Advertisement
ಸ್ಟುಡಿಯೋಗೆ ‘ವರುಣ’ ಎಂದು ಹೆಸರಿಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಇದು ನಾನು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಹೆಸರಲ್ಲ. ವರುಣ ಎಂದರೆ ಮಳೆ ದೇವರ ಹೆಸರು. ನಮ್ಮ ಅಧಿಕೃತ ನಿವಾಸದ ಹೆಸರು ಕಾವೇರಿ ಎಂದಿದ್ದು, ಅದೇನು ಮಡಿಕೇರಿಯೇ?’ ಎಂದು ಪ್ರಶ್ನಿಸಿದರು. ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆಪ್ತ ಕಾರ್ಯದರ್ಶಿ ಹೀರಾ ನಾಯ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಇದ್ದರು.
ಗೃಹ ಕಚೇರಿ ‘ಕೃಷ್ಣಾ’ದ ಬಲಭಾಗದಲ್ಲಿ ಸುಸಜ್ಜಿತ ‘ವರುಣ’ ಸ್ಟುಡಿಯೋ ನಿರ್ಮಾಣವಾಗಿದೆ. ಸಂದರ್ಶನ, ಸಂವಾದಕ್ಕೆ ಪೂರಕವಾದ ಸಕಲ ಸೌಕರ್ಯವನ್ನು ಒಂದೇ ಸೂರಿನಡಿ ಕಲ್ಪಿಸಲಾಗಿದೆ. ಸಂದರ್ಶನಕ್ಕೆ ಅನುಕೂಲವಾಗುವಂತೆ ಆಸನ ವ್ಯವಸ್ಥೆ, ಧ್ವನಿ- ಬೆಳಕಿನ ಸೌಲಭ್ಯ, ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದ ಹಿನ್ನೆಲೆ ಪರದೆ, ಟೆಲಿಪ್ರಾಂಪ್ಟರ್, ರೆಕಾರ್ಡಿಂಗ್ ಸಲಕರಣೆಗಳು, ಕಂಪ್ಯೂಟರ್ ಸೇರಿದಂತೆ ಇತರೆ ಸೌಲಭ್ಯವನ್ನು ಸ್ಟುಡಿಯೋ ಒಳಗೊಂಡಿದೆ. ಇದರಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರತಿನಿಧಿಗಳು ತಮ್ಮ ಕ್ಯಾಮೆರಾದೊಂದಿಗೆ ತೆರಳಿ ಸ್ಟುಡಿಯೋದಲ್ಲೇ ಸಂಪೂರ್ಣ ಸಂದರ್ಶನ ನಡೆಸಬಹುದು. ಮಾಧ್ಯಮಗಳಿಗೆ ಸಂದರ್ಶನ ನೀಡಲು, ಸಂವಾದ ನಡೆಸುವುದಕ್ಕೆ ಸ್ಟುಡಿಯೋ ಸೀಮಿತವಾಗಿಲ್ಲ. ಮುಖ್ಯಮಂತ್ರಿಗಳು ಆಗಾಗ್ಗೆ ನೀಡುವ ಸಂದೇಶಗಳು, ಹೇಳಿಕೆಗಳ ಧ್ವನಿ ಹಾಗೂ ದೃಶ್ಯ ಚಿತ್ರೀಕರಣವೂ ಸ್ಟುಡಿಯೋದಲ್ಲೇ ನಡೆಯಲಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.