ಮುಂಬಯಿ: ಚೊಚ್ಚಲ ವನಿತಾ ಪ್ರೀಮಿಯರ್ ಲೀಗ್ ಕೊನೆಯ ಹಂತ ತಲುಪಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಫೈನಲ್ ಹಂತಕ್ಕೇರಿದೆ.
ಸೋತ ಯುಪಿ ವಾರಿಯರ್ ತಂಡವು ಮಾರ್ಚ್ 24ರಂದು ನಡೆಯುವ ಪ್ಲೇ ಆಫ್ನಲ್ಲಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದ ವಿಜೇತ ತಂಡವು ಮಾ. 26ರಂದು ನಡೆಯುವ ಪ್ರಶಸ್ತಿ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಲೀಗ್ ಹಂತದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ 12 ಅಂಕ ಪಡೆದಿದ್ದರೂ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನ ಪಡೆದು ನೇರವಾಗಿ ಫೈನಲಿಗೇರಿದೆ.
ಮಂಗಳವಾರದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ ತಂಡವು ತಹಿಲಾ ಮೆಕ್‌ಗ್ರಾಥ್, ಅಲಿಸ್ಸಾ ಹೀಲಿ ಅವರ ಉತ್ತಮ ಆಟದಿಂದಾಗಿ 6 ವಿಕೆಟಿಗೆ 138 ರನ್ ಗಳಿಸಿತು. ಒಂದು ಕಡೆಯಿಂದ ವಿಕೆಟ್ ಉರುಳುತ್ತಿದ್ದರೂ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಮೆಕ್‌ಗ್ರಾಥ್ 58 ರನ್ ಗಳಿಸಿ ಅಜೇಯರಾಗಿ ಉಳಿದರು. ಹೀಲಿ 36 ರನ್ ಗಳಿಸಿದರು.
Related Articles
ಯುಪಿಯ ಕುಸಿತಕ್ಕೆ ಕಾರಣರಾದ ಅಲಿಸೆ ಕ್ಯಾಪ್ಸೆ 26 ರನ್ನಿಗೆ 3 ವಿಕೆಟ್ ಕಿತ್ತರು. ಇದಕ್ಕುತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17.5 ಓವರ್‌ಗಳಲ್ಲಿ 5 ವಿಕೆಟಿಗೆ 142 ರನ್ ಪೇರಿಸಿ ಜಯಭೇರಿ ಬಾರಿಸಿತು.
ಡೆಲ್ಲಿ ಉತ್ತಮ ಆರಂಭ
ಗೆಲ್ಲಲು 139 ರನ್ ಗಳಿಸುವ ಸವಾಲು ಪಡೆದ ಡೆಲ್ಲಿ ತಂಡವು ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಮೆಗ್ ಲ್ಯಾನಿಂಗ್ ಮತ್ತು ಶಫಾಲಿ ವರ್ಮ ಅವರು ಮೊದಲ ವಿಕೆಟಿಗೆ 56 ರನ್ ಪೇರಿಸಿದರು. ಈ ಹಂತದಲ್ಲಿ 21 ರನ್ ಗಳಿಸಿದ ಶಫಾಲಿ ಔಟಾದರು. ಆಬಳಿಕ ತಂಡ ಎರಡು ವಿಕೆಟನ್ನು ಬೇಗನೇ ಕಳೆದುಕೊಂಡಿತು. ಅದರಲ್ಲಿ 39 ರನ್ ಗಳಿಸಿದ ಲ್ಯಾನಿಂಗ್ ಕೂಡ ಸೇರಿದ್ದರು. ಆದರೆ ಮಾರಿಜಾನೆ ಕ್ಯಾಪ್ ಮತ್ತು ಅಲಿಸೆ ಕ್ಯಾಪ್ಸೆ ಅವರ ಉತ್ತಮ ಆಟದಿಂದಾಗಿ ತಂಡ ಸುಲಭ ಗೆಲುವು ಕಾಣುವಂತಾಯಿತು. ಕ್ಯಾಪ್ 34 ರನ್ ಗಳಿಸಿ ಅಜೇಯರಾಗಿ ಉಳಿದರೆ ಕ್ಯಾಪ್ಸೆ 34 ರನ್ ಗಳಿಸಿ ಔಟಾದರು.