ಹೈದರಾಬಾದ್: ಶಬರಿಮಲೆ ಯಾತ್ರೆ ಕೈಗೊಳ್ಳುವ ಭಕ್ತರು, ಮಸೀದಿಗಳಿಗೆ ಭೇಟಿ ನೀಡುವುದನ್ನು ಬಿಡಬೇಕು ಎಂದು ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಸಲಹೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಶಬರಿಮಲೆ ಭೇಟಿ ವೇಳೆ ವಾವರ್ ಮಸೀದಿಗೆ ಭೇಟಿ ನೀಡುವುದನ್ನು ನಿಲ್ಲಿಸಬೇಕು’ ಎಂದು ಹೇಳಿದರು.
ಭಕ್ತರು ‘ಅಯ್ಯಪ್ಪ ದೀಕ್ಷಾ’ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಅವರು ಮಸೀದಿಗೆ (ವಾವರ್) ಹೋದರೆ ಅವರು ಅಶುದ್ಧರಾಗುತ್ತಾರೆ. ಭಕ್ತರನ್ನು ಮಸೀದಿಗೆ ಬರುವಂತೆ ಮಾಡಿರುವುದು ಸಂಚು” ಎಂದಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ಅವರು ಅಯ್ಯಪ್ಪ ಭಕ್ತರಿಗೆ ವಸತಿ ನಿರ್ಮಿಸಲು 10 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಕೇರಳ ಸರ್ಕಾರಕ್ಕೆ ಮನವಿ ಮಾಡುವಂತೆ ಕೇಳಿಕೊಂಡರು.
ಅಯ್ಯಪ್ಪನ ದರ್ಶನಕ್ಕೆ ಹೋಗುವ ಭಕ್ತರು ಮರಳುವಾಗ ವಾವರ್ ಮಸೀದಿಗೆ ಭೇಟಿ ನೀಡುವುದು ವಾಡಿಕೆ. ಇದು ಶಬರಿಮಲೆ ದೇವಸ್ಥಾನದಿಂದ 45 ಕಿ.ಮೀ ದೂರದಲ್ಲಿದೆ.