Advertisement

ವಸಿಷ್ಠ ಸಿಂಹ

04:43 PM Oct 24, 2017 | |

ಬಹುಶಃ ಅದೊಂದು ಬ್ರೇಕ್‌ ತೆಗೆದುಕೊಳ್ಳದಿದ್ದರೆ, ವಸಿಷ್ಠ ಸಿಂಹ ಎಂಬ ಕ್ಯೂಟ್‌ ಖಳನಟ ಕನ್ನಡ ಚಿತ್ರರಂಗಕ್ಕೆ ಬರುತ್ತಿರಲಿಲ್ಲವೇನೋ. ಚಿಕ್ಕ ವಯಸ್ಸಿನಿಂದ ಕೆಲಸ ಮಾಡುತ್ತಿದ್ದವರಿಗೆ, ಒಂದು ದಿನ ತಾನು ಸಿಕ್ಕಾಪಟ್ಟೆ ಕೆಲಸ ಮಾಡಿ ಲೈಫ್ ಹಾಳು ಮಾಡಿಕೊಳ್ಳುತ್ತಿದ್ದೀನಿ ಎಂದನಿಸಿಂತೆ. ಒಂದು ಬ್ರೇಕ್‌ ತೆಗೆದುಕೊಂದು ಆ ನಂತರ ಪುನಃ ಕೆಲಸಕ್ಕೆ ಸೇರುವ ಯೋಚನೆ ಮಾಡಿ ಆಕ್ಸೆಂಚರ್‌ನಲ್ಲಿದ್ದ ಒಳ್ಳೆಯ ಕೆಲಸ ಬಿಟ್ಟಿದ್ದಾರೆ. ಮುಂದೆ ಕ್ರಮೇಣ ರಂಗಭೂಮಿಗೆ ಜಿಗಿತ. ಅಲ್ಲಿಂದ ಸಿನಿಮಾರಂಗಕ್ಕೂ ಬಂದಿದ್ದಾಯಿತು. ಹೀಗೆ ಮೂರ್‍ನಾಲ್ಕು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದ ಅವರಿಗೆ, ಈಗ ಒಂದು ದೊಡ್ಡ ಬ್ರೇಕ್‌ ಸಿಕ್ಕಿದೆ. ಆ ಬ್ರೇಕ್‌ ಕೊಟ್ಟಿದ್ದು “ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರ. ಆ ಚಿತ್ರದಲ್ಲಿ ನೆಗೆಟಿವ್‌ ಶೇಡ್‌ ಇರುವ ಪಾತ್ರ ಮಾಡಿದ ನಂತರ, ಇದಕ್ಕಿದ್ದಂತೆ ವಸಿಷ್ಠರತ್ತ ಕನ್ನಡ ಚಿತ್ರರಂಗ ಕಣ್ಣು ಬಿಟ್ಟಿದೆ. ಈಗ ವಸಿಷ್ಠ, ಕನ್ನಡ ಚಿತ್ರರಂಗದ ಬೇಡಿಕೆಯ ನಟ ಎಂದರೆ ತಪ್ಪಿಲ್ಲ. ವಸಿಷ್ಠ ಅಲ್ಲಿಂದ ಇಲ್ಲಿಯವರೆಗೂ ಹೇಗೆ ಬಂದರು ಎಂದು ಅವರು ತಮ್ಮ ಮಾತುಗಳಲ್ಲೇ ವಿವರಿಸುತ್ತಾ ಹೋದರು.

Advertisement

“ಐದು ವರ್ಷ ನಂಜೊಂತೆ ಇರು. ಹೋರೋ ಮಾಡ್ತೀನಿ ನೋಡ್ತಾ ಇರು’ ಅಂದಿದ್ದರಂತೆ ಹಂಸಲೇಖ. ಅದೇ ಮಾತನ್ನು ನಂಬಿ ಬೆಂಗಳೂರಿಗೆ ಬಂದರಂತೆ ವಸಿಷ್ಠ ಸಿಂಹ. ಅವರಿಗೆ ಹಂಸಲೇಖರು ದೇವರ ಸಮಾನ. ಚಿಕ್ಕಂದಿನಿಂದಲೂ ಹಂಸಲೇಖ ಅವರ ಹಾಡು ಕೇಳಿಕೊಂಡು ಬಂದಿದ್ದ ವಸಿಷ್ಠಗೆ ಹಂಸಲೇಖ ಅವರ ದೇಸಿ ಶಾಲೆಯ ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಒಮ್ಮೆ ಸಿಕ್ಕಿತಂತೆ. ಆ ಶಿಬಿರ ಮುಗಿದಾಗ, ಹಂಸಲೇಖ ಅವರು ಹೇಳಿದ ಮಾತಿದು.  ಗಾಯನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬೇಕೆಂದು ಕನಸು ಕಂಡಿದ್ದ ವಸಿಷ್ಠ, ಈಗ ಗುರುತಿಸಿಕೊಳ್ಳುತ್ತಿರುವುದು, ಹೆಸರು ಮಾಡುತ್ತಿರುವುದು ನಟನೆಯಲ್ಲಿ. ಇದೆಲ್ಲಾ ಹೇಗೆ ಸಾಧ್ಯವಾಯಿತು?

ಉತ್ತರಿಸುತ್ತಾ ಹೋದರು ವಸಿಷ್ಠ. “ಕೆಲಸ ಮಾಡಿದ್ದು ಸಾಕು ಅಂತ ಬಿಟ್ಟು ಬಂದಿದ್ದೆ. ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ. ಧಾರಾವಾಹಿಗಳಲ್ಲಿ ಅವಕಾಶಗಳು ಸಿಗಬಹುದು ಅಂತ ಕಾಯುತ್ತಿದ್ದೆ. ಒಂದು ಬಿಡುಗಡೆಯಾಗದ ಚಿತ್ರದಲ್ಲಿ ನಟಿಸಿದ್ದೆ. ಮುಂದೇನು ಅಂತ ಗೊತ್ತಿರಲಿಲ್ಲ. ನನಗೆ ಇಂಟರ್‌ವ್ಯೂಗೆ ಹೋಗೋದಕ್ಕೆ ಮನಸ್ಸು ಇರಲಿಲ್ಲ. ಆಗ ಒಮ್ಮೆ ಎನ್‌.ಆರ್‌. ಕಾಲೋನಿಯ ಕುಮಾರ ಭವನ ಹೋಟೆಲ್‌ ಹತ್ತಿರ ನಿಂತಿದ್ದೆ. ನನ್ನ ಫ್ರೆಂಡ್‌ ಶಂಕರ್‌ ಅಂತ, ಅವನ ಜೊತೆಗೆ ನಿಂತಿದ್ದೆ. ಆಗ ಅವನ ಫ್ರೆಂಡ್‌ ಪುನೀತ್‌ ಆರ್ಯ ಅನ್ನೋರು “ಆರ್ಯಾಸ್‌ ಲವ್‌’ ಅಂತ ಸಿನಿಮಾ ಮಾಡುತ್ತಿದ್ದರು. ಅವರು ಹಾಡು ಕೇಳಿಸಿದರು. ನಾನು ಹಮ್‌ ಮಾಡಿದೆ. ಆಗ ಅವರು ಇಷ್ಟಪಟ್ಟು ಟ್ರಾಕ್‌ ಹಾಡೋದಲ್ಲೆ ಹೇಳಿದರು. ಟ್ರಾಕ್‌ ಹಾಡಿದೆ. ಆಮೇಲೆ ಒಂದು ಮುಖ್ಯ ರೋಲ್‌ ಮಾಡ್ತೀಯ ಎಂದರು. ಖಂಡಿತಾ ಆಗಲ್ಲ ಅಂದೆ. ಒಂದಿಷ್ಟು ಸೀರಿಯಲ್‌ಗ‌ಳನ್ನ ಮಾಡಿ, ಪಳಗಿದ ಮೇಲೆ ನೋಡೋಣ ಅಂದೆ. ಏಕೆಂದರೆ, ಅಷ್ಟರಲ್ಲಿ “ಹುಬ್ಬಳ್ಳಿ ಹುಡುಗ್ರು’ ಅಂತ ಸಿನಿಮಾ ಮಾಡಿದ್ದೆ. ರಿಲೀಸ್‌ ಆಗಿರಲಿಲ್ಲ. ಹಾಗಾಗಿ ನಟನೆ ಮಾಡಿದರೆ, ಒಂದಿಷ್ಟು ತಯಾರಿ ತೊಗೊಂಡೇ ಮಾಡೋದು ಅಂತ ನನ್ನ ನಿರ್ಧಾರ. ಸೋ ಆಗಲ್ಲ ಅಂದೆ. ಕೊನೆಗೆ ಏನೋ ಮಾಡಿ ಒಪ್ಸಿದ್ರು …’

ಒಂದೇ ಚಿತ್ರದಲ್ಲಿ ಆಲ್‌-ಇನ್‌-ಒನ್‌ ವಸಿಷ್ಠ ಮಾತು ನಿಲ್ಲಿಸಲಿಲ್ಲ. ಮುಂದುವರೆಸಿದರು. “ಈ ಮಧ್ಯೆ ನಾನು ತೆಗೆದಿರುವ ಒಂದಿಷ್ಟು ಫೋಟೋಗಳನ್ನು ತೋರಿಸಿದ್ದೆ. ಅವರು ಅದನ್ನ ಮೆಚ್ಚಿಕೊಂಡು, ಫ್ರೀಯಾಗಿದ್ರೆ ಬಂದು ವರ್ಕಿಂಗ್‌ ಸ್ಟಿಲ್ಸ್‌ ತೆಗೀರಿ ಎಂದಿದ್ರು. ಸ್ವಾಮಿ, ನನಗೆ ಈ ವರ್ಕಿಂಗ್‌ ಸ್ಟಿಲ್ಸ್‌ ಎಲ್ಲ ಗೊತ್ತಿಲ್ಲ. ಹುಳ, ಹುಪ್ಪಟ್ಟೆ ತೆಗೆಯೋ ಫೋಟೋಗ್ರಾಫ‌ರ್‌ ನಾನು ಅಂದರೂ ಬಿಡಲಿಲ್ಲ. ಹೇಗಿದ್ದರೂ ನಿಮ್ಮ ಪಾತ್ರ ಇರೋದು ಸೆಕೆಂಡ್‌ ಶೆಡ್ನೂಲ್‌ನಲ್ಲಿ. 

Advertisement

ಅಲ್ಲಿಯವರೆಗೂ ಏನ್ಮಾಡ್ತೀರಾ ಬನ್ನಿ ಅಂತ ಕರ್ಕೂಂಡು ಹೋದರು. ಒಂದು ದಿನ ಶೂಟಿಂಗ್‌ ಆಯ್ತು. ಏನೋ ಆಗಿ ನಿರ್ದೇಶಕರಿಗೆ, ಸೆಕೆಂಡ್‌ ಹೀರೋಗೆ ಜಗಳ ಆಯ್ತು. ನೀನೇ ಸೆಕೆಂಡ್‌ ಹೀರೋ ಎಂದರು. ಆಗಲ್ಲ ಅಂದೆ. ನಿಮ್ಮಿಂದ ಚಿತ್ರೀಕರಣ ನಿಂತೇ ಹೋಗಬಹುದು ಎಂದರು. ಕೊನೆಗೆ ಬೇರೆ ದಾರಿ ಇರಲಿಲ್ಲ, ಒಪ್ಪಿಕೊಂಡೆ. ಸರಿ, ಮಾರನೇ ದಿನ ಎದ್ದು ನೋಡಿದರೆ, ಕ್ಯಾಮೆರಾಮ್ಯಾನ್‌ ತಮ್ಮ ತಂಡದ ಜೊತೆಗೆ ಹೊರಟುಹೋಗಿದ್ರು. ನಿರ್ದೇಶಕರಿಗೂ ಅವರಿಗೂ ಏನೋ ಜಗಳ ಅಂತೆ. ಕೊನೆಗೆ ಸೆಟ್‌ಗೆ ಹೋದ್ವಿ. ಅಲ್ಲಿಗೆ ಹೋದಾಗ, ವಸಿಷ್ಠ ಕ್ಯಾಮೆರಾ ಇಲ್ಲಿ ಇಡಿ ಎಂದರು. 

ಅದಕ್ಕವರು, ದ್ವಿತೀಯ ವಿಘ್ನ ಆಗೋದು ಬೇಡ, ಹೇಗೋ  ಡಿಜಿಟಲ್‌ ಕ್ಯಾಮೆರಾದಲ್ಲಿ ಶೂಟಿಂಗ್‌ ಮಾಡೋದು. ನಿಮಗೆ ಡಿಜಿಟಲ್‌ ಕ್ಯಾಮೆರಾ ಬಗ್ಗೆ ಗೊತ್ತು, ನೀವೇ ಮಾಡಿಬಿಡಿ, ನಾಳೆ ಯಾರನ್ನಾದರೂ ಕರೆಸೋಣ ಎಂದರು. ಮಾರನೇ ದಿನ ಯಾರೂ ಬರಲೇ ಇಲ್ಲ. ಕೊನೆಗೆ ನಾನೇ ಮಾಡಬೇಕಾಯ್ತು. ಪ್ರೊಡಕ್ಷನ್‌ ಮ್ಯಾನೇಜರ್‌ ಇಲ್ಲ. ಆ ಕೆಲಸಾನೂ ಮಾಡಿದ್ದಾಯ್ತು. ಡೈರೆಕ್ಷನ್‌ ಪಾರ್ಟ್‌ಮೆಂಟ್‌ನಲ್ಲೂ ತಲೆ ಹಾಕಿದೆ. ಮೊದಲ ಸಿನಿಮಾದಲ್ಲೇ ಓವರ್‌ ಎಕ್‌ನ್ಪೋಷರ್‌. ಆವತ್ತೆ ಡಿಸೈಡ್‌ ಮಾಡಿ ಬಿಟ್ಟೆ …’

 ಆವತ್ತು ಡಿಸೈಡ್‌ ಮಾಡಿದ್ದೇನು ಗೊತ್ತಾ? ಕುತೂಹಲ ಹೆಚ್ಚಿಸುತ್ತಾ ಮಾತು ಮುಂದುವರೆಸಿದರು ವಸಿಷ್ಠ. “ಸಿನಿಮಾ ಮಾಡದೇ ಇದ್ದರೂ ಪರವಾಗಿಲ್ಲ. ಹೀಗೆಲ್ಲಾ ಮಾಡಬಾರದು, ಏನೂ ಗೊತ್ತಿಲ್ಲದೆ ಎಲ್ಲದಕ್ಕೂ ಕೈ ಹಾಕಬಾರದು ಅಂತ. ಈ ಮಧ್ಯೆ ಇನ್ನೊಂದೆರೆಡು ಸಿನಿಮಾಗಳು ಬಂದುÌ. ಆದರೆ, ನಾನು ಒಪ್ಪಲಿಲ್ಲ. ಏಕೆಂದರೆ, ಮಾಡಿದರೂ ಒಂದೆ, ಬಿಟ್ಟರೂ ಒಂದೆ ಎನ್ನುವಂತಹ ಸಿನಿಮಾಗಳವು. ಏನೇ ಆದರೂ, ನಾನು ತುಂಬಾ ಕಲಿತ ಸಿನಿಮಾ ಎಂದರೆ, “ಆರ್ಯಾಸ್‌ ಲವ್‌’. ಕ್ಯಾಮೆರಾ ಹಿಂದೇನೋ ಒಂಥರಾ ಇರುತ್ತೆ, ಮುಂದೇನೇ ಒಂಥರಾ ಇರತ್ತೆ. ಕ್ಯಾಮೆರಾ ಹಿಂದೆ ಹಲವು ವಿಷಯಗಳನ್ನು ಕಲಿಯುವ ಅವಕಾಶ ನನಗೆ ಸಿಕ್ಕಿದ್ದು ಅಲ್ಲಿ. ಅದಾಗಿ ಸ್ವಲ್ಪ ದಿನಗಳ ನಂತರ ಆ ಚಿತ್ರದ ಅಸೋಸಿಯೇಟ್‌ ಡೈರೆಕ್ಟರ್‌ ಫೋನ್‌ ಮಾಡಿ, ಮೂವಿಲ್ಯಾಂಡ್‌ ಹತ್ತಿರ ಬನ್ನಿ ಎಂದರು. ಹೋದೆ. 
ಗುರು ದೇಶಪಾಂಡೆ, “ರಾಜಾ ಹುಲಿ’ಗೆ ಒಂದು ಪಾತ್ರಕ್ಕೆ ಫಿಕ್ಸ್‌ ಮಾಡಿದರು. ಅದಾದ ಮೇಲೆ ಸುದ್ದಿಯೇ ಇಲ್ಲ. ಕೊನೆಗೆ ಒಂದು ದಿನ ಫೋನ್‌ ಬಂತು. ನಿರ್ಮಾಪಕರು ಬರ್ತಾರೆ ಬಾ ಅಂತ. ನಾನು ರಾತ್ರಿ ಮೆಂಟಲಿ ಪ್ರಿಪೇರ್‌ ಆಗಿ ಆಫೀಸಿಗೆ ಹೋದೆ. ಕೆ. ಮಂಜು ಬಂದರು. ಅವರ ಹತ್ತಿರ ಕೂರಿಸಿದರು. ಮಂಜು, ಏನ್‌ ತಗೋತೀರಾ? ಅಂದ್ರು. ಏನೂ ಬೇಡ ಅಂದೆ. ಅವರಿಗೆ ಆಶ್ಚರ್ಯ. ಮೊದಲು ನಾನು ಸಿನ್ಮಾದಲ್ಲಿ ಇದ್ದೀನಾ, ಇಲ್ವಾ ಹೇಳಿ ಅಂದೆ. ಇರೋದಕ್ಕೇಪ್ಪಾ ಕೇಳ್ತಾ ಇರೋದು, ಏನು ತಗೋತೀಯಾ ಹೇಳು ಅಂದ್ರು. ಏನು ಬೇಡ ಅಂದೆ. ಏಕೆಂದ್ರೆ, ನಾನು ಮಾಡಿದ ಎರಡೂ ಸಿನ್ಮಾಗಳಿಗೆ ನಾನೇ ಖರ್ಚು ಮಾಡಿದ್ದೆ. ಹಾಗಾಗಿ ಈ ಬಾರಿ ಅವಕಾಶ ಕೊಡಿ, ಮುಂದಿನ ಸಾರಿ ಪೇಮೆಂಟ್‌ ಕೊಡಿ ಅಂದೆ. ಅವರು ಹಾಗೆಲ್ಲಾ ಹೇಳಬಾರದು ಅಂತ, ಒಂದಿಷ್ಟು ಹಣ ಕೊಟ್ಟು ಪಾಕೆಟ್‌ ಮನಿ ಅಂತ ಇಟ್ಕೊà ಅಂದ್ರು. ಶೂಟಿಂಗ್‌ ಸಹ ಶುರುವಾಯ್ತು. 

ಅಲ್ಲಿಯವರೆಗೂ ನಾನು ಸಿನಿಮಾದಲ್ಲಿ ಇರ್ತೀನಿ ಎಂದು ಖಂಡಿತ ಗೊತ್ತಿರಲಿಲ್ಲ. ಅಲ್ಲಿಯವರೆಗೂ ಅಪ್ಪಂಗೆ ಕೆಲಸ ಬಿಟ್ಟಿದ್ದು ಹೇಳೇ ಇರಲಿಲ್ಲ. ಆಗ ಕೆಲಸ ಬಿಟ್ಟೆ ಅಂದೆ. ಆದರೂ ಅಪ್ಪ ಎಲ್ಲರೆದುರು, ನನ್ನ ಮಗ ಅಕ್ಸೆಂಚರ್‌ನಲ್ಲಿ ಕೆಲಸ ಮಾಡ್ತಾನೆ ಅಂತಲೇ ಹೇಳ್ತಿದ್ದರು. ಸಿನಿಮಾದಲ್ಲಿದ್ದಾನೆ ಅನ್ನೋಕೆ ಅವರಿಗೆ ಸಂಕೋಚ. ಕೊನೆಗೆ “ರಾಜಹುಲಿ’ ಬಿಡುಗಡೆಯಾದ ಮೇಲೆ ಅವರಿಗೆ ತೋರಿಸಿದೆ. 

ನೋಡಿಕೊಂಡು ಬಂದ ಮೇಲೆ ಚೆನ್ನಾಗಿ ಮಾಡಿದ್ದೀಯ ಎಂದರು. ನಂತರ ಅಪ್ಪ ಎಲ್ಲರಿಗೂ ಸಿನಿಮಾ ನಟ ಅಂತ ಪರಿಚಯ ಮಾಡಿಕೊಡ್ತಿದ್ದಾರೆ. “ರಾಜಹುಲಿ’ ಬರದಿದ್ದರೆ ಇಲ್ಲಿ ಇರುತ್ತಿರಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ ವಸಿಷ್ಠ. ಹೀರೋಯಿಸಂ ಇರದ ಹೀರೋನೂ ಇರ್ತಾನೆ! “ರಾಜಹುಲಿ’ ಆದ್ಮೇಲೆ ಒಂದಿಷ್ಟು ಚಿತ್ರಗಳಲ್ಲಿ ಹೀರೋ ಆಗುವ ಅವಕಾಶಗಳು ಸಿಕ್ಕವಂತೆ. “ಹೀರೋ ಎಂದರೆ ಒಪ್ಪುತ್ತಿರಲಿಲ್ಲ. 

ಸುಮ್ಮನೆ ಬಲಾತ್ಕಾರ ಯಾಕೆ. ಮೊದಲಿಗೆ ಒಂದು ಗುರುತು ಸಿಗಬೇಕು. ಆಗ ಓಕೆ. ಇಲ್ಲಾಂದ್ರೆ ಯಾಕೆ ರಿಸ್ಕ್ ಬೇಡ ಅಂತ ಒಪ್ಪಲಿಲ್ಲ. ಇದುವರೆಗೂ ತುಂಬಾ ಸಿನ್ಮಾನ ಅದೇ ಕಾರಣಕ್ಕೆ ಬಿಟ್ಟಿದ್ದೀನಿ. ಮೊದಲು ಎಲ್ಲರ ಜೊತೆಗೆ ಕೆಲಸ ಮಾಡಿ ಆ ನಂತರ ಹೀರೋ ಆಗೋಣ ಅಂತ ನನ್ನ ನಿರ್ಧಾರ. ಈಗ ಸ್ವಲ್ಪ ಜನ ಗುರುತಿಸ್ತಾರೆ. ಇನ್ಮೆàಲೆ ನೋಡಬೇಕು. ನನ್ನ ಪ್ರಕಾರ ಹೀರೋ ಅಂದ್ರೆ ಮಾಸ್‌ ಅಂತ ಅಲ್ಲ. ಹೀರೋಯಿಸಂ ಇರದ ಹೀರೋನೂ ಇರ್ತಾನೆ. ಅಂತಹ ಪಾತ್ರ ಮಾಡೋಕೆ ನನಗೆ ಹೆಚ್ಚು ಇಷ್ಟ. ಹೀಗಿರುವಾಗಲೇ ನನಗೆ ಎರಡು ಸಿನ್ಮಾ ಸಿಕ್ಕವು. ಒಂದು “ಗೋಧಿ ಬಣ್ಣ ಸಾಧಾರಣ ಮೈಕಟ್ಟು’. ಇನ್ನೊಂದು “ಅಲೋನ್‌’. ಎರಡನ್ನೂ ಒಪ್ಪಿಕೊಂಡೆ. ಕಾರಣ, ಒಂದರಲ್ಲಿ ನೆಗೆಟಿವ್‌ ಟು ಪಾಸಿಟಿವ್‌ ಪಾತ್ರ. ಇನ್ನೊಂದು ಪಾಸಿಟಿವ್‌ ಟು ನೆಗೆಟಿವ್‌ ಪಾತ್ರ. “ಅಲೋನ್‌’ ಚಿತ್ರವನ್ನ ಇನ್ನೂ ಚೆನ್ನಾಗಿ ಮಾಡಬಹುದಿತ್ತೇನೋ? ಅದರಿಂದ ದೊಡ್ಡ ಲೈಫ್ ಸಿಗಬಹುದು ಅಂದುಕೊಂಡಿದ್ದೆ. ನೋಡಿದರೆ, ಅಂಥದ್ದೊಂದು ತಿರುವು ಕೊಟ್ಟಿದ್ದು “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಿಂದ. ಅಲ್ಲಿಯವರೆಗೂ ನನ್ನ ಎಲ್ಲರೂ ಜಗ್ಗ ಅಂತ ಕರೆಯೋರು, “ರಾಜಹುಲಿ’ ಚಿತ್ರದ ಪಾತ್ರ ನೆನಪಿಸಿಕೊಂಡು. “ಗೋಧಿ ಬಣ್ಣ’ ನನಗೆ ವಸಿಷ್ಠ ಅಂತ ಹೆಸರು ತಂದುಕೊಡು¤. ಚಿತ್ರ ಬಿಡುಗಡೆಯಾಗಿ ಈಗಲೂ ಮೆಸೇಜಸ್‌ ಬರುತ್ತಲೇ ಇದೆ. ಹಲವರು ನನ್ನ ಕ್ಯೂಟ್‌ ವಿಲನ್‌, ಚಾಕೋಲೇಟ್‌ ವಿಲನ್‌, ಹ್ಯಾಂಡ್‌ಸಮ್‌ ವಿಲನ್‌ ಅಂತೆಲ್ಲಾ ಕರೀತಿದ್ದಾರೆ. ಒಬ್ರು ಆಂಟಿ ಫೋನ್‌ ಮಾಡಿ, ವಿಲನ್‌ ಪಾತ್ರ ಸಾಯ್ತು ಅಂತ ಕಣ್ಣೀರು ಹಾಕಿದ್ದು ಇದೇ ಮೊದಲು ಅಂತ ಹೇಳಿಕೊಮಡರು. ಆ ಚಿತ್ರದಿಂದ ನನಗೆ ಮಾಸ್‌ ಮತ್ತು ಕ್ಲಾಸ್‌ ಎರಡೂ ತರಹ ಪ್ರೇಕ್ಷಕರು ಸಿಕ್ಕರು’ ಎನ್ನುತ್ತಾರೆ ವಸಿಷ್ಠ. ಏನೂ ಗೊತ್ತಿಲ್ಲದೇ ಬಂದವನು

“ಗೋಧಿ ಬಣ್ಣ’ ಚಿತ್ರ ಆಗಿದ್ದೇ ಆಗಿದ್ದು. ವಸಿಷ್ಠ ಕೈ ತುಂಬಾ ಸಿನಿಮಾಗಳಿವೆಯಂತೆ. “ಆ ಚಿತ್ರ ಆದ ನಂತರ “ಉಪೇಂದ್ರ ಮತ್ತೆ ಹುಟ್ಟಿ ಬಾ’, “ಗಂಡು ಅಂದರೆ ಗಂಡು’, “ಮಫ್ತಿ’, “ದಯವಿಟ್ಟು ಗಮನಿಸಿ’ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸ್ತಾ ಇದ್ದೀನಿ. ಎಲ್ಲದರಲ್ಲೂ ನೆಗೆಟಿವ್‌ ಶೇಡ್‌ ಇರುವ ಪಾತ್ರಗಳೇ. ನನಗೆ ನೆಗೆಟಿವ್‌ ಪಾತ್ರಗಳೇ ಇಷ್ಟ. ಗ್ರೇ ಶೇಡ್‌ ಇರದಿದ್ದರೆ ನಂಗೆ ಆಗಲ್ಲ. ವಿಷ್ಣುವರ್ಧನ್‌ ಮತ್ತು ರವಿಚಂದ್ರನ್‌ ಅವರನ್ನು ಬಿಟ್ಟರೆ, ನನಗೆ ಇಷ್ಟ ಆಗೋದು ರಘುವರನ್‌ ಮತ್ತು ವಜ್ರಮನುನಿ. ಎಲ್ಲರೂ ಹೀರೋಗಳನ್ನ ಮಿಮಿಕ್ರಿ ಮಾಡಿದರೆ, ನಾನು ವಿಲನ್‌ಗಳ ಮಿಮಿಕ್ರಿ ಮಾಡ್ತಿದ್ದೆ. ನನಗೆ ಇಂಥದ್ದೇ ರೋಲ್‌ ಅಂತ ಇಲ್ಲ. ಯಾವುದಾದರೂ ಓಕೆ. ನಿಜ ಹೇಳಬೇಕೆಂದರೆ, ನಾನು ಪುಣ್ಯ ಮಾಡಿದ್ದೆ. ಇದುವರೆಗೂ ಒಂದು ಫೋಟೋ ತೆಗೆಸಿದವನಲ್ಲ ನಾನು. ಡ್ಯಾನ್ಸು, ಫೈಟು ಕಲಿತಿಲ್ಲ. ಬಹುಶಃ ತಯಾರಿ ಇಲ್ಲದೆ ಸಿನಿಮಾಗೆ ಬಂದಿರೋದು ನಾನೊಬ್ಬನೇ ಇರಬೇಕು. ನನ್ನ ಫ್ರೆಂಡ್ಸ್‌ ಎಲ್ಲಾ ಸಾಕಷ್ಟು ಸಿದ್ಧತೆ ಮಾಡಿಕೊಂಡು ಚಿತ್ರರಂಗಕ್ಕೆ ಬಂದವರು. ನಾನೊಬ್ಬನೇ ಏನೂ ಇಲ್ಲ. ಡ್ಯಾನ್ಸ್‌ ಕ್ಲಾಸ್‌ಗೆ ಹೋಗಬೇಕು, ಕಾಂಪಿಟಿಟಿವ್‌ ಆಗಿರಬೇಕು ಅಂತ ನನಗೂ ಅನಿಸೋದು. 

ಅವೆಲ್ಲಾ ಮಾಡಬೇಕು ಅಂದುಕೊಂಡಾಗ ದುಡ್ಡಿರಲಿಲ್ಲ. ಈಗ ದುಡ್ಡಿದೆ, ಆಗ್ತಿಲ್ಲ’ ಎಂದು ನಗುತ್ತಾರೆ ವಸಿಷ್ಠ. ಅವರು ಕಂಡಿಕಕೊಂಡಿರುವಂತೆ, ಪ್ರಪಂಚದಲ್ಲಿ ಯಾವುದಾದರೂ ಕೆಲಸದಲ್ಲಿ ನ್ಯಾಯ ಸಿಗತ್ತೆ ಅಂದ್ರೆ ಅದು ಸಿನಿಮಾ ಅಂತೆ. “ನಾನು ಚಿಕ್ಕಂದಿನಿಂದ ಕೆಲಸ ಮಾಡಿಕೊಂಡು ಬಂದಿದ್ದೀನಿ. 14 ಗಂಟೆ ಕೆಲಸ ಮಾಡಿದ್ದೂ ಇದೆ. ಮ್ಯಾಕ್ಸಿಮಮ್‌ ಮ್ಯಾನೇಜರ್‌ ಆಗಬಹುದು. ಅಲ್ಲೊಂದು ಐಡೆಂಟಿಟಿ ಇಲ್ಲ. ಅಲ್ಲಿರೋದು ಬರೀ ಎಂಪ್ಲಾಯಿ ಕೋಡ್‌ ಅಷ್ಟೇ. ಆ ಕೋಡ್‌ನ‌ಲ್ಲಿ ಯಾರು ಕೆಲಸ ಬೇಕಾದರೂ ಮಾಡಬಹುದು. ಅಲ್ಲಿ ಹೆಸರಿಗೆ ಬೆಲೆ ಇಲ್ಲ. ಅದೇ ಐಡಿಯಲ್ಲಿ ಇನ್ನೊಬ್ಬ ಲಾಗಿನ್‌ ಮಾಡಿದ್ರೂ ಏನೂ ವ್ಯತ್ಯಾಸ ಇಲ್ಲ. ಇಲ್ಲಿ ಹಾಗಿಲ್ಲ. ಪ್ರತಿಯೊಂದು ನಿಮ್ಮ ಕೆಲಸದ ಮೇಲೆ ನಿರ್ಧಾರವಾಗುತ್ತೆ. ಬಹುಶಃ ಸ್ವಲ್ಪ ಬ್ರೇಕ್‌ ತಗೊಳ್ಳೋಣ ಎಂದು ನಿರ್ಧಾರ ಮಾಡಿದ್ದಿಕ್ಕೆ, ಇಲ್ಲಿಯವರೆಗೂ ಬಂದೆ. ಇಲ್ಲದಿದ್ದರೆ ಇಲ್ಲಿಯವರೆಗೂ ಬರೋಕೆ ಆಗುತ್ತಿರಲಿಲ್ಲ. ನಾನು ಹೊರಟಿದ್ದು ಗಾಯಕ ಆಗಬೇಕು ಅಂತ. ಬಟ್‌ ಹಣೆಬರಹದಲ್ಲಿ ಇದು ಬರೆದಿತ್ತೇನೋ?’ ಎಂದು ನಕ್ಕು ಮಾತು ಮುಗಿಸಿದರು ವಸಿಷ್ಠ.
 

Advertisement

Udayavani is now on Telegram. Click here to join our channel and stay updated with the latest news.

Next