Advertisement

ವಾರಾಹಿ ಯೋಜನೆ; ಇಂದ್ರಾಳಿ ನೀರಿನ ಟ್ಯಾಂಕ್‌ ಪೂರ್ಣ-9.9 ಲಕ್ಷ ಲೀಟರ್‌, 1,500 ಮನೆಗಳಿಗೆ ನೀರು

03:09 PM Jan 26, 2023 | Team Udayavani |

ಉಡುಪಿ: ನಗರಕ್ಕೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ವಾರಾಹಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು (ಕೆಯುಐಡಿಎಫ್ ಸಿ) ಯೋಜನೆಯನ್ನು ನಿರ್ವಹಿಸುತ್ತಿದೆ. ಒಟ್ಟು ಕಾಮಗಾರಿಯನ್ನು 172 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುತ್ತಿದೆ . ನೀರು ಪೂರೈಕೆಗಾಗಿ ಹಲವೆಡೆ ಬೃಹತ್‌ ಟ್ಯಾಂಕ್‌ ನಿರ್ಮಿಸಲಾಗುತ್ತಿದೆ.

Advertisement

ಇದರಲ್ಲಿ ಇಂದ್ರಾಳಿ ಶ್ಮಶಾನದ ಬಳಿ ಇರುವ ಓವರ್‌ ಹೆಡ್‌ ಟ್ಯಾಂಕ್‌ (ಒಎಚ್‌ಟಿ: ಮೇಲ್ಮಟ್ಟದ ಜಲ ಸಂಗ್ರಹಾಗಾರ) ಕೆಲಸ ಪೂರ್ಣಗೊಂಡಿದ್ದು, ಇದಕ್ಕೆ ನೀರನ್ನು ತುಂಬಿಸಲಾಗಿದೆ. ನಗರ ಹೃದಯ ಭಾಗದಲ್ಲಿ ಪೈಪ್‌ಲೈನ್‌ ಕಾಮಗಾರಿಗಳು ನಡೆದಿದ್ದು ಹಲವೆಡೆ ಅವ್ಯವಸ್ಥೆ, ವಿಳಂಬ ಕಾಮಗಾರಿಯಿಂದಾಗಿ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸಿದ್ದರು. ಶೇ. 80 ರಷ್ಟು ಕೆಲಸಗಳು ನಡೆದಿವೆ. ನಗರ ಸುತ್ತಮುತ್ತ ಸಹಿತ ಒಟ್ಟು 271 ಕಿ.ಮೀ ಪೈಪ್‌ಲೈನ್‌ ನಿರ್ಮಾಣ ಕಾಮಗಾರಿ ಹಲವು ಕಡೆಗಳಲ್ಲಿ ನಡೆದಿದೆ. ಕೆಲವು ಕಡೆಗಳಲ್ಲಿ ಬಾಕಿ ಇದ್ದು, ಅಲ್ಲಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ.

9.9 ಲಕ್ಷ ಲೀಟರ್‌, 1,500 ಮನೆಗಳಿಗೆ ನೀರು
ಇಂದ್ರಾಳಿ ಓವರ್‌ಹೆಡ್‌ ಟ್ಯಾಂಕ್‌ 9.9 ಲಕ್ಷ ಲೀಟರ್‌ ಸಾಮರ್ಥ್ಯ ಹೊಂದಿದೆ. ಈ ಟ್ಯಾಂಕ್‌ ಮೂಲಕ ಇಂದ್ರಾಳಿ ಸುತ್ತಮುತ್ತಲಿನ 1,500ಕ್ಕೂ ಅಧಿಕ ಮನೆಗಳಿಗೆ ನೀರನ್ನು ಪೂರೈಸಲಾಗುತ್ತದೆ. ಟ್ಯಾಂಕ್‌ನ ಪೈಂಟಿಂಗ್‌ ಕೆಲಸ ಬಾಕಿ ಇದ್ದು, ಶೀಘ್ರವೇ ಮುಗಿಯಲಿದೆ. ಹೈಡ್ರೋ ಫ‌ಂಕ್ಷನಿಂಗ್‌ ಟೆಸ್ಟ್‌ ನಲ್ಲಿ ಟ್ಯಾಂಕ್‌ನಲ್ಲಿ ಇತ್ತೀಚೆಗೆ ನೀರು ಸೋರಿಕೆ ಕಂಡುಬಂದಿದ್ದು, ಇದನ್ನು ಸರಿಪಡಿಸಲಾಗಿದೆ ಎಂದು ಕುಡ್ಸೆಂಪ್‌ ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ. ಒಟ್ಟು ನಗರದಲ್ಲಿ 18 ಸಾವಿರ ಮನೆಗಳಿಗೆ ಹಳೆ ನೀರಿನ ಸಂಪರ್ಕವಿದ್ದು, ಹೊಸದಾಗಿ 17 ಸಾವಿರ ನೀರಿನ ಸಂಪರ್ಕ ನೀಡಲಾಗುತ್ತಿದೆ.

7 ಕಡೆಗಳಲ್ಲಿ ಟ್ಯಾಂಕ್‌
ಯೋಜನೆಯ ಭರವಸೆಯಂತೆ ಈ ವರ್ಷ ಬೇಸಗೆ ಒಳಗೆ ನಗರಕ್ಕೆ ನೀರು ಪೂರೈಸುವ ಬಗ್ಗೆ ತಿಳಿಸಲಾಗಿತ್ತು. ಸದ್ಯಕ್ಕೆ ಇಂದ್ರಾಳಿ ಓವರ್‌ಹೆಡ್‌ ಟ್ಯಾಂಕ್‌ ಮಾತ್ರ ಪೂರ್ಣಗೊಂಡಿದ್ದು, ಉಳಿದ ಕಡೆಗಳಲ್ಲಿನ ಟ್ಯಾಂಕ್‌ ನಿರ್ಮಾಣ ಪೂರ್ಣಗೊಳ್ಳಲು ಒಂದು ತಿಂಗಳು ಬೇಕಿದೆ ಎನ್ನುತ್ತಾರೆ ಎಂಜಿನಿಯರ್‌ಗಳು. ಯೋಜನೆ ಭಾಗವಾಗಿ ಒಟ್ಟು 7 ಕಡೆಗಳಲ್ಲಿ ನೀರು ಶೇಖರಣ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದೆ.

ಸಂತೆಕಟ್ಟೆಯಲ್ಲಿ 16 ಲಕ್ಷ ಲೀ. ಸಾಮರ್ಥ್ಯ. ಕಕ್ಕುಂಜೆಯಲ್ಲಿ 10 ಲ. ಲೀ., ಇಂದ್ರಾಳಿಯಲ್ಲಿ 9.9 ಲ. ಲೀ. , ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಸಮೀಪ 7.5 ಲ. ಲೀ., ಮಂಚಿ 12.5 ಲ. ಲೀ. ಮಣಿಪಾಲ ಅನಂತನಗರ 16 ಲ. ಲೀ. , ಮಣಿಪಾಲ ಜಿಎಲ್‌ಎಸ್‌ಆರ್‌ (ತಳಮಟ್ಟದ) 7.5 ಲ. ಲೀ. ಸಾಮರ್ಥ್ಯದ ಶೇಖರಣ ಟ್ಯಾಂಕ್‌ಗಳನ್ನು ಎತ್ತರಗಾತ್ರದಲ್ಲಿ ನಿರ್ಮಿಸಲಾಗುತ್ತಿದೆ. ಕಕ್ಕುಂಜೆ ಹೊರತುಪಡಿಸಿ ಉಳಿದ ಎಲ್ಲ ಟ್ಯಾಂಕ್‌ ನಿರ್ಮಾಣ ಕಾರ್ಯ ಒಂದು ತಿಂಗಳ ಒಳಗೆ ಪೂರ್ಣಗೊಳ್ಳಲಿದೆ ಎಂಬುದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ತಿಂಗಳೊಳಗೆ ಬಹುತೇಕ ಕಾಮಗಾರಿ ಪೂರ್ಣ
ಇಂದ್ರಾಳಿ ಓವರ್‌ಹೆಡ್‌ ಟ್ಯಾಂಕ್‌ ಕೆಲಸ ಮುಗಿದಿದ್ದು, ಉಳಿದ ಕಡೆಗಳಲ್ಲಿರುವ ಟ್ಯಾಂಕ್‌ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ತಿಂಗಳ ಒಳಗೆ ಬಹುತೇಕ ಕಾಮಗಾರಿ ಮುಗಿಯಲಿದೆ. ಪೈಪ್‌ಲೈನ್‌ ಮತ್ತಿತರ ಕೆಲಸಗಳು ಹಂತಹಂತವಾಗಿ ನಡೆಯುತ್ತಿದ್ದು, ವಿಳಂಬವಾಗದಂತೆ ಕೆಲಸ ನಿರ್ವಹಿಸಲಾಗುತ್ತಿದೆ.
– ರಾಜಶೇಖರ್‌, ಎಂಜಿನಿಯರ್‌, ಕೆಯುಐಡಿಎಫ್ ಸಿ.

Advertisement

Udayavani is now on Telegram. Click here to join our channel and stay updated with the latest news.

Next