Advertisement

ವೀರಪ್ಪ ಮೊಯ್ಲಿ ಹ್ಯಾಟ್ರಿಕ್‌ ಗೆಲುವಿನ ಕನಸು ನುಚ್ಚುನೂರು

12:46 AM May 24, 2019 | Team Udayavani |

ಚಿಕ್ಕಬಳ್ಳಾಪುರ: ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಮಲ ಅರಳುವ ಮೂಲಕ ದಶಕಗಳ ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಂಡಿದ್ದು, ಸತತ ಎರಡು ಬಾರಿ ಕ್ಷೇತ್ರದ ಸಂಸದರಾಗಿದ್ದ ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಅವರ ಹ್ಯಾಟ್ರಿಕ್‌ ಗೆಲುವಿನ ಕನಸು ಮೋದಿ ಅಲೆಯಲ್ಲಿ ನುಚ್ಚುನೂರಾಗಿದೆ.

Advertisement

2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ವಿರುದ್ದ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 9,520 ಅಲ್ಪಮತಗಳ ಅಂತರದಿಂದ ಪರಾಜಿತಗೊಂಡಿದ್ದ ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡ ಈ ಬಾರಿ ಬರೋಬ್ಬರಿ 1,81, 079 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸುವ ಮೂಲಕ ರಾಜ್ಯದ ಆಡಳಿತರೂಢ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಕೂಟಕ್ಕೆ ಭಾರೀ ಮುಖಭಂಗ ಉಂಟು ಮಾಡಿದ್ದಾರೆ.

ಲೋಕಸಭಾ ಕ್ಷೇತ್ರದಲ್ಲಿರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ 1 ಕ್ಷೇತ್ರದಲ್ಲಿ (ಯಲಹಂಕ) ಬಿಜೆಪಿ ಶಾಸಕರು ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 5, ಜೆಡಿಎಸ್‌ನ ಇಬ್ಬರು ಶಾಸಕರಿದ್ದರು. ಆದರೂ ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ ಮೋದಿ ಅಲೆಯಲ್ಲಿ ಗೆಲುವಿನ ದಡ ಸೇರಿ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರನ್ನು ಭಾರೀ ಮತಗಳ ಅಂತರದಿಂದ ಹೀನಾಯವಾಗಿ ಸೋಲಿಸುವ ಮೂಲಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಈ ಹಿಂದೆ ಕ್ಷೇತ್ರದಲ್ಲಿ ಮೂರು ಬಾರಿ ಸತತವಾಗಿ ಕಾಂಗ್ರೆಸ್‌ನಿಂದ ವಿ.ಕೃಷ್ಣರಾವ್‌ ಹಾಗೂ ಆರ್‌.ಎಲ್‌.ಜಾಲಪ್ಪ ಸಂಸದರಾಗಿದ್ದರು. ಈ ಬಾರಿ ಕೂಡ ಮೊಯ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯೊಂದಿಗೆ ಚುನಾವಣಾ ಅಖಾಡ ಎದರುಸಿದ್ದರು. ಅಲ್ಲದೇ ಜೆಡಿಎಸ್‌ ಮೈತ್ರಿ ಬಲ ಕೂಡ ತಮ್ಮ ಗೆಲುವಿಗೆ ಸಹಕಾರಿಯಾಗಲಿದೆಯೆಂದು ಭಾವಿಸಿದ್ದರು.

ಆದರೆ ಸುನಾಮಿಯಂತೆ ಮೂಡಿ ಬಂದ ಮೋದಿ ಅಲೆ ಹಾಗೂ ಕಳೆದ ಬಾರಿ ಅಲ್ಪಮತಗಳ ಅಂತರದಿಂದ ಬಿ.ಎನ್‌.ಬಚ್ಚೇಗೌಡ ಸೋತ ಅನುಕಂಪ ಬಿಜೆಪಿ ಗೆಲುವಿಗೆ ಕಾರಣವಾಗಿದೆ. ವಿಶೇಷವಾಗಿ ಬಚ್ಚೇಗೌಡರಿಗೆ ಕ್ಷೇತ್ರದ ಒಕ್ಕಲಿಗ ಮತಗಳು ಕೈಹಿಡಿದ ಹಿನ್ನೆಲೆಯಲ್ಲಿ ಬಿಜೆಪಿ ಅಮೋಘ ಜಯ ಸಾಧಿಸಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಹೊಸ ದಾಖಲೆ ಸೃಷ್ಠಿಸಿದೆ.

Advertisement

ರಾಷ್ಟ್ರಕ್ಕೆ ಮತ್ತೂಮ್ಮೆ ಮೋದಿ, ಚಿಕ್ಕಬಳ್ಳಾಪುರಕ್ಕೆ ಬಚ್ಚೇಗೌಡ ಬೇಕೆಂದು ತಿರ್ಮಾನಿಸಿ ಕ್ಷೇತ್ರದ ಮತದಾರರು ನಿರೀಕ್ಷೆ ಮೀರಿ ನನಗೆ ಅಶೀರ್ವಾದ ಮಾಡಿದ್ದಾರೆ.
-ಬಿ.ಎನ್‌.ಬಚ್ಚೇಗೌಡ ವಿಜೇತ ಅಭ್ಯರ್ಥಿ

ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡರಿಗೆ ಶುಭ ಕೋರುವೆ. ಕ್ಷೇತ್ರದ ಮತದಾರರ ತೀರ್ಪಿಗೆ ತಲೆಬಾಗಿ ಸೋಲು ಒಪ್ಪಿಕೊಳ್ಳುವೆ.
-ಎಂ.ವೀರಪ್ಪ ಮೊಯ್ಲಿ, ಪರಾಜಿತ ಅಭ್ಯರ್ಥಿ

ಚಿಕ್ಕಬಳ್ಳಾಪುರ
-ವಿಜೇತರು ಬಿ.ಎನ್‌.ಬಚ್ಚೇಗೌಡ (ಬಿಜೆಪಿ)
-ಪಡೆದ ಮತ 5,63,396
-ಗೆಲುವಿನ ಅಂತರ 1.81.079
-ಎದುರಾಳಿ ಎಂ.ವೀರಪ್ಪ ಮೊಯ್ಲಿ (ಕಾಂಗ್ರೆಸ್‌)
-ಪಡೆದ ಮತ 7,44,475

ಗೆಲುವಿಗೆ 3 ಕಾರಣ
-ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ
-ಬಿ.ಎನ್‌.ಬಚ್ಚೆಗೌಡ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಅನುಕಂಪ
-ಕ್ಷೇತ್ರದ ಒಕ್ಕಲಿಗ ಮತಗಳ ಧ್ರುವೀಕರಣ

ಸೋಲಿಗೆ 3 ಕಾರಣ
-ಕ್ಷೇತ್ರದಲ್ಲಿ ಪ್ರಭಾವಿ ಒಕ್ಕಲಿಗ ಮತಗಳ ವಿಭಜನೆ
-ಕಾಂಗ್ರೆಸ್‌, ಜೆಡಿಎಸ್‌ ನಾಯಕರ ವೈಮನಸ್ಸು
-ಕ್ಷೇತ್ರಕ್ಕೆ ನೀರಾವರಿ ತರಲಿಲ್ಲ ಎಂಬ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next