Advertisement

ವಸಾಯಿ ಕರ್ನಾಟಕ ಸಂಘ  ದಿ|ಕರ್ನಿರೆ ಸಂಸ್ಮರಣೆ 

04:39 PM Oct 31, 2017 | Team Udayavani |

ಮುಂಬಯಿ: ಸ್ನೇಹಪರ ಧೋರಣೆ, ಪ್ರಾಮಾಣಿಕ ನಿಲುವು, ಶಿಸ್ತು ಹಾಗೂ ಸಮರ್ಪಣಭಾವದಿಂದ ಸಮಾಜ ಸೇವೆಯೊಂದಿಗೆ ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ದುಡಿದವರು. ದಿವಂಗತ ಕರ್ನಿರೆ ಶ್ರೀಧರ ಶೆಟ್ಟಿ. ಅವರ ಇಂದಿನ ವೇದಿಕೆ ಅರ್ಥಪೂರ್ಣವಾಗಿದೆ. ವಿವಿಧ ಜಾತಿ, ಸಂಘಟನೆಗಳಿಗೆ, ಪ್ರಾಂತೀಯ ಸಂಘ-ಸಂಸ್ಥೆಗಳಿಗೆ ವೇದಿಕೆಯನ್ನು ನೀಡಿ ಸಾಂಸ್ಕೃತಿಕ ಲೋಕದ ವಿವಿಧ ಮಜಲುಗಳನ್ನು ಪರಿಚಯಿಸಿದ ಅವರ ಸಾಧನೆ ಅದ್ವಿತೀಯವಾಗಿದೆ ಎಂದು ವಿಶ್ವ ಜಾಗತಿಕ ಬಂಟ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ನುಡಿದರು.

Advertisement

ಅ. 28ರಂದು ವಸಾಯಿ ಪಶ್ಚಿಮದ ಸಾಯಿನಗರ ಮೈದಾನದಲ್ಲಿ ವಸಾಯಿ ಕರ್ನಾಟಕ ಸಂಘದ ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ದಿ| ಕರ್ನಿರೆ ಶ್ರೀಧರ ಶೆಟ್ಟಿ ಸಂಸ್ಮರಣೆ ಮತ್ತು ಯಕ್ಷಕಲಾ ಪೋಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಅರ್ಹ ವ್ಯಕ್ತಿಗೆ ಪ್ರಶಸ್ತಿ, ಸಮ್ಮಾನಗಳನ್ನು ನೀಡಬೇಕು. ಇದರಿಂದ ಅದರ ಘನತೆ, ಮೌಲ್ಯ ವೃದ್ಧಿಯಾಗುತ್ತದೆ. ದಿ| ಕರ್ನಿರೆ ಶ್ರೀಧರ ಶೆಟ್ಟಿ ಅವರಿಗೆ ಮರಣೋತ್ತರ ಯಕ್ಷ ಕಲಾಪೋಷಕ ಪ್ರಶಸ್ತಿ ನೀಡಿರುವುದು ಪಾರದರ್ಶಕ ಸಂಘಟನೆಗೆ ಸಂದ ಗೌರವವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಒ. ಪಿ. ಪೂಜಾರಿ ಅವರು ಮಾತನಾಡಿ, ಕೂಡಿ ಬಾಳುವ ಕಲೆ ಮತ್ತು ವಿವಿಧ ಸಂಘಗಳಲ್ಲಿ ಪದಾಧಿಕಾರಿಗಳಾಗಿ, ಉನ್ನತ ಹುದ್ಧೆಗಳನ್ನು ನಿಭಾಯಿಸುವ ಹೊಣೆಯನ್ನು ಕಲಿಸಿಕೊಟ್ಟವರು ದಿ| ಕರ್ನಿರೆ ಶ್ರೀಧರ ಶೆಟ್ಟಿ ಅವರು. ಅವರ ತ್ಯಾಗ, ಆದರ್ಶ, ಔದಾರ್ಯ, ನಮ್ಮ ಸಂಘದ ಶ್ರೀರಕ್ಷೆಯಾಗಿದೆ. ಅವರ ದಾನಾದಿಗಳಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಅವರ ಜನಪರ ಯೋಜನೆಗಳನ್ನು ಖಾಯಂಗೊಳಿಸಲು ನಾವೆಲ್ಲರೂ ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ದಿ| ಕರ್ನಿರೆ ಶ್ರೀಧರ ಶೆಟ್ಟಿ ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ಅವರ ಪುತ್ರ ಪೃಥ್ವಿರಾಜ್‌ ಎಸ್‌. ಶೆಟ್ಟಿ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೃಥ್ವಿರಾಜ್‌ ಶ್ರೀಧರ ಶೆಟ್ಟಿ ಅವರು, ತಂದೆಯವರ ಕಲಾಸೇವೆ, ಸಮಾಜ ಸೇವೆ, ಸಾಂಸ್ಕೃತಿಕ ವೈಭವ ಇತ್ಯಾದಿಗಳು ಹೇಗೆ ಜನಮನ್ನಣೆ ಗಳಿಸಿವೆ ಎಂಬುದಕ್ಕೆ ಇಂದಿನ ಬೃಹತ್‌ಜನಸ್ತೋಮ ಸಾಕ್ಷಿಯಾಗಿದೆ. ಅವರ ಆದರ್ಶದ ಬದುಕು ನನ್ನ ಜೀವನದಪರಿವರ್ತನೆಗೆ ಪ್ರೇರಣೆಯಾಗಿದೆ. ತಂದೆಯವರು ಕೈಗೊಂಡ ಸಮಾಜ ಪರ ಚಿಂತನೆಗಳನ್ನು ನಾನು ಮುಂದುವರಿಸುವುದಾಗಿ ಭರವಸೆ ನೀಡಿದರು.

Advertisement

  ಯಕ್ಷಗಾನ ಗುರು, ಯಕ್ಷನೃತ್ಯ ಕಲಾನಿಲಯ ಚಾರಿಟೆಬಲ್‌ ಟ್ರಸ್ಟ್‌ ಮುಂಬಯಿ ಇದರ ಸ್ಥಾಪಕ ಕಟೀಲು ಸದಾನಂದ ಶೆಟ್ಟಿ ಅವರು ಮಾತನಾಡಿದರು. ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಕಾರ್ಯಾಧ್ಯಕ್ಷ ಪಾಂಡು ಎಲ್‌. ಶೆಟ್ಟಿ ಸಂಸ್ಥೆಯ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ ಮಾತನಾಡಿ ಶುಭ ಹಾರೈಸಿದರು. ಕರ್ನೂರು ಶಂಕರ ಆಳ್ವ ವಂದಿಸಿದರು.

ವೇದಿಕೆಯಲ್ಲಿ ನಗರ ಸೇವಕ ನಾರಾಯಣ ಜಿ. ಮಾನ್ಕರ್‌, ಪುಷ್ಪಾ ಜಾಧವ್‌, ಉಮಾ ಪಾಟೀಲ್‌, ಕಲಾ ಪೋಷಕರಾದ ಎಂ. ಎಂ. ಹರೀಶ್‌ ಶೆಟ್ಟಿ ಗುರ್ಮೆ, ಅಶೋಕ್‌ ಶೆಟ್ಟಿ ಕಲ್ಪವೃಕ್ಷ, ಪದಾಧಿಕಾರಿಗಳಾದ ಎಚ್‌. ಜಿ. ಕುಂದರ್‌, ಭೋಜ ಟಿ. ಅಂಚನ್‌, ದೇವೇಂದ್ರ ಬುನ್ನನ್‌, ಭಾರತಿ ಶೆಟ್ಟಿ, ಅನಿತಾ ಬುನ್ನನ್‌, ಮೋಹಿನಿ ಮಲ್ಪೆ, ಭಾಸ್ಕರ ಶೆಟ್ಟಿ, ಜಯಾ ಅಶೋಕ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಬಾಲ ಕಲಾವಿದೆಯರಿಂದ ಸುದರ್ಶನ ಗರ್ವಭಂಗ ಮತ್ತು ಕುಶ-ಲವ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು. ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಅಣ್ಣನ ಕನಸಿನ ಕೂಸು ಶ್ರೀ ಕಟೀಲು ಯಕ್ಷಕಲಾ ವೇದಿಕೆ ಸಾಕಾರಗೊಂಡು ಪ್ರತಿಭಾವಂತ ಪುಟಾಣಿ ಕಲಾವಿದರನ್ನು ಹೊಂದಿದೆ. ಸಮಾಜವೇ ನನ್ನ ಕುಟುಂಬ ಎಂಬ ನೆಲೆಯಲ್ಲಿ ಸೇವೆಗೈದ ಅಣ್ಣನ ಪ್ರೀತಿ ಈ ಜನ ಸಾಗರದಲ್ಲಿ ಪ್ರತಿಧ್ವನಿಸುತ್ತಿದೆ 
    – ಕರ್ನಿರೆ ವಿಶ್ವನಾಥ ಶೆಟ್ಟಿ (ಮಾಜಿ ಅಧ್ಯಕ್ಷರು: ಬಂಟರ ಸಂಘ ಮುಂಬಯಿ).

ಜಾತಿ ಮತ ಭೇದ ಇಲ್ಲದೆ ಸಮಾಜ ಸೇವೆ ನಮ್ಮದಾಗಬೇಕು. ಪ್ರತೀ ವರ್ಷ ಜನಮಾನಸದಲ್ಲಿ ಶಾಶ್ವತವಾಗಿರುವ ಕಾರ್ಯಕ್ರಮಗಳು ವಸಾಯಿ ಕರ್ನಾಟಕ ಸಂಘದಲ್ಲಿ ಜರಗಲಿ
– ಲಯನ್‌ ಕೆ. ಟಿ. ಶಂಕರ್‌ (ಸಮಾಜ ಸೇವಕರು).

ಮಕ್ಕಳಿಗೆ ಜವಾಬ್ದಾರಿಯ ಅರಿವನ್ನು ಮೂಡಿಸಬೇಕು. ಪಠ್ಯೇತರ ಚಟುವಟಿಕೆಗಳಿಂದ ದೈಹಿಕ, ಮಾನಸಿಕ, ಬುದ್ಧಿ ಕೌಶಲಗಳು ವಿಕಾಸನಗೊಳ್ಳಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ವಸಾಯಿ ಕರ್ನಾಟಕ ಸಂಘ ತೊಡಗಿರುವುದು ಅಭಿನಂದನೀಯ 
 – ಎಲ್‌. ವಿ. ಅಮೀನ್‌ (ಅಧ್ಯಕ್ಷರು: ಕರ್ನಾಟಕ ಸಂಘ  ಸಾಂತಾಕ್ರೂಜ್‌).

ವಸಾಯಿ ಪರಿಸರದಲ್ಲಿ ವಿವಿಧ ಸಂಘಟನೆಗಳನ್ನು ಒಂದೇ ಸೂರಿನಡಿ ಬೆಳೆಸಿದ ದಿ| ಕರ್ನಿರೆ ಶ್ರೀಧರ ಶೆಟ್ಟಿ ಅವರು ಜಾತೀಯ ಮೇರೆಯನ್ನು ಮೀರಿ, ಸಮಾನತೆಯೊಂದಿಗೆ ಬೆಳೆದವರು. ಅವರ ಸಮಾನತೆಯ ಸಂದೇಶ ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯವಾಗಿದೆ
  – ಶಶಿಧರ ಕೆ. ಶೆಟ್ಟಿ (ಕಾರ್ಯಾಧ್ಯಕ್ಷರು: ಬಂಟರ ಸಂಘ           
       ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿ).
 

Advertisement

Udayavani is now on Telegram. Click here to join our channel and stay updated with the latest news.

Next