Advertisement

ಭಾರತದ ವಸುದೈವ ಕುಟುಂಬಕಂ ಜಗತ್ತಿಗೇ ಮಾದರಿಯಾಗಲಿ

12:28 AM May 17, 2022 | Team Udayavani |

ಕೊರೊನಾ ಕಾಲದಿಂದ ಹಿಡಿದು, ಇಲ್ಲಿಯವರೆಗೂ ನೆರೆಕರೆಯ ದೇಶಗಳ ಕಷ್ಟಕಾಲದಲ್ಲಿ ಸಹಾಯಕ್ಕೆ ಹೋದ ರಾಷ್ಟ್ರವೆಂದರೆ ಅದು ಭಾರತ ಮಾತ್ರ. ದಕ್ಷಿಣ ಏಷ್ಯಾದಲ್ಲಿನ ರಾಷ್ಟ್ರಗಳ ನಡುವಿನ ಒಗ್ಗಟ್ಟನ್ನು ಮುರಿಯುವ ಸಲುವಾಗಿ ಚೀನವು ಪಾಕಿಸ್ಥಾನವನ್ನು ದಾಳವಾಗಿ ಬಳಸಿಕೊಂಡಿತ್ತು. ಇದರ ಜತೆಗೆ ಶ್ರೀಲಂಕಾ, ನೇಪಾಲ, ಮಾಲ್ಡೀವ್ಸ್‌ನಲ್ಲಿ ಸರಕಾರಗಳು ಬದಲಾದಾಗ ಚೀನ ಅಲ್ಲಿಗೆ ಹೆಚ್ಚಿನ ಸಾಲ ನೀಡಿ ಅವುಗಳನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಕೊಂಚ ಯಶಸ್ಸಾಗಿತ್ತು. ಆದರೆ ಕೊರೊನಾ ಬಂದ ಮೇಲೆ ಈ ಎಲ್ಲ ದೇಶಗಳಿಗೆ ನಿಜವಾದ ಸ್ನೇಹಿತಯಾರು ಎಂಬುದು ಅರ್ಥವಾದಂತಿದೆ.

Advertisement

ನೆರೆಕರೆಯ ದೇಶಗಳ ಜತೆಗೆ ಉತ್ತಮ ಸಂಬಂಧವಿರಿಸಿಕೊಳ್ಳಬೇಕು ಎಂಬ ಭಾರತದ ನಿಲುವು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಅಕ್ಕಪಕ್ಕದ ದೇಶಗಳಿಗೆ ತನ್ನ ಕೈಲಾದ ಸಹಾಯವನ್ನು ಮಾಡುತ್ತಲೇ ಬಂದಿದೆ ಭಾರತ. ಅದರಲ್ಲೂ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪದಗ್ರಹಣದ ವೇಳೆ, ಅಕ್ಕಪಕ್ಕದ ಎಲ್ಲ ದೇಶಗಳ ನಾಯಕರನ್ನು ಆಹ್ವಾನಿಸಿ, ವಸುದೈವ ಕುಟುಂಬದ ಮೊದಲ ಅಧ್ಯಾಯವನ್ನು ತೆರೆದಿದ್ದರು. ಆದರೆ ಒಂದಷ್ಟು ದಿನಗಳಾದ ಮೇಲೆ ಪಾಕಿಸ್ಥಾನ ಬೆನ್ನಿಗೆ ಚೂರಿ ಇರಿದು, ಈ ವಸುದೈವ ಕುಟುಂಬಕಂ ನೀತಿಗೆ ಪೆಟ್ಟು ನೀಡಿತ್ತು.

ಈಗ ಭಾರತ, ಪಾಕಿಸ್ಥಾನವನ್ನು ಬದಿಗಿಟ್ಟು, ನೆರೆ ದೇಶಗಳಲ್ಲಿ ಚೀನದ ಪ್ರಾಬಲ್ಯ ಹೆಚ್ಚಾಗದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿದೆ. ಒಂದು ಹಂತದಲ್ಲಿ ಭಾರತದ ವಿರುದ್ಧ ಮುನಿಸಿಕೊಂಡು ಹೋಗಿದ್ದ ದೇಶಗಳು ಮತ್ತೆ ಹತ್ತಿರವಾಗುತ್ತಿವೆ. ಇದಕ್ಕೆ ಉದಾಹರಣೆಯೇ ಶ್ರೀಲಂಕಾ, ಮಾಲ್ಡೀವ್ಸ್‌ ಮತ್ತು ನೇಪಾಲ. ಚೀನ ಜತೆಗೆ ಹೋದರೆ ಎಂದಿಗೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಈಗ ಈ ದೇಶಗಳಿಗೆ ಅರ್ಥವಾಗಿದೆ. ಇದು ಅರ್ಥವಾಗುವುದಕ್ಕೆ ವೇದಿಕೆ ಸೃಷ್ಟಿ ಮಾಡಿಕೊಟ್ಟಿದ್ದೇ ಕೊರೊನಾ. 2020ರ ಆರಂಭದಲ್ಲಿ ಕೊರೊನಾ ಆತಂಕ ಶುರುವಾಗಿದ್ದು, ಈಗಲೂ ಮುಂದುವರಿದಿದೆ. ಆದರೆ ಭಾರತ ಕೊರೊನಾ ಆರಂಭವಾದಾಗಿನಿಂದಲೂ ತನ್ನ ಸುತ್ತಮುತ್ತಲಿನ ಎಲ್ಲ ದೇಶಗಳಿಗೂ ತನ್ನದೆ ಆದ ರೀತಿಯಲ್ಲಿ ಕೈಲಾದ ಸಹಾಯ ಮಾಡುತ್ತಿದೆ. ಅಂದರೆ ಔಷಧಗಳು, ಲಸಿಕೆ, ವೈದ್ಯಕೀಯ ಉಪಕರಣಗಳನ್ನು ಒದಗಿಸುತ್ತಿದೆ. ಲಸಿಕೆ ವಿಚಾರದಲ್ಲಂತೂ ನೆರೆಯ ನೇಪಾಲ, ಶ್ರೀಲಂಕಾ, ಮಾಲ್ಡೀವ್ಸ್‌, ಭೂತಾನ್‌, ಮ್ಯಾನ್ಮಾರ್‌, ಅಫ್ಘಾನಿಸ್ಥಾನ ದೇಶಗಳಿಗೆ ಹೆಚ್ಚಿನ ಸಹಾಯ ಮಾಡಿದೆ. ಅಲ್ಲದೆ, ಹೆಚ್ಚು ಕಡಿಮೆ ಈ ಎಲ್ಲ ದೇಶಗಳಿಗೆ ಪ್ರಸಕ್ತ ವರ್ಷದಲ್ಲೇ ಕೋಟಿ ಕೋಟಿ ರೂ. ಸಹಾಯಧನವನ್ನೂ ಮೀಸಲಿಟ್ಟಿದೆ. ಅಲ್ಲದೆ ಸದ್ಯ ಅಪಾಯದ ಸ್ಥಿತಿಯಲ್ಲಿರುವ ಶ್ರೀಲಂಕಾಗೆ ಹೆಚ್ಚಿನ ಸಾಲ ಮತ್ತು ತೈಲದ ನೆರವನ್ನು ನೀಡಿದೆ. ಅಫ್ಘಾನಿಸ್ಥಾನದಲ್ಲಿ ಹಸಿವಿನಿಂದ ಜನ ನರಳಬಾರದು ಎಂಬ ಕಾರಣಕ್ಕಾಗಿ ಗೋಧಿಯನ್ನು ಕಳುಹಿಸಿಕೊಟ್ಟಿದೆ.

ಈ ಎಲ್ಲ ನೆರವಿನ ಮುಂದುವರಿದ ಅಧ್ಯಾಯವೇ ಈಗಿನ ನೇಪಾಲ ಭೇಟಿ. ಅಲ್ಲಿನ ಪ್ರಧಾನಿ ಬಹದ್ದೂರ್‌ ದೌಬಾ ಜತೆಗೆ ಆರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಬೌದ್ಧ ಪೂರ್ಣಿಮೆಯ ದಿನವೇ ಲುಂಬಿನಿಗೆ ಭೇಟಿ ನೀಡಿ, ಭಾರತ ಎಂದಿಗೂ ನೇಪಾಲದ ಜತೆಗೆ ನಿಲ್ಲುತ್ತದೆ ಎಂಬ ಭರವಸೆಯನ್ನೂ ನೀಡಿದ್ದಾರೆ. ಸಾಂಸ್ಕೃತಿಕ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಒಪ್ಪಿಗೆ ನೀಡಿದ್ದಾರೆ. ಏನೇ ಆಗಲಿ ಭಾರತದ ಈ ವಸುದೈವ ಕುಟುಂಬಕಂ ಎಲ್ಲರಿಗೂ ಮಾದರಿಯಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next