Advertisement

ಹೊಸಂಗಡಿಗೆ ವಾರಾಹಿ ನೀರು: ಈಡೇರದ ದಶಕಗಳ ಬೇಡಿಕೆ  

12:30 AM Jan 26, 2019 | |

ಸಿದ್ದಾಪುರ: ಜಲ ಸಂಪತ್ತು ಹೇರಳವಾಗಿದ್ದರೂ, ಕುಂದಾಪುರ ತಾ. ಹೊಸಂಗಡಿ ಗ್ರಾಮಕ್ಕೆ ಕುಡಿಯುವ ನೀರಿನ ಬರ ತಪ್ಪಿಲ್ಲ.  ಇದಕ್ಕೆ ಪರಿಹಾರವಾಗಿ ವಾರಾಹಿ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ, ಸಾವಿರಾರು ಎಕರೆ ಭೂಮಿಗೆ ನೀರುಣಿಸಬಹುದಾಗಿದೆ.  

Advertisement

ಹೊಸಂಗಡಿ ಗ್ರಾಮಕ್ಕೆ ನೀರು ಬಳಸಿಕೊಳ್ಳುವಲ್ಲಿ ಇಚ್ಛಾಶಕ್ತಿ ಕೊರತೆ ಪ್ರಮುಖವಾಗಿ ಕಾಡಿದೆ. ಇಲ್ಲಿ ರಾಜರ ಕಾಲದ ಕೆರೆ ಹಾಗೂ ಮದಗಗಳಿವೆ. ಇವುಗಳಲ್ಲಿ ಕೋಟೆಕೆರೆ ಕೂಡ ಒಂದು. ಇದಕ್ಕೆ  ವಾರಾಹಿ ನದಿಯ ನೀರು ಹಾಯಿಸಿದರೆ ಕೃಷಿ ಭೂಮಿಗೆ, ಜನ- ಜನುವಾರುಗಳಿಗೆ, ಕಾಡು ಪ್ರಾಣಿಗಳಿಗೆ ಅನುಕೂಲವಾಗಲಿದೆ.

ಕಡಿಮೆ ಖರ್ಚ, ದೊಡ್ಡ ಲಾಭ
ಭಾಗೀಮನೆ ಹಾಗೂ ಹೊನಕನಬೈಲು ಕೆರೆ ಮೂರು ಕಿ.ಮೀ ಅಂತರದಲ್ಲಿದೆ. ಭಾಗೀಮನೆ ಬಳಿ ವಾರಾಹಿ ನದಿಯ ನೀರನ್ನು ಪಂಪ್‌ ಮೂಲಕ ಸುಮಾರು 8ಎಕ್ರೆ ವಿಸ್ತೀರ್ಣ ಹೊಂದಿರುವ ಹೊನಕನಬೈಲು ಕೆರೆಗೆ ಹಾಯಿಸಿ, ಅಲ್ಲಿಂದ ನೈಸರ್ಗಿಕ ನಾಲೆಯಲ್ಲಿ ಕೋಟೆಕೆರೆಗೆ ನೀರು ಹರಿಯಲು ಅನುಕೂಲ ಕಲ್ಪಿಸಬೇಕು. ಕೃಷಿ ಭೂಮಿಗೆ ಅನುಕೂಲವಾಗುವುದರ ಜತೆಗೆ ಆ ಭಾಗಗಳ ಕುಡಿಯುವ ನೀರಿನ ಮೂಲವು ವೃದ್ಧಿಸುತ್ತವೆ. ಈ ಯೋಜನೆಗೆ ಸರಕಾರ ಪಂಪ್‌ ಹಾಗೂ ಪೈಪ್‌ಲೈನ್‌ಗೆ ಖರ್ಚು ಮಾಡಿದರೆ ಸಾಕಾಗುತ್ತದೆ. ಇಚ್ಛಾಶಕ್ತಿ ಇದ್ದರೆ ಕಡಿಮೆ ಖರ್ಚಿನಲ್ಲಿ ದೊಡ್ಡ ಲಾಭ ಪಡೆಯಬಹುದಾಗಿದೆ.
  
ದಶಕಗಳ ಬೇಡಿಕೆ 
ವಾರಾಹಿ ನೀರನ್ನು ಹೊನಕನಬೈಲು ಕೆರೆಗೆ ಹಾಯಿಸುವ ಮೂಲಕ ಹತ್ತಾರು ಹಳ್ಳಿಗಳಿಗೆ ನೀರು ಕಲ್ಪಿಸುವ ಈ ಯೋಜನೆ ಹತ್ತು ವರ್ಷಗಳ ಹಿಂದೆ ತಯಾರಾಗಿದ್ದರೂ, ಈವರೆಗೂ ಯೋಜನೆ ಈಡೇರಲಿಲ್ಲ.  ಸುಮಾರು ಹತ್ತು ವರುಷಗಳ ಹಿಂದೆ ಈ ಬಗ್ಗೆ ಸರ್ವೇ ನಡೆದಿದ್ದರೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ರಾಜಕಾರಣಿಗಳ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ. 

ಹಳ್ಳಿಗಳಿಗೆ ಅನುಕೂಲ 
ವಾರಾಹಿ ನೀರನ್ನು ಹೊನಕನಬೈಲು ಕೆರೆಗೆ ಹಾಯಿಸಿದಲ್ಲಿ ಮುತ್ತಿನಕಟ್ಟೆ, ಕಂಟಗದ್ದೆ, ಕೆರೆಕಟ್ಟೆ ಹೆನ್ನಾಬೈಲು, ಬಾಳೆಜೆಡ್ಡು, ಚಕ್ತಿಬೇರು, ಅಬ್ಬಿಮಕ್ಕಿ, ಸಿದ್ದಾಪುರ ಸಣ್ಣಹೊಳೆ ಮೂಲಕ ವಳಾಲು, ಕಾನೂಹೊಳೆ ಮೂಲಕ ಕಳ್ಳಿನಜೆಡ್ಡು ಬಳಿ ಪುನ: ವಾರಾಹಿ ನದಿ ಸೇರುತ್ತದೆ. 
ಇದರಿಂದ ಹಳ್ಳಿಗಳ ರೈತ ಕುಟುಂಬಗಳಿಗೆ ಅನುಕೂಲವಾಗುತ್ತದೆ.  

ಅನುಕೂಲ
ವಾರಾಹಿ ನದಿ ನೀರು ಹೊನಕನಬೈಲು ಕೆರೆಗೆ ಹಾಯಿಸುವ ಬಗ್ಗೆ 10 ವರ್ಷಗಳ ಹಿಂದೆ ಯೋಜನೆ ತಯಾರಾಗಿದ್ದು ಕಾರಣಾಂತರದಿಂದ ಸ್ಥಗಿತಗೊಂಡಿದೆ. ಯೋಜನೆ ಕಾರ್ಯಗತವಾದಲ್ಲಿ  ಕೃಷಿ ಭೂಮಿ ಹಾಗೂ ಕುಡಿಯುವ ನೀರಿಗೂ ಅನುಕೂಲವಾಗಲಿದೆ. 
ಅವಿನಾಶ್‌ ಶೆಟ್ಟಿ ಹೊಸಂಗಡಿ
ಕೆರೆಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ

Advertisement

ಯೋಜನೆ ತಯಾರಿಸಿ
ವಾರಾಹಿ ನದಿಯ ನೀರು ಹೊಸಂಗಡಿಯ ಹೊನಕನಬೈಲು ಕೆರೆಯ ಮೂಲಕ ಕೋಟೆಕೆರೆಯ ಅಚ್ಚು ಕಟ್ಟು ಪ್ರದೇಶಗಳಿಗೆ ನೀರು ಹಾಯಿಸಲು ನೂತನವಾಗಿ ಯೋಜನೆ ತಯಾರಾಗಬೇಕಿದೆ. ಭಾಗೀಮನೆಯಿಂದ ಹೊಸಂಗಡಿಗೆ ವಾರಾಹಿ ನದಿ ನೀರು ಸರಬರಾಜರಾಗಲು ಅರಣ್ಯ ಇಲಾಖೆಯ ವನ್ಯಜೀವಿ ವ್ಯಾಪ್ತಿಯ ಪ್ರದೇಶದಲ್ಲೆ ಬರಬೇಕಾಗುತ್ತದೆ. ಈ ಯೋಜನೆಯ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕಾಗಿದೆ.
– ಪ್ರಸನ್ನಕುಮಾರ್‌
ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ವಾರಾಹಿ

 

Advertisement

Udayavani is now on Telegram. Click here to join our channel and stay updated with the latest news.

Next