Advertisement

ಶತಕ ದಾಟಿದ ವಿವಿ ಸಾಗರ ನೀರಿನ ಮಟ್ಟ

05:25 PM Nov 12, 2020 | Suhan S |

ಹಿರಿಯೂರು: ತಾಲೂಕಿನ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ 100 ಅಡಿ ದಾಟಿದ್ದು, ಬರಗಾಲದಿಂದಬೇಸತ್ತಿದ್ದ ಅಚ್ಚುಕಟ್ಟು ಪ್ರದೇಶದ ರೈತರ ಮುಖದಲ್ಲಿ ಸಂತಸ ಮೂಡಿಸಿದೆ.

Advertisement

ವಾಣಿವಿಲಾಸ ಜಲಾಶಯದಲ್ಲಿ ನೀರು ಸಂಗ್ರಹ ಕಾರ್ಯ ಸುಮಾರು1911ರಿಂದಲೇ ಆರಂಭವಾಗಿದೆ.ಜಲಾಶಯ ನಿರ್ಮಾಣಗೊಂಡಮೊದಲ ವರ್ಷವೇ 109.66 ಅಡಿ ನೀರು ಸಂಗ್ರಹವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಸುಮಾರು 57 ಬಾರಿ ಜಲಾಶಯದ ನೀರಿನ ಮಟ್ಟ 100 ಅಡಿದಾಟಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಇದೇ ವೇಳೆಯಲ್ಲಿ ನೀರಿನಮಟ್ಟ 93.40 ಅಡಿ ಇತ್ತು. ಪ್ರಸಕ್ತ ವರ್ಷ 102 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 130 ಅಡಿಇದ್ದು, ಇದುವರೆಗೆ ಒಮ್ಮೆ ಮಾತ್ರ 1933ರಲ್ಲಿ ಭರ್ತಿಯಾಗಿದೆ. ಈವರೆಗೆ11 ಬಾರಿ 120 ಅಡಿಗಿಂತ ಹೆಚ್ಚು ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.

ಪ್ರಸಕ್ತ ವರ್ಷ ಮಳೆ ನೀರಿನ ಜೊತೆಗೆ ಭದ್ರಾ ನೀರು ಹರಿದು ಬರುತ್ತಿರುವ ಕಾರಣ ನಿಧಾನವಾಗಿ ಜಲಾಶಯದ ನೀರಿನ ಮಟ್ಟ ದಿನೇ ದಿನೇ ಏರುತ್ತಿದೆ. ಶಾಂತಿಪುರ ಮತ್ತು ಬೆಟ್ಟದ ತಾವರೆಕೆರೆ ಬಳಿ ಲಿಫ್ಟ್‌ಗಳಲ್ಲಿ ಎರಡು ಪಂಪ್‌ ಗಳನ್ನು ಚಾಲೂ ಮಾಡಿ, ಮಾರ್ಚ್  ವರೆಗೆ ಹರಿಸಿದಲ್ಲಿ ನೀರಿನ ಮಟ್ಟ 115 ಅಡಿ ತಲುಪುವ ಸಾಧ್ಯತೆ ಇದೆ. ಇದರಿಂದಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಮತ್ತೆ ಚಿಗುರೊಡೆದಿದೆ. ಅಚ್ಚುಕಟ್ಟು ಪ್ರದೇಶದ ರೈತರು ತಮ್ಮಕೃಷಿ ಭೂಮಿಯಲ್ಲಿ ಮತ್ತೆ ಅಡಿಕೆ, ತೆಂಗು ಸಸಿಗಳನ್ನು ನೆಡುವ ಮೂಲಕ ತೋಟಗಾರಿಕೆ ಬೆಳೆ ಬೆಳೆಯಲು ಉತ್ಸುಕರಾಗಿದ್ದಾರೆ.

ಕಳೆದ ವರ್ಷ ಡೆಡ್‌ ಸ್ಟೋರೇಜ್‌ಗೂ ಇಳಿದಿತ್ತು :  ಪ್ರಥಮ ಬಾರಿಗೆ ಜಲಾಶಯದ ನೀರಿನ ಮಟ್ಟ 2019ರ ಜೂನ್‌ ತಿಂಗಳಲ್ಲಿ ಡೆಡ್‌ ಸ್ಟೋರೇಜ್‌ಗೆ ಅಂದರೆ 60 ಅಡಿ ಆಳಕ್ಕೆ ಇಳಿದಿತ್ತು. ನಂತರ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಹಿಂಗಾರು ಮಳೆ ಉತ್ತಮವಾಗಿ ಆಗಿದ್ದರಿಂದ ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಪರ್ಯಾಯ ಮಾರ್ಗ ನಿರ್ಮಿಸಿ ನೀರು ಹರಿಸಿದ್ದರಿಂದ ಕಳೆದ ಬಾರಿ ಸಹ ನೀರಿನ ಮಟ್ಟ 102 ಅಡಿ ತಲುಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next