆರು ತಿಂಗಳಲ್ಲಿ ಇಡೀ ಸಮಾಜವನ್ನು ಕಲುಷಿತಗೊಳಿಸಲಾಗಿದೆ. ನಮ್ಮಲ್ಲಿ ಹಲವು ಒಳಪಂಗಡಗಳು ಇದ್ದರು ವೈವಾಹಿಕ ಸಂಬಂಧಗಳು ನಡೆಯುವ ಮೂಲಕ ಒಗ್ಗೂಡುತ್ತಿದ್ದೇವೆ. ಮೀಸಲಾತಿಗಾಗಿ ಸಮಾಜ ಒಡೆಯುವುದು ಬೇಡ. ಪ್ರತಿಭೆಯ ಮೂಲಕ ಉದ್ಯೋಗ ಪಡೆಯೋಣ. ಮುಂಬರುವ ಚುನಾವಣೆಯಲ್ಲಿ ಪ್ರಜ್ಞಾವಂತ ವೀರಶೈವರು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಉದ್ಯಮಿ ಮಹೇಶ್‌ ಸಭೆ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಜಿ.ಎಸ್‌. ಉಜ್ಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಹನುಮಂತಪ್ಪ, ಶ್ಯಾಮಲಾ ಶಿವಪ್ರಕಾಶ್‌, ಸಂಗಮನಾಥಯ್ಯ, ಮಲ್ಲಿಕಾರ್ಜುನ್‌, ಡಾ| ಸಿದ್ದಪ್ಪ, ಯಶವಂತ್‌ ಮಾತನಾಡಿದರು. ಬಿಜೆಪಿ ಮುಖಂಡರಾದ ಡಿ.ಟಿ. ಶ್ರೀನಿವಾಸ್‌, ಪೂರ್ಣಿಮಾ, ನಿವೃತ್ತ ಡಿವೈಎಸ್ಪಿ ಬಸವರಾಜ, ಎಂ. ಬಸವರಾಜಪ್ಪ, ಸೌಭಾಗ್ಯವತಿದೇವರು, ತಿಪ್ಪೇಸ್ವಾಮಿ, ರಾಜಶೇಖರಯ್ಯ, ಕಾಂತೇಶ್ವರಸ್ವಾಮಿ, ಆರ್‌.ಕೆ. ಸದಾಶಿವಪ್ಪ, ಆರ್‌.ಟಿ. ಬಸವರಾಜ, ಸಿ. ಸಿದ್ದರಾಮಣ್ಣ, ಎಸ್‌.ಟಿ. ಚಿದಾನಂದಪ್ಪ ಇದ್ದರು.

ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ಇಟ್ಟಿದ್ದು ಸಚಿವರಾದ ಎಂ.ಬಿ. ಪಾಟೀಲ್‌ ಹಾಗೂ ವಿನಯ ಕುಲಕರ್ಣಿ. ಸಿದ್ದರಾಮಯ್ಯ
ಮತ್ತೂಮ್ಮೆ ಮುಖ್ಯಮಂತ್ರಿಯಾಗಲು, ಎಂ.ಬಿ. ಪಾಟೀಲ್‌ ಉಪಮುಖ್ಯಮಂತ್ರಿಯಾಗಲು ನಮ್ಮ ಸಮುದಾಯವನ್ನು ಪಡೆಯಬೇಕೇ ಎಂದು ಖಾರವಾಗಿ ಪ್ರಶ್ನಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಮಾಡಿದ ಸಂಚು ಇದು. ಬಿಜೆಪಿಗೆ ಲಿಂಗಾಯತರು ಮತ್ತು ವೀರಶೈವರು ಇಬ್ಬರೂ ಬೇಕು.
ಕೆ.ಎಸ್‌. ನವೀನ್‌, ಬಿಜೆಪಿ ಜಿಲ್ಲಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next