ಕೋಲಾರ: ಅವಿಭಜಿತ ಜಿಲ್ಲೆಯ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು, ವಿಧಾನ ಪರಿಷತ್ ಟಿಕೆಟ್ ವಂಚಿತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆ ಸಚಿವರಾದ ಸುಧಾಕರ್, ಮುನಿರತ್ನ, ಸಂಸದ ಮುನಿಸ್ವಾಮಿ, ಶಾಸಕ ಎಚ್.ನಾಗೇಶ್ ಮಾಜಿ ಶಾಸಕ ವರ್ತೂರು ಮನೆಗೆ ಭೇಟಿ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಶನಿವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಕಾಂಗ್ರೆಸ್ ಹೈಕಮಾಂಡ್‌ಗೆ ಟಾಂಗ್ ನೀಡಿದ್ದಾರೆ. ಪಕ್ಷದ ಅಭ್ಯರ್ಥಿ ಎಂ.ಅನಿಲ್‌ಕುಮಾರ್ ತಮ್ಮ ಮನೆಗೆ ಬಂದರೂ ಮಾತನಾಡಲು ಒಪ್ಪದ ಚಂದ್ರಾರೆಡ್ಡಿ, ಶನಿವಾರ ಅಧಿಕೃತವಾಗಿ ಬಿಜೆಪಿಗೆ ಸೇರಿದ್ದು, ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪರ ಬ್ಯಾಟಿಂಗ್ ಮಾಡಲಾರಂಭಿಸಿದ್ದಾರೆ. ಬಿಜೆಪಿಗೆ ಚಂದ್ರಾರೆಡ್ಡಿ ಸೇರ್ಪಡೆಯಾಗುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿಗಳೇ ಮಾಜಿ ಸಚಿವ ವರ್ತೂರು ಪ್ರಕಾಶ್‌ರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದಾರೆನ್ನೆಲಾಗಿದ್ದು, ಇದೀಗ ಅಲ್ಲಿಂದ ನೇರವಾಗಿ ಸಚಿವದ್ವಯರು, ಸಂಸದರ ತಂಡ ವರ್ತೂರು ಪ್ರಕಾಶ್ ಮನೆಗೆ ಆಗಮಿಸಿದರು.
ವರ್ತೂರು ಮನೆಯಲ್ಲಿ ಊಟ: ಬಿಜೆಪಿಗೆ ಸೇರ್ಪಡೆಗೊಂಡ ಚಂದ್ರಾರೆಡ್ಡಿ ಜತೆಯಲ್ಲೇ ಸಚಿವರಾದ ಮುನಿರತ್ನ, ಡಾ.ಸುಧಾಕರ್, ಸಂಸದ ಎಸ್.ಮುನಿಸ್ವಾಮಿ ಮಾಜಿ ಸಚಿವ ವರ್ತೂರ್ ಪ್ರಕಾಶ್ ಮನೆಗೆ ಭೇಟಿ ನೀಡಿದ್ದು, ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮತಬ್ಯಾಂಕ್ ಛಿದ್ರಮಾಡುವಲ್ಲಿ ಯಶಸ್ಸಿನತ್ತ ಹೆಜ್ಜೆಯಿಟ್ಟಿದ್ದಾರೆ. ವರ್ತೂರು ಪ್ರಕಾಶ್ ಮನೆಯಲ್ಲಿ ಭರ್ಜರಿ ಮಾಂಸದೂಟ ಸವಿದನಂತರ ಸುದ್ದಿಗೋಷ್ಠಿ ನಡೆಸಿದ ಮುಖಂಡರು ತಮ್ಮ ನಿಲುವುಗಳನ್ನು ಪ್ರಕಟಿಸಿದರು.
ವರ್ತೂರು ಪ್ರಕಾಶ್ ಮಾತನಾಡಿ, ಬಿಜೆಪಿ ಮುಖಂಡರು ತಮ್ಮ ಮನೆಗೆ ಊಟಕ್ಕೆ ಬರುವುದಾಗಿ ಹೇಳಿದ್ದರು. ಬಂದು ಊಟ ಮಾಡಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಕೇಳಿದ್ದಾರೆ. ಈ ಕುರಿತು ಭಾನುವಾರ ತಮ್ಮ ಬೆಂಬಲಿಗರ ಸಭೆ ಕರೆದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಘೋಷಿಸಿದರು.
ಇಂದೇ ಅಂತಿಮ ನಿರ್ಧಾರ: ಜೆಡಿಎಸ್ ಅಭ್ಯರ್ಥಿ ವಕ್ಕಲೇರಿ ರಾಮುವನ್ನು ತಾವೇ ಜಿಪಂ ಸದಸ್ಯರನ್ನಾಗಿ ಮಾಡಿದ್ದೆ, ಆನಂತರ ಬೆನ್ನಿಗೆ ಚೂರಿ ಹಾಕಿದ್ದರು. ಹಾಗೆಯೇ ಕಳೆದ ಬಾರಿ ಅನಿಲ್‌ಕುಮಾರ್‌ಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದೆ. ಆನಂತರ ಅವರು ತಮ್ಮ ಚೂರಿ ಹಿರಿದವರೆ, ಆದ್ದರಿಂದ ಸೌಮ್ಯ ಸ್ವಭಾವದ ಬಿಜೆಪಿ ಅಭ್ಯರ್ಥಿ ಡಾ.ವೇಣುಗೋಪಾಲ್‌ರನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ, ಈ ವಿಚಾರವನ್ನು ಕಾರ್ಯಕರ್ತರ ಮುಂದಿಟ್ಟು ಅಂತಿಮ ನಿರ್ಧಾರ ಘೋಷಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ವೆಂಕಟಮುನಿಯಪ್ಪ, ಮಂಜುನಾಥಗೌಡ, ಚಂದ್ರಾರೆಡ್ಡಿ, ಶ್ರೀನಿವಾಸ್, ವೆಂಕಟಮುನಿಯಪ್ಪ, ವರ್ತೂರು ಪ್ರಕಾಶ್ ಬೆಂಬಲಿತ ಮುಖಂಡರು ಇತರರು ಹಾಜರಿದ್ದರು. ಇದೀಗ ಬಿಜೆಪಿ ಸೇರ್ಪಡೆ ಕುರಿತು ವರ್ತೂರು ಪ್ರಕಾಶ್ ಭಾನುವಾರ ತೆಗೆದುಕೊಳ್ಳುವ ನಿಲುವು ಕೋಲಾರ ರಾಜಕೀಯ ಧ್ರುವೀಕರಣದ ಮತ್ತೂಂದು ಮಜಲಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗುತ್ತಿದೆ.