Advertisement

ಕಾಂಗ್ರೆಸ್‌ ಗೆಲುವಿಗೆ ಪೂರಕ ವಾತಾವರಣ: ವೀರಪ್ಪ ಮೊಯ್ಲಿ

01:18 AM Mar 06, 2023 | Team Udayavani |

ಮಂಗಳೂರು: ರಾಜ್ಯ ಸರಕಾರದ ಭ್ರಷ್ಟಾಚಾರದಿಂದ ಜನತೆ ಬೇಸತ್ತು ಸರಕಾರದ ಬದಲಾವಣೆಗಾಗಿ ಕಾಯುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬರುವ ಎಲ್ಲ ಲಕ್ಷಣಗಳು ಕಂಡುಬರುತ್ತಿದ್ದು, ಗ್ರೌಂಡ್‌ ರಿಪೋರ್ಟ್‌ ಕೂಡ ಕಾಂಗ್ರೆಸ್‌ ಪರವಾಗಿದೆ ಎಂದು ಎಐಸಿಸಿ ಕೇಂದ್ರ ಚುನಾವಣ ಸಮಿತಿ ಸದಸ್ಯ, ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯ್ಲಿ ಅಭಿಪ್ರಾಯ ಪಟ್ಟಿದ್ದಾರೆ.

Advertisement

ರಾಜ್ಯದಲ್ಲಿ ಕಮಿಷನ್‌ ದಂಧೆ ವ್ಯಾಪಕವಾಗಿದ್ದು, ಮಠಗಳಿಗೆ ಅನುದಾನ ಬಿಡುಗಡೆಗೂ ಕಮಿಷನ್‌ ಕೇಳುವ ಬಗ್ಗೆ ಸ್ವಾಮೀಜಿಗಳೇ ಬಹಿ ರಂಗಪಡಿಸಿದ್ದಾರೆ. ಇತ್ತೀಚೆಗೆ ಉಪ್ಪಿನಂಗಡಿ ಬಳಿಯ ದೇವಸ್ಥಾನ ಸಮಿತಿಯವರು ದೇಗುಲದ ಅಭಿವೃದ್ಧಿಗೆ ಸಂಬಂಧಿಸಿ ಸಿಎಂ ಬಳಿಗೆ ಹೋಗಿದ್ದರು.

ಆದರೆ ಅವರಿಗೆ ಅನುದಾನ ಲಭ್ಯವಾಗದೆ ವಾಪಸಾಗಿದ್ದರು. ಈ ವೇಳೆ ಅವರಿಗೆ ಕರೆಯೊಂದು ಬಂದಿದ್ದು, ಕರೆ ಮಾಡಿದಾತ ಶೇ. 20 ಕಮಿಷನ್‌ ಕೊಟ್ಟರೆ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದು ರವಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಭ್ರಷ್ಟಾಚಾರದಲ್ಲಿ ಕರಾವಳಿ ಶಾಸಕರು
ದ.ಕ.-ಉಡುಪಿ ಜಿಲ್ಲೆಯ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿಸಿ ಕೊಂಡಿರುವ ಉದಾಹರಣೆಗಳು ಇಲ್ಲಿಯ ವರೆಗೆ ಇರಲಿಲ್ಲ. ಆದರೆ ಈಗ ಭ್ರಷ್ಟಾಚಾರದಲ್ಲಿ ಇಲ್ಲಿಯ ಬಿಜೆಪಿ ಶಾಸಕರ ಹೆಸರೂ ಕೇಳಿಬರುತ್ತಿದೆ ಎಂದು ಹೆಸರು ಹೇಳದೆ ಆರೋಪಿಸಿ ದರು. ಕಾಂಗ್ರೆಸ್‌ ಅಧಿಕಾರ ಪಡೆದ ತತ್‌ಕ್ಷಣ ಈ ಸರಕಾರದ ಅವಧಿಯ ಎಲ್ಲ ಹಗರಣಗಳನ್ನು ತನಿಖೆಗೆ ಒಳ ಪಡಿಸಲಾಗುವುದು ಎಂದರು.

ತಿಂಗಳೊಳಗೆ ಮೊದಲ ಪಟ್ಟಿ ಬಿಡುಗಡೆ
ಕೆಪಿಸಿಸಿ ಅಭ್ಯರ್ಥಿಗಳ ಪಟ್ಟಿ ಅಂತಿಮಪಡಿಸಿದ್ದು, ಮಾ. 7-8ರಂದು ನಡೆಯಲಿರುವ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ಅಂತಿಮಪಡಿಸಿ, ಕೇಂದ್ರ ಚುನಾವಣ ಸಮಿತಿಗೆ ರವಾನೆ ಯಾಗ ಲಿದೆ. ತಿಂಗಳೊಳಗೆ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದರು.

Advertisement

ಇತಿಹಾಸ ಪ್ರಜ್ಞೆಯಿಲ್ಲ
ಅಮಿತ್‌ ಶಾ ಜಿಲ್ಲೆಗೆ ಬಂದಾಗ “ಟಿಪ್ಪು ಬೇಕಾ, ಅಬ್ಬಕ್ಕ ಬೇಕಾ’ ಎಂದು ಕೇಳಿದ್ದರು. ಅವರಿಗೆ ಇತಿಹಾಸ ಪ್ರಜ್ಞೆ ಯಿಲ್ಲ, ಅಬ್ಬಕ್ಕನ ಸೈನಿಕರು ಬ್ಯಾರಿಗಳು ಮತ್ತು ಮೊಗವೀರರು ಆಗಿದ್ದರು. ವಾರಣಾಸಿ ಸುಬ್ರಾಯ ಭಟ್ಟರು ಕ್ಯಾಂಪ್ಕೋ ಸ್ಥಾಪನೆ ಮಾಡಿದ್ದು ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ. ಆದರೆ ಬಿಜೆಪಿಯವರು ಕ್ಯಾಂಪ್ಕೋ ವನ್ನು ಹೈಜಾಕ್‌ ಮಾಡಿದ್ದಾರೆ ಎಂದು ಆರೋಪಿಸಿದರು.

ಅತೃಪ್ತಿ ತಾಂಡವ
ಕೇಂದ್ರದಿಂದ 8 ವರ್ಷಗಳಲ್ಲಿ ರಾಜ್ಯಕ್ಕೆ ನಯಾ ಪೈಸೆ ವಿಶೇಷ ಅನುದಾನ ಬಂದಿಲ್ಲ. ಕಾಂಗ್ರೆಸ್‌ ಅವಧಿಯಲ್ಲಿ 26 ಕೋಟಿ ಮಂದಿ ಬಡತನ ರೇಖೆಯಿಂದ ಮೇಲಕ್ಕೆ ಬಂದಿದ್ದರು, ಆದರೆ ಈಗ ಮತ್ತೆ ಅವರನ್ನು ಬಡತನ ರೇಖೆಯೊಳಗೆ ದಬ್ಬಲಾಗಿದೆ. ದೇಶದಲ್ಲಿ ಅತೃಪ್ತಿ ತಾಂಡವವಾಡುತ್ತಿದ್ದು, ಅದು ಸ್ಫೋಟ  ವಾದರೆ ಅಲ್ಲೋಲಕಲ್ಲೋಲ ವಾಗ ಬಹುದು ಎಂದು ಎಚ್ಚರಿಸಿದರು.
ಮುಖಂಡರಾದ ಅಭಯಚಂದ್ರ, ಐವನ್‌ ಡಿ’ಸೋಜಾ, ಶಶಿಧರ ಹೆಗ್ಡೆ, ನವೀನ್‌ ಡಿ’ಸೋಜಾ, ವಿಶ್ವಾಸ್‌ದಾಸ್‌, ಪ್ರಕಾಶ್‌ ಸಾಲ್ಯಾನ್‌, ಡಿ.ಕೆ. ಅಶೋಕ್‌, ವಿವೇಕ್‌ರಾಜ್‌, ನಝೀರ್‌ ಬಜಾಲ್‌ ಇದ್ದರು.

ಗೆಲುವಿಗೆ ಸಂಘಟಿತ ಪ್ರಯತ್ನ: ಸೂಚನೆ
ಮಂಗಳೂರು: ಪಕ್ಷದ ಹೈಕಮಾಂಡ್‌ ಅಂತಿಮಗೊಳಿಸುವ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಎಲ್ಲ ಮುಖಂಡರೂ ಸಂಘಟಿತರಾಗಿ ಪ್ರಯತ್ನ ಮಾಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸನ್ನು ಮತ್ತೆ ಆಡಳಿತಕ್ಕೆ ತರಬೇಕು ಎಂದು ಎಐಸಿಸಿ ಕೇಂದ್ರ ಚುನಾವಣ ಸಮಿತಿ ಸದಸ್ಯ ಡಾ| ಎಂ. ವೀರಪ್ಪ ಮೊಲಿ ಸೂಚನೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ನಗರದ ಖಾಸಗಿ ಹೊಟೇಲ್‌ನಲ್ಲಿ ರವಿವಾರ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಟಿಕೆಟ್‌ ಆಕಾಂಕ್ಷಿಗಳು ಮತ್ತು ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವಾಗಿರುವುದರಿಂದ ಸಹಜವಾಗಿ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಎಲ್ಲರಿಗೂ ಅವಕಾಶ ಸಿಗುವುದು ಕಷ್ಟ. ಆದ್ದರಿಂದ ಯಾರನ್ನು ಅಂತಿಮಗೊಳಿಸಲಾಗುವುದೋ ಅವರ ಪರ ಇತರರು ಶೇ.100ರಷ್ಟು ಕೆಲಸ ಮಾಡಬೇಕು. ಸರಕಾರ ರಚನೆಯಾದ ಬಳಿಕ ವಿವಿಧ ಮಂಡಳಿ, ನಿಗಮಗಳಲ್ಲಿ ಸ್ಥಾನ ಪಡೆಯವ ಅವಕಾಶವಿದೆ. ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದರು.

ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ, ಮಾಜಿ ಶಾಸಕರಾದ ಜೆ.ಆರ್‌. ಲೋಬೊ, ಮೊದಿನ್‌ ಬಾವಾ, ಮುಖಂಡ ಮಿಥುನ್‌ ರೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next