Advertisement
ತೋಟವೆಂದರೆ ಅಲ್ಲಿ ಬೇಲಿಯಿರಬೇಕು. ಯಾವುದೋ ತುಡುಗು ಜಾನುವಾರು ತೋಟಕ್ಕೆ ನುಗ್ಗಿ ಅದನ್ನು ಹಾಳು ಮಾಡದಿರಲೆಂದು. ಆದರೆ ಆ ಬೇಲಿ ನಮಗಲ್ಲ. ನಮ್ಮ ನಿತ್ಯದ ಹಾದಿಯನ್ನು ಆ ಬೇಲಿಗಳು ಎಂದೂ ಪ್ರತಿಬಂಧಿಸಲಿಲ್ಲ. ನಿತ್ಯ ಸಾಗುವ ಆ ಬಳಸು ಹಾದಿಗೆ ಆ ಬೇಲಿ ಅಡ್ಡವಾಗಲೂ ಇಲ್ಲ, ಅಡ್ಡಿ ಮಾಡುತ್ತಲೂ ಇರಲಿಲ್ಲ. ಆದರೆ ಇಂದು ಆ ಬೇಲಿ ಆಳೆತ್ತರ ಬೆಳೆದು ನಿಂತಂತೆ ಭಾಸವಾಗುತ್ತಿದೆ. ಹೆದರಿಕೆ ಹುಟ್ಟಿಸುತ್ತಿದೆ. ಇಂತಹ ಬೇಲಿಯೊಳಗೆ ಬಂಧಿಸಲ್ಪಟ್ಟಿದ್ದ ವೆನಿಲ್ಲಾ ಎಂಬ ಬೆಳೆ ಸಂಬಂಧಗಳನ್ನು ಕೊಚ್ಚಿ ಹಾಕಿದ್ದು, ಬದುಕನ್ನು ಮೂರಾಬಟ್ಟೆ ಮಾಡಿದ್ದು, ಕನಸನ್ನು ನುಚ್ಚು ನೂರು ಮಾಡಿದ್ದು, ಮನುಷ್ಯತ್ವವನ್ನು ಮರೆಸಿದ್ದು, ಕೊನೆಗೆ ಇದು ಇಡೀ ಅಮಾಯಕ ಕುಟುಂಬವೊಂದನ್ನು ಬಲಿ ತೆಗೆದುಕೊಂಡಿದ್ದು, ಎಲ್ಲವೂ ಒಂದು ಕನಸಿನಂತೆ ಭಾಸವಾಗುತ್ತದೆ. ಮನಸ್ಸಿನೊಳಗೆ ಆರದ ಗಾಯವೊಂದನ್ನು ಮಾಡಿಬಿಟ್ಟಿದೆ.
Related Articles
Advertisement
ವೆನಿಲ್ಲಾ ಧಾರಣೆ ಏರಿದಂತೆಲ್ಲಾ ವೆನಿಲ್ಲಾ ಬಳ್ಳಿಗಾಗಿ ಹುಡುಕಾಡುವವರು ಹೆಚ್ಚಾದರು. ಹೋದ ವರ್ಷ ನೆಟ್ಟ ಬಳ್ಳಿಯನ್ನೇ ಎರಡು ತುಂಡು ಮಾಡಿ ತುಂಡಿಗೆ ನೂರು ರೂ.ಗಳಂತೆ ಮಾರಿ ಸಾವಿರಾರು ರೂಪಾಯಿ ಕಮಾಯಿಸಿದವರು ಹಲವಾರು ಮಂದಿ. ಅಡಿಕೆ ಮರಕ್ಕೆ ತೂತು ಕೊರೆದು ಕಬ್ಬಿಣದ ಸರಳು ಹಾಕಿ ವೆನಿಲ್ಲಾ ಬಳ್ಳಿ ಹಬ್ಬಿಸ್ತಾ ಇದ್ದೀನಿ ಮಾರಾಯ ಎಂದು ತಲ ತಲಾಂತರದಿಂದ ಅಡಿಕೆಯನ್ನೇ ನಂಬಿ ಕೃಷಿ ಮಾಡುತ್ತಿದ್ದವರು ತಮ್ಮ ದೊಡ್ಡಸ್ತಿಕೆ ಪ್ರದರ್ಶನ ಮಾಡುವ ಮಟ್ಟಕ್ಕೆ ಬಂದರು. ನಿತ್ಯ ತೋಟಕ್ಕೆ ಹೋಗಿ ಇದ್ದಷ್ಟೇ ಬಳ್ಳಿ ಇದೆಯಾ? ಯಾರಾದರು ಕದ್ದು ಬಿಟ್ಟಿದ್ದಾರಾ ಎಂದು ಪರಿಶೀಲಿಸುವುದು ನಿತ್ಯ ಕಾಯಕವಾಯಿತು. ಹಳ್ಳಿಯಲ್ಲಿ ಈ ಪರಿಯ ಹವಾ ಸೃಷ್ಟಿಸಿದ್ದ ವೆನಿಲ್ಲಾ ನಗರವನ್ನೂ ಬಿಡಲಿಲ್ಲ. ಮನೆಯ ಮುಂದೆ ಎರಡು ಪಾಟು ಇಟ್ಟು ವೆನಿಲ್ಲಾ ಬಳ್ಳಿ ಹಬ್ಬಿಸಿದರು. ತಾರಸಿಯ ಮೇಲೆ ಸಾಲು ಸಾಲಾಗಿ ಕುಂಡಗಳಲ್ಲಿ ವೆನಿಲ್ಲಾ ರಾರಾಜಿಸತೊಡಗಿತು. ಶೇಡ್‌ನೆಟ್ ಎದ್ದು ಕಾಣತೊಡಗಿತು. ಪಕ್ಕದ ಖಾಲಿ ಸೈಟಿನಲ್ಲಿ ಅಚ್ಚುಕಟ್ಟಾಗಿ ವೆನಿಲ್ಲಾ ತೋಟ ಮಾಡಿದರು. ಮನೆಯ ಸುತ್ತ ಜಾಗ ಇಲ್ಲದ ಮಂದಿ ಮುಂಬಾಗಿಲ ಮೆಟ್ಟಿಲಿನ ಆಚೆ ತುದಿಯಲ್ಲಿ ಒಂದೇ ಒಂದು ಪಾಟು ಇಟ್ಟು ವೆನಿಲ್ಲಾ ಬಳ್ಳಿ ತಂದು ನೆಟ್ಟು ಕೃತಾರ್ಥರಾದರು. ಪಕ್ಕದ ಮನೆಯವರು ತುಳಸಿ ಗಿಡಕ್ಕೇ ಒಂದು ಬಳ್ಳಿ ಸೇರಿಸಿದರು. ಮನೆಯಂಗಳದ ಹೂ ತೋಟ ಮಾಯವಾಯಿತು.
ಇತ್ತ ಇಡೀ ಹಳ್ಳಿಯಲ್ಲಿ ಪರಸ್ಪರ ನಂಬಿಕೆಯೇ ಹೊರಟು ಹೋಗಿತ್ತು. ಎರಡು ವರ್ಷದ ಮೊದಲೇ ವೆನಿಲ್ಲಾ ಬಳ್ಳಿ ನೆಟ್ಟವರು ಪಕ್ಕದ ತೋಟದಲ್ಲಿ ಕಾಣಿಸಿಕೊಂಡ ವೆನಿಲ್ಲಾ ಬಳ್ಳಿ ನಮ್ಮ ತೋಟದಿಂದ ಕದ್ದಿದ್ದೇ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದರು. ವೆನಿಲ್ಲಾ ಬೆಳೆ ತೆಗೆಯುತ್ತಿದ್ದವರು ಬೇರೆಲ್ಲಾದರೂ ವೆನಿಲ್ಲಾ ಕೋಡು ಕಂಡರೆ ಅದು ನಮ್ಮದಲ್ಲದೆ ಇನ್ನಾರದ್ದು ಆಗಿರಲು ಸಾಧ್ಯ ಎಂದು ನೇರವಾಗಿ ದಾಳಿಗೆ ಸಜಾcಗುತ್ತಿದ್ದರು. ಇಷ್ಟೆಲ್ಲಾ ಆಗುವಾಗ ಮಲೆನಾಡಿನಲ್ಲಿ ಆಗಬಾರದ ಘಟನೆಯೊಂದು ಆಗಿ ಹೋಯಿತು. ಅವರು ಪ್ರಗತಿಪರ ಕೃಷಿಕರು. ಭಾರೀ ಹಿಡುವಳಿ ಇರುವವರು. ಮೂರು ವರ್ಷದ ಮೊದಲೇ ವೆನಿಲ್ಲಾ ನೆಟ್ಟವರು. ಅವರ ಮನೆಗೆ ಕೂಲಿ ಕೆಲಸಕ್ಕೆ ಬರುತ್ತಿದ್ದವನಿಗೂ ಒಂದೆಕರೆ ತೋಟವಿತ್ತು. ಅದರಲ್ಲಿ ತಾನೂ ವೆನಿಲ್ಲಾ ನೆಟ್ಟು ಹಣ ಮಾಡುವ ಕನಸು ಕಾಣುತ್ತಿದ್ದ. ತನ್ನ ಸಾವಾರು ಎಷ್ಟು ದುಡ್ಡು ಮಾಡಿದ್ರು. ನಾನೂ ಆ ವರ್ಷವೇ ನೆಟ್ಟಿದ್ರೆ ಇಷ್ಟೊತ್ತಿಗೆ ತಂಗಿ ಮದುವೆಯಾದ್ರೂ ಮಾಡಬಹುದಿತ್ತು ಎಂದು ಮನೆಯಲ್ಲೂ ಹೇಳಿಕೊಂಡು ಹಲುಬುತ್ತಿದ್ದ. ಸಾವಾರ್ರ ಹತ್ರ ತನಗೂ ಒಂದಿಷ್ಟು ಬಳ್ಳಿ ತುಂಡು ಕೊಡಿ ಎಂದ. ನನ್ನತ್ರ ಎಲ್ಲಿ ಉಂಟು ಮಾರಾಯ ಎಂದು ಮೆಲ್ಲಗೆ ಸಾಗ ಹಾಕಿದರು. ಹಠ ಬಿಡದೆ ಬೇರೆ ಎಲ್ಲೆಲ್ಲೋ ಹೋಗಿ ಎರಡು ಗಣ್ಣಿನ ಒಂದು ಬಳ್ಳಿಗೆ 100 ರೂಪಾಯಿ ಕೊಟ್ಟು 200 ಬಳ್ಳಿ ತಂದು ನೆಟ್ಟ. ಇದನ್ನು ನೋಡಿದ ಸಾವಾRರ್ರಿಗೆ ಉರಿ ಹತ್ತಿತು. ಇದು ನನ್ನದೇ ಬಳ್ಳಿ ಎಂದು ವಾದಿಸಿದರು. ಅವನು ನನ್ನ ತೋಟದಿಂದಲೇ ಕದ್ದಿದ್ದು ಎಂದು ದಬಾಯಿಸಿದರು. ಅಷ್ಟು ವರ್ಷಗಳ ಆತ್ಮೀಯ ಸಂಬಂಧಕ್ಕೆ ಎಳ್ಳುನೀರು ಬಿಟ್ಟರು. ದೊಡ್ಡ ಜಗಳ ತೆಗೆದರು. ಊರ ಪಂಚಾಯ್ತಿ ಮಾಡಿಸಿ ಅವನನ್ನು ಕಳ್ಳ ಎಂದು ನಿರೂಪಿಸಲು ಯತ್ನಿಸಿದರು.
ಆತ ಹತಾಶನಾಗಿ ಹೋದ. ಇಷ್ಟು ವರ್ಷ ಇವರ ಮನೆಯಲ್ಲಿ ನಿಯತ್ತಿನಿಂದ ದುಡಿದ ನನಗೆ ಕಳ್ಳತನದ ಪಟ್ಟವೇ? ಒಂದು ದಿನವೂ ಅನುಮಾನಿಸದ ಇವರು ಈಗ ನನ್ನನ್ನು ಕಳ್ಳ ಎಂದರಲ್ಲ. ಈ ವೆನಿಲ್ಲಾ ಎಂಬ ಮೂರಡಿ ಬಳ್ಳಿ ನನ್ನ ಮಾನ ಹರಾಜು ಹಾಕಿತಲ್ಲ. ಇದುವರೆಗೆ ಯಾರ ಕೈಯಲ್ಲಿಯೂ ಇಂತಹ ಮಾತು ಕೇಳದೆ ಮರ್ಯಾದೆಯಿಂದ ಬಾಳುತ್ತಿದ್ದ ನಾನು ವೆನಿಲ್ಲಾ ಕಳ್ಳನಾದೆನಲ್ಲಾ. ಇಡೀ ಮನೆಯವರು ಕಣ್ಣೀರು ಹಾಕಿದರು. ಹರಿದ ಕಣ್ಣೀರು ನಿಲ್ಲಲಿಲ್ಲ. ಮಾನಗೆಟ್ಟವರು ಬದುಕಬೇಕೇ ಎಂದು ಪರಸ್ಪರ ಪ್ರಶ್ನಿಸಿಕೊಂಡರು. ಉತ್ತರ ಒಂದೇ ಆಗಿತ್ತು. ಬೆಳಗಾಗುವುದರಲ್ಲಿ, ಸುತ್ತಲಿನ ತೋಟಗಳಲ್ಲಿ ವೆನಿಲ್ಲಾ ಹೂವಿಗೆ ಕೈಯಿಂದ ಪರಾಗ ಸ್ಪರ್ಶ ಮಾಡುವಷ್ಟರಲ್ಲಿ ಈ ಮನೆಯಲ್ಲಿ ಐದು ಹೆಣಗಳು ಸಾಲಾಗಿ ಮಲಗಿದ್ದವು. ವೆನಿಲ್ಲಾ ಕಳ್ಳ ಎಂಬ ಹಣೆಪಟ್ಟಿಯಿಂದ ನೊಂದು ಒಟ್ಟಾಗಿ ವಿಷ ಸೇವಿಸಿ ಮಲಗಿದವರು ಬೆಳಗ್ಗೆ ಏಳಲೇ ಇಲ್ಲ. ಪರಾಗ ಸ್ಪರ್ಶ ಮಾಡುವುದನ್ನು ನೋಡಲಿಲ್ಲ. ವೆನಿಲ್ಲಾ ಎಂದರೇನು ಎಂದು ಕೂಡ ಗೊತ್ತಿಲ್ಲದ ಎಳೆ ಜೀವಗಳು ತಂದೆ ತಾಯಿಯೊಡನೆ ಪರ ಲೋಕ ಸೇರಿದ್ದವು. ಮಲೆನಾಡು ತತ್ತರಿಸಿ ಹೋಗಿತ್ತು.
ಆದರೆ ಇಂದು ಇಡೀ ಮಲೆನಾಡಿನಲ್ಲಿ ವೆನಿಲ್ಲಾ ಎಂಬ ಬಳ್ಳಿಯ ತುಂಡೂ ಕೂಡ ಇಲ್ಲ. ಯಾವುದೋ ಹೆಸರಿಲ್ಲದ ರೋಗ ಬಂದು ಪೂರ್ತಿ ನಾಶವಾಗಿ ಹೋಯಿತು. ಆದರೆ ಅದು ಬಿಟ್ಟು ಹೋದ ಅಪನಂಬಿಕೆ, ಅಸೂಯೆ, ದ್ವೇಷ ಎಲ್ಲವೂ ಒಳಗೊಳಗೇ ಹೊಗೆಯಾಡುತ್ತಲೇ ಇದೆ. ತೋಟಗಳ ನಡುವೆ ಎದ್ದ ತಡವೆ ಇಲ್ಲದ ಆಳೆತ್ತರದ ಬೇಲಿ ಮತ್ತಷ್ಟು ಬಲಿಷ್ಟವಾಗುತ್ತಲೇ ಇದೆ. ಈಗಲೂ ಆ ವೆನಿಲ್ಲಾ ಪರಿಮಳ ಬಂದಾಗೆಲ್ಲಾ ಸತ್ತು ಮಲಗಿದ ಆ ಮುಗª ಜೀವಗಳೇ ನೆನಪಿಗೆ ಬರುತ್ತದೆ! ವಿಷಣ್ಣ ಭಾವವೊಂದು ಆವರಿಸುತ್ತದೆ.
ಗೋಪಾಲ್ ಯಡಗೆರೆ