Advertisement

ವಾರಾಹಿ: ಅಧಿಕಾರಿಗಳ ಕಾರ್ಯವೈಖರಿಗೆ ಗರಂ

11:31 AM Nov 29, 2017 | Team Udayavani |

ಕುಂದಾಪುರ: ವಾರಾಹಿ ಯೋಜನೆ ಕಾಮಗಾರಿ ವಿಳಂಬ, ಭೂ ಸಂತ್ರಸ್ತರಿಗೆ ಇನ್ನೂ ಪರಿಹಾರ ನೀಡಿಲ್ಲ, ಹೆಚ್ಚುವರಿ ಭೂಸ್ವಾಧೀನ, ಆರ್‌ಟಿಸಿ ಸಮಸ್ಯೆ, ಕೃಷಿ, ಕುಡಿಯುವ ನೀರಿನ ತೊಂದರೆಗಳಿಗೆ ಅಧಿಕಾರಿಗಳೇ ನೇರ ಹೊಣೆ; ನಿಮ್ಮ ನಿರ್ಲಕ್ಷದಿಂದಲೇ ಸಮಸ್ಯೆಗಳು ಉದ್ಭವಿಸಿವೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌, ಶಾಸಕರಾದ ಪ್ರತಾಪ್‌ಚಂದ್ರ ಶೆಟ್ಟಿ, ಗೋಪಾಲ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ವಾರಾಹಿ ಯೋಜನೆಯ ಎಡ ಮತ್ತು ಬಲದಂಡೆ ಹಾಗೂ ಉಪ ಕಾಲುವೆ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಕಂಡುಬಂದ ಕಾಮಗಾರಿಗಳ ನ್ಯೂನತೆಗಳನ್ನು ಸರಿಪಡಿಸಲು ನೀಡಲಾದ ನಿರ್ದೇಶನ ಮತ್ತು ಕೈಗೊಂಡ ಕ್ರಮದ ಕುರಿತು ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳನ್ನು ಸಚಿವರು, ಶಾಸಕರು ತರಾಟೆಗೆ ತೆಗೆದುಕೊಂಡರು.

ತತ್‌ಕ್ಷಣ ನೀರು ಬಿಡಿ
ಮುಂದಿನ ಮೇ ಒಳಗೆ 37 ಕಿ.ಮೀ. ವರೆಗೆ ರೈತರಿಗೆ ವಾರಾಹಿಯ ನೀರು ಬಿಡಬಹುದು. ಬಂಡ್‌ ಹಾಕುವ ಕಾರ್ಯ ಬಾಕಿ ಇರುವುದರಿಂದ ಡಿಸೆಂಬರ್‌ ಮೊದಲ ವಾರದಲ್ಲಿ 23 ಕಿ.ಮೀ. ವರೆಗೆ ನೀರು ಬಿಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಕ್ಕೆ ಆಕ್ರೋಶ ಗೊಂಡ ಪ್ರತಾಪ್‌ಚಂದ್ರ ಶೆಟ್ಟಿ, ಈಗಲೇ ನೀರಿಲ್ಲದೆ ಸಮಸ್ಯೆ ತಲೆದೋರಿದೆ. ನಿಮ್ಮ ಕಾರ್ಯವೈಖರಿ ಬಗ್ಗೆಯೇ ಅನುಮಾನ ಮೂಡುತ್ತಿದೆ. ಸಮುದ್ರಕ್ಕೆ ಸೇರುವ ನೀರು, ಕೆಪಿಸಿಎಲ್‌ ವಿದ್ಯುತ್‌ ಉತ್ಪಾದನೆಯ ಹೆಚ್ಚುವರಿ ನೀರನ್ನು ಕೂಡಲೇ ಬಿಡಿ, ವಿಳಂಬ ಮಾಡಬೇಡಿ ಎಂದು ತಾಕೀತು ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಬೈಂದೂರು ಶಾಸಕ ಗೋಪಾಲ ಪೂಜಾರಿ, ಮುಂಗಾರು ಮುಗಿದು 2ನೇ ಬೆಳೆ ಆರಂಭಗೊಂಡಿದೆ. ಕೃಷಿಗೆ ನೀರಿಲ್ಲ. ಲಕ್ಷ-ಲಕ್ಷ ರೂ. ಖರ್ಚು ಮಾಡಿ ಅಣೆಕಟ್ಟು ಕಟ್ಟಿ ಏನು ಪ್ರಯೋಜನ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹೆಚ್ಚಿನ ಅನುದಾನಕ್ಕೆ ಪ್ರಯತ್ನ
ಅನುದಾನ ಕೊರತೆಯಿದ್ದರೆ ಕೂಡಲೇ ಜಲ ಸಂಪನ್ಮೂಲ ಸಚಿವರು, ಇಲಾಖೆಯ ಎಂಡಿ ಜತೆ ಮಾತ ನಾಡಿ ಹಣ ಬಿಡುಗಡೆಗೆ ಪ್ರಯತ್ನಿಸ ಲಾಗು ವುದು, ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬ ಮಾಡ ಬೇಡಿ ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು. ಇದು ವಾರಾಹಿ ಸಂಬಂಧ ನಡೆಯುವ 3ನೇ ಪ್ರಗತಿ ಪರಿಶೀಲನ ಸಭೆ. ಮೊದಲೆರಡು ಸಭೆಗಳಲ್ಲಿ ಪ್ರಸ್ತಾವಿಸಿದ ವಿಷಯಗಳೇ ಕಾರ್ಯರೂಪಕ್ಕೆ ಬಂದಿಲ್ಲ ಎಂದು ರೈತ ಮುಖಂಡರು, ಸಂಬಂಧಪಟ್ಟ ಗ್ರಾ.ಪಂ. ಜನಪ್ರತಿನಿಧಿಗಳು, ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸಂತ್ರಸ್ತ ಗ್ರಾಮಸ್ಥರನ್ನು ನೇರವಾಗಿ ಆಹ್ವಾನಿಸದೇ ಸಂಬಂಧಪಟ್ಟ ಗ್ರಾ.ಪಂ. ನೋಟಿಸ್‌ ಬೋರ್ಡಿನಲ್ಲಿ ಅವರ ಹೆಸರು ಪ್ರಕಟಿಸಿರುವ ಅಧಿಕಾರಿಗಳ ಕ್ರಮದ ವಿರುದ್ಧ ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದರು. ಸಭೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್‌, ವಾರಾಹಿಯ ಮುಖ್ಯ ಎಂಜಿನಿಯರ್‌ ಪದ್ಮನಾಭ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತನಿಖೆಗೆ ಸಚಿವರ ಸೂಚನೆ
ವಾರಾಹಿ ಯೋಜನೆಯಡಿ ಪರಿಶಿಷ್ಟ ಪಂಗಡದ ಜನರಿಗಾಗಿ ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ನಡಾ³ಲುವಿನಲ್ಲಿ 90 ಲಕ್ಷ ರೂ. ಮತ್ತು 40 ಲ.ರೂ. ವೆಚ್ಚ ದಲ್ಲಿ 2 ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಆದರೆ ಇದರಿಂದ ಅವರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾ.ಪಂ. ಸದಸ್ಯ ಕೃಷ್ಣ ಪೂಜಾರಿ ತಿಳಿಸಿದರು. ಈ ಅನುಪಯುಕ್ತ ಕಾಮಗಾರಿ ನಡೆಸಿರುವವರ ವಿರುದ್ಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಚಿವರು ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next