Advertisement
ಸಾಮಾನ್ಯವಾಗಿ ಲಕ್ಷ್ಮೀ ಎಂದರೆ ಧನ ಧಾನ್ಯ ಸಂಪನ್ನತೆ ಎಂದೇ ಭಾವಿಸಲಾಗಿದೆ. ಅದೂ ಸರಿಯೇ. ತಪ್ಪೇನಲ್ಲ. ಆದರೆ ಲಕ್ಷ್ಮೀಯನ್ನು ಆರಾಧಿಸುವುದು ಸಂತೃಪ್ತತೆಗಾಗಿ. ತೃಪ್ತಿಯೇ ಲಕ್ಷ್ಮೀ ಕಟಾಕ್ಷ. ಆ ತೃಪ್ತಿಯನ್ನು ಕೆಲವರು ಶ್ರೀಮಂತಿಕೆಯ ರೂಪದಲ್ಲಿ, ಕೆಲವರು ಮನೆಯ ಸೌಕರ್ಯಗಳಿಂದ ಪಡೆಯಬಹುದು. ಇನ್ನು ಕೆಲವರು ಸಮಾಜ ಸೇವೆ ಮಾಡಿ ತೃಪ್ತರಾಗ ಬಹುದು. ಮತ್ತೆ ಕೆಲವರು ಭರ್ಜರಿ ಭಕ್ಷ್ಯಭೋಜ್ಯ ಗಳನ್ನು ತಿಂದೂ ತೃಪ್ತರಾಗಬಹುದು. ಒಟ್ಟಿನಲ್ಲಿ ಸಂತೃಪ್ತಿಯೇ ಲಕ್ಷ್ಮೀ.
Related Articles
Advertisement
ಲಕ್ಷ್ಮೀಯ ಕೃಪಾ ಕಟಾಕ್ಷವು ಹೆಚ್ಚುತ್ತಾ ಬಂತು. ದೇವೇಂ ದ್ರನು ಸ್ವರ್ಣ ರಾಶಿಯಲ್ಲೇ ಕುಳಿತನು. ಅದೊಂದು ದಿನ ದೂರ್ವಾಸ ಋಷಿ ಗಳು ದೇವೇಂದ್ರನ ಬಲ ವೃದ್ಧಿಗಾಗಿ ತನ್ನ ತಪೋಬಲವನ್ನು ಮಂದಾರ ಪುಷ್ಪದ ಮಾಲೆಗೆ ಆವಾಹಿಸಿ ದೇವೇಂದ್ರನಲ್ಲಿಗೆ ಬರುತ್ತಾರೆ. ದೇವೇಂದ್ರನು ಸರ್ವಾಭರಣ ಯುಕ್ತನಾಗಿ ಐರಾವತವನ್ನೇರಿ ಮೆರವಣಿಗೆಯಲ್ಲಿ ಇರುತ್ತಾನೆ. ದೂರ್ವಾಸರನ್ನು ಕಂಡ ತತ್‌ಕ್ಷಣ ಐರಾವತದಿಂದ ಇಳಿದು ನಮಸ್ಕರಿಸುತ್ತಾನೆ. ಪ್ರಸನ್ನರಾದ ದೂರ್ವಾಸರು, “ಹೇ ಸುರಾಧಿಪಾ, ಇದೋ ನಿನ್ನ ಬಲ ಇನ್ನಷ್ಟು ವೃದ್ಧಿಯಾಗಲೆಂದು ಈ ಮಂದಾರ ಪುಷ್ಪದ ಹಾರಕ್ಕೆ ನನ್ನ ತಪೋಶಕ್ತಿಯನ್ನು ಧಾರೆ ಎರೆದು ಕೊಡುತ್ತಿದ್ದೇನೆ. ನಿನ್ನ ಕಂಠಾಭರಣವಾಗಿ ಹಾಕಿಕೋ. ಎಂದಿಗೂ ಬಾಡದ ಹಾರವಿದು’ ಎಂದು ಹಾರವನ್ನು ದೇವೇಂದ್ರನ ಕೊರಳಿಗೆ ಹಾಕುತ್ತಾರೆ.
ದೇವೇಂದ್ರ ದೂರ್ವಾಸರನ್ನು ಬೀಳ್ಕೊಟ್ಟು ಐರಾವತವೇರಿದ. ಆಗ ಏನಾಯಿತೋ ಇದ್ದಕ್ಕಿದ್ದಂತೆ ಈ ಹಾರವು ದೇವೇಂದ್ರನಿಗೆ ಅಷ್ಟು ಸರಿಕಾಣದೆ ಅದನ್ನು ಐರಾವತದ ಕೊರಳಿಗೆ ಹಾಕಿದ. ವೈಕುಂಠದಿಂದ ಇದನ್ನೆಲ್ಲ ಲಕ್ಷ್ಮೀಯು ನೋಡುತ್ತಾ ನಗುತ್ತಿದ್ದಳು. ಗ್ರಹಚಾರಕ್ಕೆ ದೂರ್ವಾಸರೂ ನೋಡಬೇಕೇ. ಆಗ ಐರಾವತವು ಮಂದಾರ ಹಾರವನ್ನು ಸೊಂಡಿಲಿನ ಮೂಲಕ ತೆಗೆದು ಬಾಯಿಗೆ ಇಟ್ಟು ನುಂಗುತ್ತದೆ. ಇದನ್ನೆಲ್ಲ ನೋಡುತ್ತಿದ್ದ ದೂರ್ವಾಸರಿಗೆ ಸಹಿಸಲಾರದ ಕೋಪ ಬರುತ್ತದೆ. ಎಲವೋ ಮದಾಂಧಾ. ನನಗೆ ನೀನು ಅವಮಾನ ಮಾಡಿದೆ. ನನ್ನ ತಪಸ್ಸಿಗೆ ಅವಮಾನಿಸಿದೆ. ಈ ಕ್ಷಣದಲ್ಲೇ ನಿನ್ನ ಗಜರಾಜನು ಹಾರವನ್ನು ನುಂಗಿದಂತೆ ನಿನ್ನ ಸರ್ವ ಸಂಪತ್ತು ಜಲಾಧಿ ವಾಸವಾಗಲಿ ಎಂದು ಶಾಪ ನೀಡಿದರು. ಇದು ಸಂತೃಪ್ತಿಯ ಅಹಂಕಾರದ ಒಂದು ದುರಂತದ ಮೂಲ. ಪುರಾಣ ಕಥೆಯು ಜೀವನದ ತತ್ತ್ವವಾದರ್ಶವನ್ನೇ ಹೇಳಿದೆ ಎಂಬುದನ್ನು ನಾವಿಲ್ಲಿ ಕಾಣಬಹುದು. ಈ ಶಾಪವೇ ಸಮುದ್ರ ಮಥನಕ್ಕೊಂದು ಕಾರಣವಾಯಿತು. ಅಂತಹ ದೇವ-ಸುರರ ಶ್ರಮದ ಸಮುದ್ರ ಮಥನದಲ್ಲಿ ಬಂದವಳೇ ಲಕ್ಷ್ಮೀ ದೇವಿ.
ದೇವಾಸುರರಿಗೂ ಪ್ರಿಯವಾದ ಈ ದೇವಿಯ ಆರಾಧನೆ ಇಂದಿಗೂ ನಡೆಯುತ್ತಿದೆ. ಇಂತಹ ಶ್ರಾವಣ ಮಾಸದ ಶುಭ ಶುಕ್ರವಾರಗಳಲ್ಲಿ ವರ ಲಕ್ಷ್ಮೀಯಾಗಿ ಆರಾಧಿಸುತ್ತಾ ಬಂದಿದ್ದಾರೆ. ಎಲ್ಲ ಪ್ರಜೆಗಳಿಗೆ ಲಕ್ಷ್ಮೀ ಅನುಗ್ರಹ ಪ್ರಾಪ್ತಿಯಾಗಲಿ.
-ವಿದ್ವಾನ್ ಪ್ರಕಾಶ್ ಅಮ್ಮಣ್ಣಾಯ,ಕಾಪು