Advertisement

ವೀರಶೈವ ಮಹಾಸಭಾ ಪದಾಧಿಕಾರಿಗಳ ಸಭೆ ಇಂದು

08:03 AM Nov 08, 2017 | |

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರರು ವೀರಶೈವ ಮಹಾಸಭಾ ಹಾಗೂ ಅದಕ್ಕೆ ಸಂಬಂಧಿಸಿದ ನಾಯಕರ ಮೇಲೆ ವೈಯಕ್ತಿಕವಾಗಿ ಆರೋಪ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ವೀರಶೈವ ಮಹಾಸಭಾ, ಆರೋಪ ಮಾಡುವವರಿಗೆ ಎಚ್ಚರಿಕೆ ಸಂದೇಶ ರವಾನಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

Advertisement

ಈ ಸಂಬಂಧ ಚರ್ಚಿಸಲು ಬುಧವಾರ ಮಹಾಸಭೆಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಸಂಸದ ಪ್ರಭಾಕರ ಕೋರೆ ವಿರುದ್ಧ ಬಹಿರಂಗವಾಗಿ ಆರೋಪ ಮಾಡಿರುವ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ನಾಯಕತ್ವ ವಹಿಸಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಹಾಗೂ ಕೂಡಲ ಸಂಗಮ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಜಯ ಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ತಿರುಗಿ ಬೀಳುವ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೊರಟ್ಟಿಗೆ ಜೀವ ಬೆದರಿಕೆ ಪತ್ರ
ಹುಬ್ಬಳ್ಳಿ: ವಿಧಾನ ಪರಿಷತ್‌ ಸದಸ್ಯ, ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರಿಗೆ
ಜೀವ ಬೆದರಿಕೆ ಪತ್ರ ಬಂದಿದೆ. ಅನಾಮಧೇಯ ವ್ಯಕ್ತಿಯೊಬ್ಬರು “ಹತ್ಯೆ ಯತ್ನ ನಡೆದಿದೆ, ಮುನ್ನೆಚ್ಚರಿಕೆ ವಹಿಸುವಂತೆ’ ಪತ್ರ ಕಳುಹಿಸಿ ಎಚ್ಚರಿಸಿದ್ದಾರೆ. ಪತ್ರದಲ್ಲಿ “ಮುಂಬೈನಿಂದ ಐವರು ಶಾರ್ಪ್‌ ಶೂಟರ್‌ಗಳು ನಿಮ್ಮನ್ನು ಹತ್ಯೆ ಮಾಡಲೆಂದೇ ಬಂದಿದ್ದಾರೆ. ಜಾಗೃತರಾಗಿರಿ’ ಎಂದು ಹೇಳಲಾಗಿದೆ. ಪತ್ರ ಕನ್ನಡದಲ್ಲಿ ಬರೆಯಲಾಗಿದೆ. “ನಿಮ್ಮ ಹಿತ ದೃಷ್ಟಿಯಿಂದ ಈ ಮಾಹಿತಿ ನೀಡುತ್ತಿದ್ದೇನೆ, ನಿಮ್ಮ ವಿಧೇಯ’ ಎಂದು ಪತ್ರದಲ್ಲಿ ನಮೂದಿಸಲಾಗಿದೆ. ಪತ್ರ ಹುಬ್ಬಳ್ಳಿಯ ಉಣಕಲ್ಲನಿಂದ ಪೋಸ್ಟ್‌ ಮಾಡಲಾಗಿದೆ ಎನ್ನಲಾಗಿದೆ. ಸೋಮವಾರ 11 ಗಂಟೆ ಸುಮಾರಿಗೆ ಹೊರಟ್ಟಿ ನಿವಾಸಕ್ಕೆ ಪತ್ರ ಬಂದಿದ್ದು, ಅವರ ಕಚೇರಿ ಸಿಬ್ಬಂದಿ ಅದನ್ನು ಹೊರಟ್ಟಿ ಗಮನಕ್ಕೆ ತಂದಿದ್ದಾರೆ. ಹೊರಟ್ಟಿ ಅವರು ಇತ್ತೀಚೆಗೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಯಾವ ಕಾರಣಕ್ಕೆ ಅವರಿಗೆ ಜೀವ ಬೆದರಿಕೆ ಬಂದಿದೆ ಎಂಬುದು ತನಿಖೆಯಿಂದ ತಿಳಿಯ ಬೇಕಿದೆ. “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಅವರು, ಹು.ಧಾ. ಮಹಾನಗರ ಡಿಸಿಪಿ ಬಾಬಾಸಾಬ್‌ ನೇಮಗೌಡ ಅವರಿಗೆ ಪತ್ರ ಒಪ್ಪಿಸಲಾಗಿದೆ ಎಂದರು.

“ಹೊರಟ್ಟಿ ಸಾಕ್ಷ್ಯ ನೀಡಲಿ’
ಹುಬ್ಬಳ್ಳಿ: “ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರು ಆರೋಪವನ್ನು ಆತ್ಮಸಾಕ್ಷಿಯಾಗಿ ಮಾಡಿದ್ದಾರೆಂಬು  ದನ್ನು ತಮ್ಮ ಸುಪುತ್ರನ ತಲೆ ಮೇಲೆ ಕೈಯಿಟ್ಟು ಹೇಳಲಿ. ಅಲ್ಲದೆ, ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನೀಡಲಿ’ ಎಂದು ಬಾಳೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಮಾತ ನಾಡಿ, “ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಹೊರಟ್ಟಿಯವರು ನನ್ನ ಮೇಲೆ ಆರೋಪಗಳನ್ನು ಮಾಡಿದ್ದಾರೆ. ಆರೋಪ ಮಾಡಿದ್ದನ್ನು ತಮ್ಮ ಪುತ್ರನ ತಲೆ ಮೇಲೆ ಕೈಯಿಟ್ಟು, ಇಲ್ಲವೇ ಬಸವಣ್ಣನ ಫೋಟೊ ಮುಟ್ಟಿ ಹೇಳಲಿ. ಹಿಂದೆ ಹೊರಟ್ಟಿ ಯವರೇ ತಮ್ಮ ತೋಟದ ಮನೆಯಲ್ಲಿ ನನ್ನನ್ನು ಹಾಗೂ ಮೂರುಸಾವಿರ ಮಠದ ಸ್ವಾಮೀಜಿಗಳನ್ನು ಕರೆಸಿ, ಮೂರುಸಾವಿರ ಮಠದ ಪೀಠಾಧಿಪತಿಯಾಗಲು ನೀವೇ ಸೂಕ್ತ ಎಂದು ಹೇಳಿದ್ದರಿಂದ ನಾನು ಪೀಠಾಧಿಪತಿಯಾಗಲು ಒಪ್ಪಿಕೊಂಡಿದ್ದೆ. ಅವರು ಮಾಡಿದ ಆರೋಪದಿಂದ ನನಗೆ ಆಘಾತವಾಗಿದೆ’ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೊರಟ್ಟಿ, “ನನ್ನ ಹೇಳಿಕೆಯಿಂದ ದಿಂಗಾಲೇಶ್ವರ
ಸ್ವಾಮೀಜಿಗೆ ಅವಮಾನವಾಗಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಿ’ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next