ಮಹಾನಗರ: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಈ ಐತಿಹಾಸಿಕ ಕಾಲೇಜಿನ ಅಭಿವೃದ್ಧಿಗೆ ಬೇಕಾದ ಅಗತ್ಯ ಅನುದಾನ ಒದಗಿಸಿಕೊಡಲು ಬದ್ಧನಿದ್ದೇನೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.
ಶನಿವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಯುಜಿಸಿ, ಆರ್‌ಯುಎಸ್‌ಎ ಯೋಜನೆಯಡಿ ನಿರ್ಮಾಣಗೊಂಡ ತರಗತಿ ಕೊಠಡಿಗಳ ಉದ್ಘಾಟನೆ ಮತ್ತು ತರಗತಿ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕಾಲೇಜು ಅಭಿವೃದ್ಧಿ ಮಂಡಳಿ ರಚನೆ ಯಾಗಿರುವುದು ಸಂತಸದ ವಿಷಯ. ನನ್ನ ಅವಧಿಯಲ್ಲಿ ಮಂಗಳೂರು ವಿಶ್ವವಿದ್ಯಾ ನಿಲಯದ ಎರಡು ಕಾಲೇಜುಗಳಿಗೆ ಒಟ್ಟು 13 ಕೋ.ರೂ. ಅನುದಾನ ಕೊಡಿಸಿದ್ದೇನೆ ಎಂದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತರಗತಿ ಕೊಠಡಿಗಳನ್ನು ಉದ್ಘಾಟಿಸಿದರು. ವಿಶ್ವವಿದ್ಯಾನಿಲಯದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಪ್ರೊ| ಕೆ.ಎಸ್. ಜಯಪ್ಪ ಗಣಿತ ಪ್ರಯೋಗಾಲಯವನ್ನು ಲೋಕಾರ್ಪಣೆ ಮಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ರವೀಂದ್ರನಾಥ ರೈ, ರವಿಚಂದ್ರ, ರಮೇಶ್, ವಿಶ್ವವಿದ್ಯಾನಿಲಯದ ಕಾರ್ಯಕಾರಿ ಅಭಿಯಂತ ಉಮೇಶ್ ಭಟ್ ವೈ., ಮಹಾನಗರ ಪಾಲಿಕೆ ಸದಸ್ಯ ಭಾಸ್ಕರಚಂದ್ರ ಶೆಟ್ಟಿ, ಯುಜಿಸಿ ಯೋಜನೆಯ ಸಂಯೋಜಕ ಸುಬ್ರಹ್ಮಣ್ಯ ಭಟ್ ಎನ್. ಮೊದಲಾದವರಿದ್ದರು. ಪ್ರಾಂಶುಪಾಲ ಡಾ| ಕೆ. ಹರೀಶ ಸ್ವಾಗತಿಸಿದರು. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ| ಜಯವಂತ್ ನಾಯಕ್ ನಿರೂಪಿಸಿ, ಆರ್‌ಯುಎಸ್‌ಎ ಸಂಯೋಜಕಿ ಡಾ| ಶೋಭಾ ವಂದಿಸಿದರು. ಅನಂತರ ಶಾಸಕ ಡಿ. ವೇದವ್ಯಾಸ ಕಾಮತ್ ನೇತೃತ್ವದ ಕಾಲೇಜು ಅಭಿವೃದ್ಧಿ ಮಂಡಳಿಯ ಸಭೆ ನಡೆಯಿತು.
ಹೆಮ್ಮೆಯ ಪ್ರತೀಕ
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಸುಬ್ರಹ್ಮಣ್ಯ ಯಡ ಪಡಿತ್ತಾಯ ಅವರು ಮಾತನಾಡಿ, ವಿ.ವಿ. ಕಾಲೇಜು ಹೆಮ್ಮೆಯ ಪ್ರತೀಕ. ಇದರ ಅಭಿವೃದ್ಧಿಗೆ ವಿಶ್ವವಿದ್ಯಾನಿಲಯ ಸದಾ ನೆರವಾಗುತ್ತದೆ. ಸಂಧ್ಯಾ ಕಾಲೇಜಿನ ಅಭಿವೃದ್ಧಿ ಕುರಿತು ತಿಂಗಳ ಕೊನೆಯಲ್ಲಿ ಚರ್ಚೆ ನಡೆಯಲಿದೆ. ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ ಬಗ್ಗೆಯೂ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಹೇಳಿದರು.