Advertisement

ವೇದವ್ಯಾಸ್‌ ದೂರದೃಷ್ಟಿಯಿಂದ ನಗರ ಅಭಿವೃದ್ಧಿಯ ಅಡಿಪಾಯ ಗಟ್ಟಿ: ಪ್ರೇಮಾನಂದ ಶೆಟ್ಟಿ

03:34 PM May 09, 2023 | Team Udayavani |

ಮಂಗಳೂರು: ಶಾಸಕ ವೇದವ್ಯಾಸ ಕಾಮತ್‌ ಅವರು ಕಳೆದ ಐದು ವರ್ಷದ ಅವಧಿಯಲ್ಲಿ ತಮ್ಮ ದೂರದೃಷ್ಟಿ ಕಾರ್ಯಕ್ರಮಗಳ ಮೂಲಕ ನಗರ ಅಭಿವೃದ್ಧಿ ಯೋಜನೆಗೆ ಅಡಿಪಾಯ ಗಟ್ಟಿಗೊಳಿಸಿದ್ದು, ಜನರು ಅವರಿಗೆ ಇನ್ನೊಂದು ಅವಕಾಶ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಬೆಂಬಲಿಸಬೇಕು ಎಂದು ಮನಪಾ ಮಾಜಿ ಮೇಯರ್‌, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮನವಿ ಮಾಡಿದ್ದಾರೆ.

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 792 ಕೋ.ರೂ. ವೆಚ್ಚದ ಜಲಸಿರಿ ಯೋಜನೆ ನಗರಕ್ಕೆ ಸಿಕ್ಕಿದ ದೊಡ್ಡ ಯೋಜನೆಯಾಗಿದ್ದು, 2055ರ ವೇಳೆಗೆ ನೀರಿನ ಬೇಡಿಕೆ ಗಮನದಲ್ಲಿರಿಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ವಿಳಂಬವಾಗಿದ್ದ ಸ್ಮಾರ್ಟ್‌ ಸಿಟಿ ಕೆಲಸಕ್ಕೆ ಶಾಸಕರಾಗಿ ಆಯ್ಕೆಯಾದ ಬಳಿಕ ವೇಗ ನೀಡಿದ್ದಾರೆ. ಶಕ್ತಿನಗರ ವಸತಿ ಯೋಜನೆಗೆ ಸಂಬಂಧಿಸಿದ ತೊಡಕು ನಿವಾರಿಸಿದ್ದಾರೆ. ಉದ್ದಿಮೆ ಪರವಾನಗಿ ಆನ್‌ಲೈನ್‌ ವ್ಯವಸ್ಥೆ, ಇ -ಖಾತಾ ಸರಳೀಕರಣ, ಸ್ವಯಂ ಘೋಷಿತ ಆಸ್ತಿ ತೆರಿಗೆ ಡಿಜಿಟಲೀಕರಣ, ಟಿಡಿಆರ್‌ ವ್ಯವಸ್ಥೆ, ಕೋವಿಡ್‌ ಯಶಸ್ವೀ ನಿರ್ವಹಣೆ ಸೇರಿದಂತೆ ಹಲವು ಕೆಲಸಗಳನ್ನು ಶಾಸಕರು ತಮ್ಮ ಅವಧಿಯಲ್ಲಿ ಮಾಡಿದ್ದಾರೆ ಎಂದರು.

ಪಾಲಿಕೆ ಸದಸ್ಯ ಸುಧೀರ್‌ ಶೆಟ್ಟಿ ಕಣ್ಣೂರು ಅವರು ಮಾತನಾಡಿ, ಶಾಸಕ ವೇದವ್ಯಾಸ ಕಾಮತ್‌ ಅವರು ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಗಾಗಿ 4500 ಕೋ.ರೂ. ಅನುದಾನ ತಂದಿದ್ದಾರೆ. ಕೃತಕ ನೆರೆ ತಡೆಯುವ ನಿಟ್ಟಿನಲ್ಲಿ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣಕ್ಕೆ 100 ಕೋ.ರೂ, ಸಣ್ಣ ನೀರಾವರಿ ಇಲಾಖೆಯ 10 ಕೋ.ರೂ. ಅನುದಾನದಲ್ಲಿ ಶಾಶ್ವತ ಪರಿಹಾರ ಮಾಡಿಸಿದ್ದಾರೆ. ಒಳಚರಂಡಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಅಮೃತ್‌ ಯೋಜನೆಯಡಿ 176 ಕೋ.ರೂ. ಅನುದಾನ ಬಂದಿದೆ ಎಂದರು.

ಬೆಂಗ್ರೆಯಲ್ಲಿ ಹಕ್ಕುಪತ್ರ ವಿತರಣೆ
ಮೀನುಗಾರಿಕಾ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ನಿತಿನ್‌ ಕುಮಾರ್‌ ಅವರು ಮಾತನಾಡಿ, 10 ವರ್ಷದ ಹಿಂದೆ ಮಂಗಳೂರಿನ ಮೀನುಗಾರಿಕಾ ದಕ್ಕೆಯ ಮೂರನೇ ಹಂತದ ವಿಸ್ತರಣೆ 57 ಕೋ.ರೂ. ಅನುದಾನ ಬಿಡುಗಡೆಯಾಗಿ ಬಳಿಕ ಕಾನೂನಿನ ತೊಡಕಿನಿಂದ ಕೆಲಸ ಅರ್ಧಕ್ಕೆ ನಿಂತಿತ್ತು. ಶಾಸಕರು ತೊಡಕು ನಿವಾರಿಸಿ, ಕೆಲಸಕ್ಕೆ 49 ಕೊ.ರೂ. ಅನುದಾನ ಒದಗಿಸಿ ಕೊಟ್ಟಿದ್ದಾರೆ. ಈಗ ಟೆಂಡರ್‌ ಮುಗಿದು ಕೆಲಸ ನಡೆಯಲಿದೆ.

ಸಾಗರಮಾಲಾ ಯೋಜನೆಯಡಿ ಅಳಿವೆ ಬಾಗಿಲಿನಲ್ಲಿ ಡ್ರೆಜ್ಜಿಂಗ್‌ಗೆ ಕೇಂದ್ರ ರಾಜ್ಯ ಸರಕಾರದಿಂದ 29 ಕೋ.ರೂ. ಅನುದಾನ ಲಭಿಸಿದೆ. ಬೆಂಗ್ರೆಯ 900 ಮೀನುಗಾರ ಕುಟುಂಬಗಳಿಗೆ ಸರ್ವೇ ನಂಬರ್‌ ಕೊಟ್ಟು ಹಕ್ಕು ಪತ್ರ ವಿತರಿಸಲಾಗಿದೆ ಎಂದರು.
ನಗರ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ್‌ ಕುಮಾರ್‌ ಶೆಟ್ಟಿ, ಉತ್ತರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್‌ ಹೆಗ್ಡೆ, ರೂಪಾ ಡಿ.ಬಂಗೇರ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next