ನೆಲಮಂಗಲ: ಬಹುಭಾಷಾ ನಟಿ ಲೀಲಾವತಿ ಅವರ ಸವಿನೆನಪಿನಲ್ಲಿ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಅವರ ಪುತ್ರ, ನಟ ವಿನೋದ್‌ರಾಜ್ ನಿರ್ಮಿಸಿದ “ವರನಟಿ ಡಾ| ಎಂ. ಲೀಲಾವತಿ ದೇಗುಲ’ವನ್ನು ಗುರುವಾರ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿ, ತಾಯಿಯೇ ದೇವರೆಂದು ಲೀಲಾವತಿಯವರ ಸೇವೆ ಉಳಿಯುವಂತೆ ಮಾಡಿದ ವಿನೋದ್‌ರಾಜ್ ಜತೆ ಸರಕಾರ ಸದಾಕಾಲ ಇರಲಿದೆ. ರಂಗಭೂಮಿಯಿಂದ ಚಲನಚಿತ್ರ ಗಳವರೆಗೂ 60 ವರ್ಷಗಳ ಕಾಲ ಕಲಾಸೇವೆ ಸಲ್ಲಿಸಿದ ಡಾ| ಲೀಲಾವತಿಯವರು ದೇಶಕ್ಕೆ ಕೀರ್ತಿ ತರುವಂತಹ ಮಹಾ ಚೇತನ ಎಂದರು.
ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ನಾಥ ಸ್ವಾಮೀಜಿ ಮಾತನಾಡಿ, ಈ ದೇಗುಲ ಕಲಾವಿದರಿಗೆ ಕಲಿಕೆಯ ಪಾಠ ಶಾಲೆಯಾಗಲಿದೆ ಎಂದು ತಿಳಿಸಿದರು.
ವರ್ಷದಿಂದ ತಾಯಿಯಿಲ್ಲದೇ ನೋವಿನಿಂದ ನರಳಾಡಿದ್ದೇನೆ. ನನ್ನ ದೇವರಿಗೆ ಗುಡಿಕಟ್ಟಿದ್ದು, ಎಲ್ಲ ಕಲಾವಿದರು, ಅಭಿಮಾನಿಗಳಿಗೆ ಅಮ್ಮನನ್ನು ನೋಡಲು ಮುಕ್ತ ಅವಕಾಶವಿದೆ.
– ವಿನೋದ್‌ರಾಜ್, ನಟ