Advertisement
ಅದು, ಮಹಿಳಾ ಏಕದಿನ ವಿಶ್ವಕಪ್‌ನ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ. ಲೀಗ್‌ನ ಅಂತಿಮ ಪಂದ್ಯವಾಗಿದ್ದರಿಂದ ಎರಡೂ ತಂಡಗಳಿಗೂ ಮಾಡು ಇಲ್ಲವೆ ಮಡಿ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಭಾರತ ಭರ್ಜರಿ 186 ರನ್‌ಗಳಿಂದ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು. ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದವರು ಇಬ್ಬರು ಕನ್ನಡತಿಯರು. ಈ ಪೈಕಿ ವೇದಾಕೃಷ್ಣಮೂರ್ತಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 45 ಎಸೆತದಲ್ಲಿ 70 ರನ್ ಚಚ್ಚಿದರು. ಇದರಲ್ಲಿ 7 ಬೌಂಡರಿ, 2 ಭರ್ಜರಿ ಸಿಕ್ಸರ್ ಸೇರಿತ್ತು. ಅದೇ ರೀತಿ ಬೌಲಿಂಗ್‌ನಲ್ಲಿ ರಾಜೇಶ್ವರಿ 15 ರನ್‌ಗೆ 5 ವಿಕೆಟ್ ಕಿತ್ತು ನ್ಯೂಜಿಲೆಂಡ್ ಕೋಟೆಯನ್ನು ಛಿದ್ರ ಮಾಡಿದರು. ಹೀಗಾಗಿ ಪಂದ್ಯದ ನಂತರ ಇಬ್ಬರೂ ಆಟಗಾರ್ತಿಯರು ವಾಹಿನಿಯ ಸಂದರ್ಶನಕ್ಕೆ ಬಂದರು. ಇದು ಲೈವ್ ಟೆಲಿಕಾಸ್ಟ್ ಆಗುತ್ತಿತ್ತು. ಆವಾಗಲೇ ಕನ್ನಡದ ಅಭಿಮಾನಿಗಳು, ಹೇ…ಅವರಿಬ್ರೂ ಕನ್ನಡ ಮಾತಾಡುತ್ತಾರೆ ಅಂತಹ ಉದ್ಘಾರ ತೆಗೆದಿದ್ದು.
ಅದು, 10ನೇ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ ಮತ್ತು ರೈಸಿಂಗ್ ಪೂಣೆ ಸೂಪರ್‌ಜೈಂಟ್ ತಂಡದ ನಡುವಿನ ಪಂದ್ಯ. ಕನ್ನಡಿಗರಾದ ಮನೀಷ್ ಪಾಂಡೆ ಮತ್ತು ರಾಬಿನ್ ಉತ್ತಪ್ಪ ಕೋಲ್ಕತಾ ತಂಡದಲ್ಲಿದ್ದರು. ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಕ್ಷೇತ್ರರಕ್ಷಣೆಯಲ್ಲಿದ್ದ ಪಾಂಡೆ ವೀಕ್ಷಕ ವಿವರಣೆಗಾರರ ಜತೆ ಮಾತನಾಡುತ್ತಿದ್ದ ದೃಶ್ಯ ಲೈವ್ ಟೆಲಿಕಾಸ್ಟ್ ಆಗುತ್ತಿತ್ತು. ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಉತ್ತಪ್ಪ ಜತೆ ಪಾಂಡೆ “ಅವ ಎಡ್ಜ್ ಅಂದ್ರೆ ಇಲ್ಲೇ ಬರುತ್ತೆ’ ಅಂದಿದ್ದರು. ವೀಕ್ಷಕ ವಿವರಣೆಗಾರ ನೀವು ಮಾತಾಡಿದ್ದು, ಕನ್ನಡ ಅಲ್ಲವೇ? ಎಂದು ಕೇಳಿದ್ದರು. ಇದಕ್ಕೆ ಪಾಂಡೆ “ಎಸ್’ ಎಂಬ ಉತ್ತರ ನೀಡಿದ್ದರು. ಆ ನಂತರ ಈ ವಿಡಿಯೋ ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ವೈರಲ್ ಆಗಿತ್ತು. ಉತ್ತಪ್ಪ, ಪಾಂಡೆ ಕನ್ನಡಿಗರಾಗಿರುವುದರಿಂದ ರಾಜ್ಯದ ಎಷ್ಟೋ ಕ್ರಿಕೆಟ್ ಅಭಿಮಾನಿಗಳು ಬೆಂಗಳೂರು ತಂಡವನ್ನು ಬಿಟ್ಟು ಕೋಲ್ಕತಾ ತಂಡವನ್ನು ಬೆಂಬಲಿಸಿದ್ದಾರೆ.
Related Articles
ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ 1996 ಮತ್ತು 1997ರ ಸಂದರ್ಭದಲ್ಲಿ ಅರ್ಧ ತಂಡವೇ ಕರ್ನಾಟಕ ಆಟಗಾರರಿಂದ ಕೂಡಿತ್ತು. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಸುನೀಲ್ ಜೋಷಿ ತಂಡದ ಕಾಯಂ ಆಟಗಾರರಾಗಿದ್ದರು. ಈ ಸಂದರ್ಭದಲ್ಲಿ ನಾವೆಲ್ಲ ಬಹುಪಾಲು ಸಮಯದಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತಿದ್ದೆವು ಎಂದು ಸ್ವತಃ ಕುಂಬ್ಳೆ, ಜೋಷಿ, ಶ್ರೀನಾಥ್ ಸಂದರ್ಶನದ ಸಮಯದಲ್ಲಿ ಹೇಳಿಕೊಂಡಿದ್ದರು.
Advertisement
ಹೀಗೆ ಒಂದೇ ರಾಜ್ಯದ ಇಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳು ಒಂದೆಡೆ ಸೇರಿದಾಗ ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡುತ್ತಾರೆ. ಅದನ್ನು ಲೈವ್ ಟೆಲಿಕಾಸ್ಟ್‌ನಲ್ಲಿ ನೋಡಿದಾಗ ಅಭಿಮಾನಿಗಳು ಸಂತಸ ಪಡುತ್ತಾರೆ. ಅಷ್ಟೇ ಅಲ್ಲ, ಹೇ…ನಮ್ಮವರು ಅಂತ ಅಚ್ಚರಿಗೆ, ಸಂಭ್ರಮಕ್ಕೆ ಒಳಗಾಗುತ್ತಾರೆ.
ಮಂಜು ಮಳಗುಳಿ