ಮುಂಬೈ:ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿರುವ ಕವಿ, ಹೋರಾಟಗಾರ ವರವರ ರಾವ್ ಗೆ ಮತ್ತೊಮ್ಮೆ ಖಾಸಗಿಯವರಿಂದ ಆರೋಗ್ಯ ತಪಾಸಣೆ ನಡೆಸಲು ಬಾಂಬೆ ಹೈಕೋರ್ಟ್ ಗುರುವಾರ(ನವೆಂಬರ್ 12, 2020) ಅನುಮತಿ ನೀಡಿದ್ದು, ನ.17ರವರೆಗೆ ಜಾಮೀನು ನೀಡಲು ನಿರಾಕರಿಸಿದೆ.
ತನ್ನ ಪತಿ ಜೈಲಿನಲ್ಲಿ ಹಾಸಿಗೆ ಹಿಡಿದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಬೇಕೆಂದು ಕೋರಿ ರಾವ್ ಪತ್ನಿ ಪೆಂದ್ಯಾಲಾ ಹೇಮಲತಾ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದೆ.
ಇಂದು ಅಥವಾ ನಾಳೆ ನಾನಾವತಿ ಆಸ್ಪತ್ರೆಯ ವೈದ್ಯರುಗಳ ಮೂಲಕ ವರವರರಾವ್ ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಗ್ಯದ ಬಗ್ಗೆ ವಿಚಾರಿಸಿ, ವರದಿ ನೀಡುವಂತೆ ಸೂಚಿಸಿರುವ ಬಾಂಬೆ ಹೈಕೋರ್ಟ್ ನವೆಂಬರ್ 17ರಂದು ಮತ್ತೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 2018ರಲ್ಲಿ ವರವರ ರಾವ್ ಅವರನ್ನು ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಬಂಧಿಸಲಾಗಿತ್ತು. ಒಂದು ವರ್ಷಗಳ ಕಾಲ ಯಾವುದೇ ವಿಚಾರಣೆ ನಡೆಸದೇ ಅವರನ್ನು ಬಂಧಿಸಲು ಅವಕಾಶ ನೀಡಲಾಗಿತ್ತು. ಅವರು ಅನಾರೋಗ್ಯದಿಂದ ಇದ್ದು ಜಾಮೀನು ನೀಡಬೇಕೆಂದು ಕುಟುಂಬ ಸದಸ್ಯರು ಹಲವು ಬಾರಿ ಜಾಮೀನು ಅರ್ಜಿ ಸಲ್ಲಿಸಿದ್ದರು ಕೂಡಾ ಜಾಮೀನು ನಿರಾಕರಿಸಿತ್ತು.