ಕುಂದಾಪುರ: ಯುಪಿಎ ಅವಧಿಯಲ್ಲಿ ಬರ ಪರಿಹಾರ ಒಂದು ಪೈಸೆ ಕೂಡ ಬಾಕಿ ಇಟ್ಟಿರಲಿಲ್ಲ. ಮನಮೋಹನ್ ಸಿಂಗ್ ಅವರೊಂದಿಗೆ ನಾವೆಲ್ಲ ಒಟ್ಟುಗೂಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದೆವು. ಆಗ ನಾವು ಕೊಟ್ಟಿಲ್ಲ ಅಂತ ಈಗ ನಾವು ಕೇಳುವಾಗ ಅಶೋಕ್‌ರಿಗೆ ನೆನಪಾಯಿತಾ? ಎಂಆರ್‌ಪಿಎಲ್ ಸ್ಥಾಪಿಸಿದ್ದು ನಾವು, ಪೆಟ್ರೋಲಿಯಂ ಸಚಿವರಾಗಿದ್ದಾಗ 80 ಸಾವಿರ ಕೋ.ರೂ. ನೀಡಿ ಅದರ ವಿಸ್ತರಣೆ ಮಾಡಿದ್ದೇವೆ. ಇಂತಹ ಒಂದು ಯೋಜನೆ ಬಿಜೆಪಿಯವರು ಮಾಡಿದ್ದಾರಾ ? ಭದ್ರಾವತಿಯ ವಿಶ್ವೇಶ್ವರಯ್ಯ ಕಾರ್ಖಾನೆ ಇವರ ಕಾಲದಲ್ಲಿ ಮುಚ್ಚಿ ಹೋಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಆರೋಪಿಸಿದರು.
ಬೈಂದೂರು ಕ್ಷೇತ್ರದ ಹೆಮ್ಮಾಡಿಯಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮ ಕಾಲದಲ್ಲಿ ಬಡಮಕ್ಕಳಿಗೆ ಅನುಕೂಲವಾಗಲೆಂದು ಸಿಇಟಿ ತಂದಿದ್ದೇವು. ಆದರೆ ಈಗ ನೀಟ್ ಮಾಡಿದ ಮೇಲೆ ಸುಮಾರು 19 ಸಾವಿರ ಸೀಟುಗಳು ಹೊರರಾಜ್ಯದ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ರಾಜ್ಯದ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂದವರು ಹೇಳಿದರು.
ಕರಾವಳಿಯಲ್ಲಿಯೂ ಈ ಬಾರಿ ಕಾಂಗ್ರೆಸ್‌ಗೆ ವಿಶೇಷವಾದ ಅನುಕೂಲಕರ ಪರಿಸ್ಥಿತಿಯಿದೆ. ಎರಡೂ ಕಡೆಗಳಲ್ಲಿಯೂ ನಾವು ಗೆಲ್ಲುತ್ತೇವೆ. ಚುನಾವಣೆ ನಡೆದ 14 ಕಡೆಗಳ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ. ಮೋದಿ ವಿರುದ್ಧ ಜನರು ರೋಸಿ ಹೋಗಿದ್ದು, ರಾಜ್ಯದಲ್ಲಿ 28ರಲ್ಲಿ ಹೆಚ್ಚಿನ ಸೀಟುಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ.
ಕೇಂದ್ರದಲ್ಲಿಯೂ ಈ ಬಾರಿ ಐಎನ್‌ಡಿಐಎ ಒಕ್ಕೂಟದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತಂತೆ ಸರಕಾರ ತನಿಖೆಗೆ ಆದೇಶಿಸಿದೆ. ಯುಪಿಎ ಕಾಲದಲ್ಲಿ 3 ಲಕ್ಷ ಮಹಿಳಾ ದೌರ್ಜನ್ಯದ ಕೇಸು ಇತ್ತು. ಆದರೆ ಈಗ ಅದು 5 ಲಕ್ಷಕ್ಕೆ ಏರಿಕೆಯಾಗಿದೆ. ಇದೇನಾ ಭೇಟಿ ಪಡಾವೋ ಭೇಟಿ ಬಚಾವ್ ಅಂದ್ರೆ ? ಇವರ ಅವಧಿಯಲ್ಲಿ ಮಹಿಳಾ ದೌರ್ಜನ್ಯ ಮೀತಿ ಮೀರುತ್ತಿದೆ. ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ಮಹಿಳಾ ದೌರ್ಜನ್ಯ ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದವರು ಆರೋಪಿಸಿದರು.
ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಸುರೇಂದ್ರ ಶೆಟ್ಟಿ ಮತ್ತಿತರರಿದ್ದರು.