Advertisement
ಎರಡು ವರ್ಷಗಳ ಹಿಂದೆ ತಿಲಕನಗರ ಠಾಣೆ ವ್ಯಾಪ್ತಿಯ ಡಾ ಮಾಲತಿ ಮಣಿಪಾಲ್ ಆಸ್ಪತ್ರೆಯಲ್ಲಿ ಪತ್ನಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿ ವೈದ್ಯರ ಮೇಲೆಯೇ ಪುತ್ರ ಹದಾನ್ ಜತೆ ಸೇರಿ ಹಲ್ಲೆ ನಡೆಸಿ ಪರಾರಿಯಾಗಿದ್ದ. ಪತ್ತೆಗಾಗಿ ಎರಡು ತಿಂಗಳಿಂದ ವಿಶೇಷ ಕಾರ್ಯಾಚರಣೆ ನಡೆಸಿ ಬಸವನಗುಡಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದ ಈತನನ್ನು ತಿಲಕನಗರ ಠಾಣೆ ಇನ್‌ಸ್ಪೆಕ್ಟರ್ ತನ್ವೀರ್ ನೇತೃತ್ವದ ತಂಡ ಬಂಧಿಸಿದೆ. ಗನ್ ಮುನೀರ್ ವಿರುದ್ಧ ಕೇವಲ ಹಲ್ಲೆ ಆರೋಪ ಮಾತ್ರವಲ್ಲ. ಈತನ ಹಿಂದೆ ಭೂಗತ ಜಗತ್ತಿನ ದೊಡ್ಡ ಕಥೆಯೇ ಇದೆ.
ವಿದೇಶಗಳನ್ನು ಸುತ್ತುತ್ತಿದ್ದ ಮುನೀರ್ ಭಾರತಕ್ಕೆ ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುವವರನ್ನು ಪರಿಚಯಿಸಿಕೊಂಡಿದ್ದ. ಬಿಹಾರ, ನೇಪಾಳದಿಂದ ಬರುತ್ತಿದ್ದ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ರೌಡಿಗಳಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ. ನಗರದಲ್ಲಿ ಶಸ್ತ್ರಾಸ್ತ್ರಕ್ಕೆ ಬೇಡಿಕೆ ಹೆಚ್ಚಾದ್ದಂತೆ ಈತನ ದಂಧೆಯೂ ಸಹ ಜೋರಾಗಿ ನಡೆಯುತ್ತಿತ್ತು. ಇದೇ ಕಾರಣಕ್ಕೆ ಈತನನ್ನು ಸ್ಥಳೀಯ ರೌಡಿಗಳು ಗನ್ ಮುನೀರ್ ಎಂದು ಕರೆಯುತ್ತಿದ್ದರು.
Related Articles
Advertisement
ಎಲ್‌ಟಿಟಿಇ ಸಂಪರ್ಕಕ್ಕೆ ಯತ್ನ ದರೋಡೆ ಪ್ರಕರಣಗಳಲ್ಲಿ ಜೈಲು ಸೇರುತ್ತಿದ್ದ ಮುನೀರ್ ಅಲ್ಲಿದ್ದ ರೌಡಿಗಳನ್ನು ಪರಿಚಯಿಸಿಕೊಳ್ಳುತ್ತಿದ್ದ. ನಂತರ ಹೊರಬಂದು ಅವರನ್ನು ಜಾಮೀನಿನ ಮೇಲೆ ಬಿಡಿಸಿ ಅವರಿಂದಲೇ ಶಸ್ತ್ರಾಸ್ತ್ರ ದಂಧೆಯನ್ನು ಅನಾಯಸವಾಗಿ ಮಾಡುತ್ತಿದ್ದ. ಇದೇ ವೇಳೆ ಶ್ರೀಲಂಕಾದ ಎಲ್‌ಟಿಟಿಇ ಸಂಘಟನೆಯವರ ಜತೆ ಸಂಪರ್ಕ ಹೊಂದಲು ಯತ್ನಿಸಿ ಅವರೊಂದಿಗೆ ಶಸ್ತ್ರಾಸ್ತ್ರ ಮಾರಾಟ ದಂಧೆ ಆರಂಭಿಸಿದ್ದ. ಆದರೆ, ಸಂಪೂರ್ಣವಾಗಿ ಯಶಸ್ವಿಯಾಗಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಡಾ ರಾಜ್‌ಕುಮಾರ್ ಜತೆ ಫೋಟೋ
ಡಾ. ರಾಜ್‌ಕುಮಾರ್ ಅವರನ್ನು ಸತ್ಯಮಂಗಲ ಅರಣ್ಯ ವ್ಯಾಪ್ತಿಯ ರಾಮ್‌ರಾಜ್ ಎಂಬುವರ ಮನೆಯಲ್ಲಿ ವೀರಪ್ಪನ್ ಬಿಟ್ಟು ಹೋಗಿದ್ದ ಸುದ್ದಿ ಆರಂಭದಲ್ಲಿ ತಿಳಿದದ್ದು ಕರ್ನಾಟಕ, ತಮಿಳುನಾಡಿನ ಕೆಲವೇ ಮಂದಿ ಪೊಲೀಸ್ ಅಧಿಕಾರಿಗಳಿಗೆ ಮಾತ್ರ. ಕೂಡಲೇ ಇಡೀ ಪೊಲೀಸ್ ತಂಡ ಆ ಸ್ಥಳಕ್ಕೆ ತೆರಳಿತ್ತು. ಆದರೆ, ಪೊಲೀಸರಿಗೂ ಮೊದಲೇ ಮುನಿರ್‌ಗೆ ವಿಚಾರ ಗೊತ್ತಾಗಿತ್ತು! ಪೊಲೀಸರು ಬರುವ ಹೊತ್ತಿಗಾಗಲೇ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ್ದ ಮುನೀರ್, ಅವರ ಆರೋಗ್ಯ ವಿಚಾರಿಸಿದ್ದ. ಬಳಿಕ ಅವರೊಂದಿಗೆ ಒಂದು ಪೋಟೋ ತೆಗೆಸಿಕೊಂಡಿದ್ದ. ಇದನ್ನೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಿಸಿಕೊಂಡು ಹೀರೋ ಆಗಿದ್ದ. ಪೊಲೀಸ್ ಮಾಹಿತಿದಾರ!
ಇದೇ ಫೋಟೋವನ್ನು ಮುಂದಿಟ್ಟುಕೊಂಡು ಗನ್ ಮುನೀರ್ ತನಗೆ ವೀರಪ್ಪನ್ ಪರಿಚಯವಿದ್ದಾನೆ. ಆತನ ಸಹಚರರು ಗೊತ್ತಿದ್ದಾರೆ. ಆತ ಕಾಡಿನಲ್ಲಿ ಎಲ್ಲೆಲ್ಲಿ ಇರುತ್ತಾನೆ ಎಂದು ಪೊಲೀಸರಿಗೆ ಮಾಹಿತಿ ನೀಡುವ ನೆಪದಲ್ಲಿ ವಿಶ್ವಾಸಗಳಿಸಿಕೊಂಡಿದ್ದ. ವಿಪರ್ಯಾಸವೆಂದರೆ ಇದನ್ನ ನಂಬಿಕೊಂಡು ಒಂದೆರಡು ಬಾರಿ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಯಾರೊಬ್ಬರೂ ಸಿಕ್ಕಿರಲಿಲ್ಲ. ಅಸಲಿಗೆ ಈತ ವೀರಪ್ಪನ್ ಅನ್ನು ಮುಖಾಮುಖೀ ಭೇಟಿಯಾಗಿಲ್ಲ. ಆದರೂ ವರನಟ ಡಾ. ರಾಜ್‌ಕುಮಾರ್ ಬಿಡುಗಡೆಯಲ್ಲಿ ತನ್ನ ಪಾತ್ರವಿದೆ, ವೀರಪ್ಪನ್ ಇರುವ ಮಾಹಿತಿ ನೀಡಿದ್ದೆ ನಾನು ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತ ಎಲ್ಲರ ಮೆಚ್ಚುಗೆಗಳಿಸಲು ಯತ್ನಿಸಿದ್ದ. ಆದರೆ, ಈತನ ಅಸಲಿತನ ಗೊತ್ತಾದ ಕೂಡಲೇ ಪೊಲೀಸರು ದೂರವಿಟ್ಟರು. ಅಷ್ಟೇ ಅಲ್ಲದೇ ಮುನೀರ್‌ನ ಹಿನ್ನೆಲೆ ಸಂಗ್ರಹಿಸಿ ಬಂಧಿಸಲು ಮುಂದಾಗಿದ್ದರು. ವಕೀಲರ ಪರಿಚಯ
ವೀರಪ್ಪನ್ ಅನ್ನು ನೇರವಾಗಿ ನೋಡಿರದ ಮುನೀರ್, ಆತನ ಪರ ವಾದ ಮಂಡಿಸುತ್ತಿದ್ದ ವಕೀಲರನ್ನು ಪರಿಚಯಿಸಿಕೊಂಡಿದ್ದ. ಅವರಿಂದ ವೀರಪ್ಪನ್ ಹೇಗೆಲ್ಲ ಜೀವನ ನಡೆಸುತ್ತಾನೆ. ಹೇಗಿದ್ದಾನೆ ಎಂಬ ಒಂದಷ್ಟು ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತಿದ್ದ. ಇದಕ್ಕೆ ಇನ್ನೊಂದಿಷ್ಟು ಇಲ್ಲದ ವಿಷಯಗಳನ್ನು ಸೇರಿಸಿಕೊಂಡು ಪೊಲೀಸರಿಗೆ ವೀರಪ್ಪನ್ ಬಗ್ಗೆ ಸುಳ್ಳು ಹೇಳುತ್ತಿದ್ದ. ಗನ್ ಮುನೀರ್‌ನಂತಹ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಕ್ರಿಮಿನಲ್ ಆಗಿ ಬೆಳೆಯುತ್ತಾನೆ. 80ರ ದಶದಲ್ಲೇ ಈತನ ವಿರುದ್ಧ ಹತ್ತಾರು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಶಸ್ತ್ರಾಸ್ತ್ರ ಮಾರಾಟ ದಂಧೆಯಲ್ಲಿ ತೊಡಗಿದ್ದು, ಭೂಗತ ಜಗತ್ತಿನ ಜತೆ ನಂಟು ಹೊಂದಿದ್ದ.
-ಸಂಗ್ರಾಮ್ ಸಿಂಗ್, ನಿವೃತ್ತ ಪೊಲೀಸ್ ಅಧಿಕಾರಿ 2015ರಲ್ಲಿ ತಿಲಕನಗರದ ಡಾ ಮಾಲತಿ ಮಣಿಪಾಲ್ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಲ್ಲದೇ, ಈ ಪ್ರಕರಣದಲ್ಲಿ ಸಮನ್ಸ್ ಕೊಡಲು ಹೋದ ಪೇದೆ ಮೇಲೆಯೇ ಹಲ್ಲೆ ನಡೆಸಿದ್ದ. ಈ ಎರಡು ಪ್ರಕರಣಗಳಲ್ಲೂ ಮುನೀರ್ ಬಂಧನಕ್ಕಾಗಿ ಹುಡುಕಾಟ ನಡೆಯುತ್ತಿತ್ತು. ಇದೀಗ ತಿಲಕನಗರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
-ಡಾ ಬೋರಲಿಂಗಯ್ಯ, ಡಿಸಿಪಿ ಆಗ್ನೇಯ ವಿಭಾಗ * ಮೋಹನ್ ಭದ್ರಾವತಿ