Advertisement

Varalakshmi Festival: ವರಲಕ್ಷ್ಮೀ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ 

03:05 PM Aug 24, 2023 | Team Udayavani |

ಮೈಸೂರು: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳಲ್ಲಿ ಮಿಂದೇಳುವ ಜನತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಶಾಕ್‌ ನೀಡಿದೆ. ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆ ಅಗತ್ಯ ವಸ್ತುಗಳಾದ ತರಕಾರಿ, ಹೂ-ಹಣ್ಣು ಹಾಗೂ ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದೆ.

Advertisement

ನಾಗರ ಪಂಚಮಿ, ವರಮಹಾಲಕ್ಷ್ಮೀಯಿಂದ ಹಿಡಿದು ದೀಪಾವಳಿವರೆಗೂ ವಾರದಲ್ಲಿ ಒಂದಲ್ಲಾ ಒಂದು ಹಬ್ಬ ಆಗಮಿಸುತ್ತಲೇ ಇರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿನ ಹಣ್ಣು ಮತ್ತು ತರಕಾರಿ ಬೆಲೆಯೂ ಗಗನಕ್ಕೇರಿದೆ. ಆದರೆ, ಮಾಂಸಾಹಾರದ ಬೆಲೆ ಕೊಂಚ ಕಡಿಮೆಯಾಗಿದೆ.

ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ: ವರಲಕ್ಷ್ಮೀ ಹಬಕ್ಕೆ ಒಂದು ದಿನ ಬಾಕಿ ಇರುವಂತೆಯೇ ಜಿಲ್ಲೆಯಲ್ಲಿ ತರಕಾರಿ, ಹಣ್ಣು ಮತ್ತು ಹೂವು ಬೆಲೆ ಹೆಚ್ಚಳವಾಗಿದೆ. ಪೂರೈಕೆಯಷ್ಟೇ ಬೇಡಿಕೆ ಇರುವುದರಿಂದ ಹಣ್ಣು, ಹೂ ಬೆಲೆಯೂ ಹೆಚ್ಚಾಗುತ್ತಿದೆ. ಶ್ರಾವಣದಲ್ಲಿ ಶುಭ ಸಮಾರಂಭ ಹೆಚ್ಚಾಗಿ ನಡೆಯವುದರಿಂದ ಹೂವಿನ ಬೆಲೆಯಲ್ಲಿ ಏರಿಕೆಯಾಗಿದೆ. 60ರಿಂದ 80ರೊಳಗೆ ಸಿಗುತ್ತಿದ್ದ ಮಾರು ಹೂ ಇಂದು 100ರಿಂದ 130ರೂ. ತನಕ ಮಾರಾಟವಾಗುತ್ತಿದೆ.

ಕೆಲ ತರಕಾರಿ ಬೆಲೆ ಸ್ಥಿರ: ಕಳೆದ ತಿಂಗಳು 100 ರೂ. ದಾಟಿದ್ದ ಟೊಮೆಟೋ ಬೆಲೆ ಇಳಿಕೆ ಯಾಗಿದೆ. ಇದನ್ನು ಹೊರತು ಪಡಿಸಿ, ಒಂದಿಷ್ಟು ತರಕಾರಿ ಬೆಲೆಯೂ ಸ್ಥಿರವಾಗಿದ್ದರೆ ಇನ್ನೂ ಕೆಲ ತರಕಾರಿ ಬೆಲೆ ಕೊಂಚ ಏರಿಕೆಯಾಗಿದೆ. ಬದನೆಕಾಯಿ, ಹಾಗಲಕಾಯಿ, ಕ್ಯಾರೆಟ್‌, ಬಿಟ್ರೋಟ್‌ ಸೇರಿ ಇತರೆ ತರಕಾರಿ ಬೆಲೆ ಒಂದೇ ಬೆಲೆ ಆಸುಪಾಸಿನಲ್ಲಿ ಮಾರಾಟವಾದರೆ, ಮೆಣಸಿನಕಾಯಿ, ಬೀನ್ಸ್‌, ಬಜ್ಜಿ ಮೆಣಸಿನಕಾಯಿ ಬೆಲೆ ಏರಿಕೆಯಾಗಿದೆ.

ಕಡಿಮೆಯಾದ ಮಾಂಸದ ಬೆಲೆ: ಕಳೆದ ಒಂದು ತಿಂಗಳ ಹಿಂದೆ ಪ್ರತಿ ಕೆ.ಜಿ.ಗೆ 230ರೂ ತನಕ ಮಾರಾಟವಾಗಿದ್ದ ಕೋಳಿ ಮಾಂಸದ ಬೆಲೆ 180 ರೂ.ಗೆ ಇಳಿಕೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮಾಂಸದ ಬೆಲೆಯೂ ಕಡಿಮೆಯಾಗಿದೆ. ಸಾಲು ಸಾಲು ಹಬ್ಬ ಆಗಮಿಸುವ ಹಾಗೂ ಶ್ರಾವಣ ಮಾಸದಲ್ಲಿ ಹಲವರು ಮಾಂಸಾಹಾರ ತ್ಯಜಿಸುತ್ತಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಇಗಿರುವುದರಿಂದ ಹಾಗೂ ಪೂರೈಕೆ ಹೆಚ್ಚಿರುವುದರಿಂದ ಕೋಳಿ ಮಾಂಸದ ಬೆಲೆಯೂ ಕಡಿಮೆಯಾಗಿದೆ.

Advertisement

ಮುಂಬರುವ ಹಬ್ಬಗಳಿವು: ಶ್ರಾವಣ ಮಾಸದಲ್ಲಿ ಮುಖ್ಯವಾಗಿ ನಾಗರ ಪಂಚಮಿ, ಸಿರಿಯಾಳ ಷಷ್ಠಿ, ವರಮಹಾಲಕ್ಷ್ಮೀ ವ್ರತ, ಉಪಾಕರ್ಮ, ರಕ್ಷಾ ಬಂಧನ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಕೃಷ್ಣ ಜನ್ಮಾಷ್ಠಮಿ, ಮಂಗಳ ಗೌರಿ ವ್ರತ ಹಾಗೂ ಶ್ರಾವಣ ಶನಿವಾರ ಹಬ್ಬ ಆಚರಿಸಲಾಗುತ್ತದೆ. ಹೀಗೆ ಮುಂದುವರಿದು ಭಾದ್ರ ಪದ ಮಾಸದಲ್ಲಿ ಗೌರಿ-ಗಣೇಶ ಹಬ್ಬ, ಅನಂತ ಚತು ರ್ಥಿ ಬಂದರೆ ಅಶ್ವಯುಜ ಮಾಸದಲ್ಲಿ ಮಹಾಲಯ ಅಮವಾಸ್ಯೆ, ನವರಾತ್ರಿ, ಆಯುಧಪೂಜೆ ಹಾಗೂ ಕಾರ್ತಿಕ ಮಾಸದಲ್ಲಿ ದೀಪಾವಳಿ ಹಬ್ಬ ಬರಲಿದೆ.

ವರಲಕ್ಷ್ಮೀ ಹಬ್ಬ ಹಿನ್ನೆಲೆ ಹೂ ಬೆಲೆಯೂ ಹೆಚ್ಚಾಗಿದೆ. ತಮಿಳುನಾಡಿನಿಂದ ಮಲ್ಲಿಗೆ ಹೂ ತರಿಸಿ ಮಾರಾಟ ಮಾಡುತ್ತೇವೆ. ಪಕ್ಕದ ಶ್ರೀರಂಗಪಟ್ಟಣ, ಬನ್ನೂರು ವಿವಿಧೆಡೆಯಿಂದ ಸೇವಂತಿ, ಕನಕಾಂಬರ ಹೂ ಬರುತ್ತವೆ. ಸೀಜನ್‌ ಇರುವುದರಿಂದ ಸಾಮಾನ್ಯವಾಗಿ ಬೆಲೆ ಹೆಚ್ಚಾಗಲಿದೆ. –ಕಮಲಮ್ಮ, ಹೂವಿನ ವ್ಯಾಪಾರಿ

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next