Advertisement

ಹಾಡಿನ ತಾರೆ ಆಗಸ  ಸೇರಿತು…ಸವಿನೆನಪುಗಳನ್ನು ಬಿಟ್ಟು ಸಾಗಿದ ವಾಣಿ ಜಯರಾಂ

12:20 AM Feb 05, 2023 | Team Udayavani |

– ಇದು ವಾಣಿ ಜಯರಾಂ ಅವರ ಗಾಯನದ ಟ್ರ್ಯಾಕ್‌ ರೆಕಾರ್ಡ್‌. ಈ ಸಂಖ್ಯೆಯನ್ನು ನೋಡಿದಾಗ ವಾಣಿ ಜಯರಾಂ ಅವರು ಬಹುಭಾಷಾ ಗಾಯಕಿಯಾಗಿ ಎಷ್ಟೊಂದು ಬೇಡಿಕೆಯಲ್ಲಿದ್ದ ಗಾಯಕಿ ಎಂಬುದು ಗೊತ್ತಾಗುತ್ತದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಸಂಗೀತ ಕುಟುಂಬವೊಂದರಲ್ಲಿ ಕಲೈವಾಣಿಯಾಗಿ 1945ರಲ್ಲಿ ಜನಿಸಿದ ವಾಣಿ ಜಯರಾಂ ಅವರಿಗೆ ಬಾಲ್ಯದಿಂದಲೇ ಸಂಗೀತದ ಕಡೆಗೆ ಸೆಳೆತವಿತ್ತು. ಸಂಗೀತದ ಕಡೆಗಿನ ಮಗಳ ಆಸಕ್ತಿಯನ್ನು ಗಮನಿಸಿದ ಅವರ ಹೆತ್ತವರು ರಾಮಾನುಜ ಅಯ್ಯಂಗಾರ್‌ ಅವರ ಬಳಿ ಸಂಗೀತಾಭ್ಯಾಸಕ್ಕೆ ಸೇರಿಸಿದರು. ವಾಣಿ ಅವರ ಸಂಗೀತದ ಬಗೆಗಿನ ಸೆಳೆತ ಎಷ್ಟಿತ್ತೆಂದರೆ ಅಂದು ರೇಡಿಯೋದಲ್ಲಿ ಬರುತ್ತಿದ್ದ ಹಾಡುಗಳ ಸಂಪೂರ್ಣ ಸಂಗೀತ, ಆರ್ಕೆಸ್ಟ್ರಾವನ್ನು ನೆನಪಿಟ್ಟುಕೊಂಡು ಅದಕ್ಕೆ ತಕ್ಕಂತೆ ಹಾಡುತ್ತಿದ್ದರು. ತಮ್ಮ ಎಂಟನೇ ವಯಸ್ಸಿನಲ್ಲೇ ರೇಡಿಯೋದಲ್ಲಿ ಕಾರ್ಯಕ್ರಮ ಕೊಡುವ ಮೂಲಕ ಸೈ ಎನಿಸಿಕೊಂಡಿದ್ದರು.

Advertisement

ಬ್ಯಾಂಕ್‌ ಉದ್ಯೋಗಿಯ ಸಂಗೀತ ಪಯಣ
ಸಂಗೀತದ ಆಸಕ್ತಿ ಎಷ್ಟೇ ಇದ್ದರೂ ವಾಣಿ ಅವರು ಶಿಕ್ಷಣದಲ್ಲಿ ಹಿಂದೆ ಉಳಿದಿರಲಿಲ್ಲ.  ಅವರು ಮದ್ರಾಸ್‌ ವಿಶ್ವವಿದ್ಯಾನಿಲಯದ ಕ್ವೀನ್‌ ಮೇರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ತಮ್ಮ ಶಿಕ್ಷಣ ಮುಗಿದ ಬಳಿಕ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಮದ್ರಾಸ್‌ ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ಅನಂತರ 1967ರಲ್ಲಿ ಅವರನ್ನು  ಹೈದರಾಬಾದ್‌ ಶಾಖೆಗೆ ವರ್ಗಾಯಿಸಲಾಯಿತು. ವಾಣಿ ಅವರು ಜಯರಾಂ ಅವರನ್ನು ವಿವಾಹವಾದ ಬಳಿಕ ಮುಂಬಯಿಗೆ ಶಿಫ್ಟ್ ಆಗಬೇಕಾಯಿತು. ಪತ್ನಿಯ ಸಂಗೀತದ ಆಸಕ್ತಿಯನ್ನು ಕಂಡ ಜಯರಾಂ, ಹಿಂದೂಸ್ತಾನಿ ಸಂಗೀತದ ತರಬೇತಿ ಪಡೆಯಲು ಉಸ್ತಾದ್‌ ಅಬ್ದುಲ್‌ ರೆಹಮಾನ್‌ ಖಾನ್‌ ಅವರ ಬಳಿ ಸೇರಿಸುತ್ತಾರೆ. ಸತತ ತರಬೇತಿಯಲ್ಲಿ ತೊಡಗಿದ್ದ ವಾಣಿ ಜಯರಾಂ ಅವರು ಕೊನೆಗೂ ಸಂಗೀತ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡರು. ಪರಿಣಾಮವಾಗಿ ತಮ್ಮ ಬ್ಯಾಂಕ್‌ ನೌಕರಿ ತ್ಯಜಿಸಬೇಕಾಗಿ ಬಂತು.

ಉಸ್ತಾದ್‌ ಅಬ್ದುಲ್‌ ರೆಹಮಾನ್‌ ಖಾನ್‌ ಅವರ ಜತೆಗಿನ  ತರಬೇತಿಯಲ್ಲಿ ವಾಣಿ ಅವರು ಗಜಲ್‌, ಭಜನ್‌ನಂತಹ  ವಿವಿಧ ಗಾಯನ ಪ್ರಕಾರಗಳ ಸೂಕ್ಷ್ಮವ್ಯತ್ಯಾಸಗಳನ್ನು ತಿಳಿದುಕೊಂಡರು ಮತ್ತು ಗಾಯಕಿಯಾಗಿ ಪಕ್ವವಾಗುತ್ತಾ ಬಂದರು. ಪರಿಣಾಮವಾಗಿ  1969ರಲ್ಲಿ ತಮ್ಮ ಮೊದಲ ಸಾರ್ವಜನಿಕ ಸಂಗೀತ ಕಛೇರಿಯನ್ನು ನೀಡುವಂತಾಯಿತು.

ಅದೇ ವರ್ಷದಲ್ಲಿ ಗಾಯಕ ಕುಮಾರ್‌ ಗಂಧರ್ವ ಅವರೊಂದಿಗೆ ಮರಾಠಿ ಆಲ್ಬಂ ಅನ್ನು ರೆಕಾರ್ಡಿಂಗ್‌ ಮಾಡುತ್ತಿದ್ದ ಸಂಗೀತ ನಿರ್ದೇಶಕ ವಸಂತ ದೇಸಾಯಿ ಅವರಿಗೆ ವಾಣಿ ಜಯರಾಂ ಪರಿಚಯವಾಗಿ ಕುಮಾರ ಗಂಧರ್ವ ಅವರೊಂದಿಗೆ “ಋಣನುಬಂಧಚಾ’ ಹಾಡನ್ನು ಹಾಡಲು ಆಯ್ಕೆ ಮಾಡಿದರು. ಮರಾಠಿ ಪ್ರೇಕ್ಷಕರಲ್ಲಿ ಈ ಆಲ್ಬಂ ಹೆಚ್ಚು ಜನಪ್ರಿಯತೆಯನ್ನು ಗಳಿಸುವ ಮೂಲಕ ವಾಣಿ ಜಯರಾಂ ಗಾಯಕಿಯಾಗಿಯೂ ಬಿಝಿಯಾಗುತ್ತಾ ಹೋದರು.

19 ಭಾಷೆಗಳಲ್ಲಿ ಗಾಯನ
ವಾಣಿ ಜಯರಾಂ ಅವರ ಕಂಠಸಿರಿಗೆ ಎಲ್ಲ ಭಾಷೆಯ ಸಿನೆಮಾ, ಸಂಗೀತ ಪ್ರೇಮಿಗಳು ಮನಸೋತಿದ್ದರು. ತಮ್ಮ ಸಿನೆಮಾದಲ್ಲಿ ವಾಣಿ ಅವರ ಮೆಲೋಡಿ ಇದ್ದರೆ ಸಿನೆಮಾದ ತೂಕ ಹೆಚ್ಚುತ್ತದೆ ಎಂಬ ಭಾವನೆ ಸಿನೆಮಾ ಮಂದಿಯಲ್ಲಿದ್ದ ಕಾರಣದಿಂದಲೇ ವಾಣಿ ಜಯರಾಂ ಅವರು 19ಕ್ಕೂ ಹೆಚ್ಚು ಭಾಷೆಗಳಲ್ಲಿ 10 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳ, ಕನ್ನಡ, ಗುಜರಾತಿ, ಮರಾಠಿ, ಬಂಗಾಲಿ, ಒರಿಯಾ, ಇಂಗ್ಲಿಷ್‌, ಭೋಜ್‌ಪುರಿ, ರಾಜಸ್ಥಾನಿ, ಉರ್ದು, ತುಳು… ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ವಾಣಿ ಜಯರಾಂ ಹಾಡಿದ್ದಾರೆ.

Advertisement

ಸಿನೆಮಾ ಹಾಡುಗಳ ಜತೆ ವಾಣಿ ಅವರು ಸಾವಿರಾರು ಭಕ್ತಿಗೀತೆಗಳು ಮತ್ತು ಖಾಸಗಿ ಆಲ್ಬಂಗಳನ್ನು ರೆಕಾರ್ಡ್‌ ಮಾಡಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸಂಗೀತ ಕಛೇರಿಗಳಲ್ಲಿ ಭಾಗವಹಿಸಿದ್ದರು.

ದಕ್ಷಿಣದಲ್ಲಿ ಮಿಂಚು
ವಾಣಿ ಜಯರಾಂ ಅವರು ಬಹುಭಾಷಾ ಗಾಯಕಿಯಾಗಿ ಹೇಗೆ ಗುರುತಿಸಿಕೊಂಡಿದ್ದರೋ ಅದೇ ರೀತಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್‌ ಗಾಯಕಿಯಾಗಿ ಮಿಂಚಿದ್ದು ಸುಳ್ಳಲ್ಲ. ಅದೇ ಕಾರಣದಿಂದ ದಕ್ಷಿಣ ಭಾರತದ ಸಿನೆಮಾ ಮಂದಿ ಹಾಗೂ ಸಂಗೀತ ಪ್ರೇಮಿಗಳಿಗೆ ವಾಣಿ ಜಯರಾಂ ಅವರ ಹಾಡು ಎಂದರೆ ಅಚ್ಚುಮೆಚ್ಚು. ತೆಲುಗು, ತಮಿಳು, ಮಲಯಾಳ, ಕನ್ನಡ ಚಿತ್ರಗಳಲ್ಲಿ ವಾಣಿ ಜಯರಾಂ ಎವರ್‌ಗ್ರೀನ್‌ ಸಿಂಗರ್‌ ಆಗಿ ಮಿಂಚಿದ್ದಾರೆ. ತೆಲುಗಿನಲ್ಲಿ “ಅಭಿಮಾನಪಂತುಲು’ ಸಿನೆಮಾದ “ಎಪ್ಪತಿವಾಲೆ ಕಡೂರ ನಾ ಸ್ವಾಮಿ’ ಹಾಡಿನ ಮೂಲಕ ಎಂಟ್ರಿಕೊಟ್ಟರೆ, ತಮಿಳಿನಲ್ಲಿ “ತಾಯುಂ ಸಿಯುಂ’ ಸಿನೆಮಾದ ಹಾಡಿಗೆ ಮೊದಲ ಬಾರಿಗೆ ಧ್ವನಿಯಾದರು. ಮಲಯಾಳದ‌ಲ್ಲಿ “ಸ್ವಪ್ನಂ’ ಮೊದಲ ಹಾಡಾದರೆ, ಕನ್ನಡದಲ್ಲಿ “ಕೆಸರಿನ ಕಮಲ’ ಚಿತ್ರದ ಹಾಡಿನ ಮೂಲಕ ಕನ್ನಡ ಸಂಗೀತ ಪ್ರಿಯರ ಮನಕ್ಕೆ ಲಗ್ಗೆ ಇಟ್ಟವರು ವಾಣಿ ಜಯರಾಂ.

ಕನ್ನಡದಲ್ಲಿ 600ಕ್ಕೂ ಹೆಚ್ಚು ಹಾಡುಗಳು
ವಾಣಿ ಜಯರಾಂ ಹಾಗೂ ಕನ್ನಡ ಚಿತ್ರರಂಗಕ್ಕೆ ಅವಿನಾಭಾವ ನಂಟಿದೆ. ಅದು ಸಂಗೀತದ ಮೂಲಕ ಬಂದ ನಂಟು. ಕನ್ನಡದಲ್ಲಿ ವಾಣಿ ಜಯರಾಂ ಅವರು 600ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗುವ ಮೂಲಕ ಕನ್ನಡ ಮನಸ್ಸುಗಳಿಗೆ ಹತ್ತಿರವಾದವರು. ವಾಣಿ ಜಯರಾಂ ಅವರನ್ನು ಕನ್ನಡಕ್ಕೆ ಕರೆತಂದವರು ಸಂಗೀತ ನಿರ್ದೇಶಕ ವಿಜಯ ಭಾಸ್ಕರ್‌. ತಮ್ಮ ಸಂಗೀತ ನಿರ್ದೇಶನದ “ಕೆಸರಿನ ಕಮಲ’ ಚಿತ್ರದ ಎರಡು ಹಾಡುಗಳನ್ನು ವಾಣಿ ಜಯರಾಂ ಅವರಿಂದ ಹಾಡಿಸುವ ಮೂಲಕ ಕನ್ನಡಕ್ಕೆ ಅಧಿಕೃತ ಎಂಟ್ರಿ ಕೊಡಿಸಿದರು. “ಅಬ್ಬಬ್ಟಾ ಎಲ್ಲಿದ್ದಳ್ಳೋ ಕಾಣೆ’ ಹಾಗೂ “ನಗು ನೀ ನಗು’ ಹಾಡುಗಳಿಗೆ ವಾಣಿ ಜಯರಾಂ ಅವರು ಧ್ವನಿಯಾದರು.

ವಾಣಿ ಜಯರಾಂ ಅವರಿಗೆ ಕನ್ನಡದಲ್ಲಿ ಬ್ರೇಕ್‌ ನೀಡಿದ ಸಿನೆಮಾವೆಂದರೆ “ಉಪಾಸನೆ’ ಚಿತ್ರ. ಈ ಚಿತ್ರದ “ಭಾವವೆಂಬ ಹೂವು ಅರಳಿ’ ಹಾಡು ಕನ್ನಡ ಸಿನಿಪ್ರೇಮಿಗಳಿಗೆ ವಾಣಿ ಜಯರಾಂ ಅವರನ್ನು ದೊಡ್ಡ ಮಟ್ಟದಲ್ಲಿ ಪರಿಚಯಿಸಿತು. “ಕೆಸರಿನ ಕಮಲ’ ಚಿತ್ರದಿಂದ ಆರಂಭವಾದ ಕನ್ನಡದ ನಂಟು 2001ರವರೆಗೆ ಸಾಗಿ ಬಂತು. ವಾಣಿ ಜಯರಾಂ ಅವರು ಕನ್ನಡಕ್ಕೆ ಸಾಕಷ್ಟು ಹಿಟ್‌ ಸಾಂಗ್‌ಗಳನ್ನು ನೀಡಿದ್ದಾರೆ. “ಈ ಶತಮಾನದ ಮಾದರಿ ಹೆಣ್ಣು’, “ಬೆಸುಗೆ ಬೆಸುಗೆ’, “ಬೆಳ್ಳಿ ಮೋಡವೇ ಎಲ್ಲಿ ಓಡುವೆ’, “ಜೀವನ ಸಂಜೀವನ’, “ದೇವ ಮಂದಿರದಲ್ಲಿ’, “ಹಾಡು ಹಳೆಯದಾದರೇನು’, “ಪ್ರಿಯತಮಾ ಕರುಣೆಯ ತೋರೆಯ’, “ಸದಾ ಕಣ್ಣಲಿ ಪ್ರಣಯದ’, “ಎಂದೆಂದು ನಿನ್ನನು ಮರೆತು’, “ಹೋದೆಯ ದೂರ ಓ ಜೊತೆಗಾರ’, “ಲಾಲಿ ಲಾಲಿ ಸುಕುಮಾರ’, “ರಾಗ ಜೀವನ ರಾಗ’, “ಸುತ್ತಮುತ್ತ ಯಾರೂ ಇಲ್ಲ’, “ಕನಸಲೂ ನೀನೇ ಮನಸಲೂ ನೀನೇ’, “ನಾ ನಿನ್ನ ಬಿಡಲಾರೆ ಎಂದು’, “ಆ ಮೋಡ ಬಾನಲ್ಲಿ ತೇಲಾಡುತಾ’, “ಇವ ಯಾವ ಸೀಮೆ ಗಂಡು ಕಾಣಮ್ಮೊ’… ಸಹಿತ ಅನೇಕ ಹಾಡುಗಳಿಗೆ ವಾಣಿ ಜಯರಾಂ ಧ್ವನಿಯಾಗಿದ್ದಾರೆ.  ವಾಣಿ ಅವರು ಕನ್ನಡದಲ್ಲಿ ಹಾಡಿದ ಕೊನೆಯ ಸಿನೆಮಾ “ನೀಲಾ’. ಈ ಚಿತ್ರದ ಆರು ಹಾಡುಗಳನ್ನು ವಾಣಿ ಜಯರಾಂ ಹಾಡಿದ್ದರು. ವಿಶೇಷವೆಂದರೆ ವಾಣಿ ಜಯರಾಂ ಹಾಡಿದ ಮೊದಲ ಹಾಗೂ ಕೊನೆಯ ಚಿತ್ರಕ್ಕೆ ಸಂಗೀತ ನೀಡಿದ್ದು ವಿಜಯ ಭಾಸ್ಕರ್‌.

ದಿಗ್ಗಜರೊಂದಿಗೆ ಗಾನಯಾನ
ವಾಣಿ ಜಯರಾಂ ಇತ್ತೀಚೆಗೆ ವೃತ್ತಿಪರ ಗಾಯಕಿಯಾಗಿ 50 ವರ್ಷಗಳನ್ನು ಪೂರೈಸಿದ್ದರು. ಈ 50 ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇಷ್ಟು ವರ್ಷದ ಜರ್ನಿಯಲ್ಲಿ ಸಾಕಷ್ಟು ದಿಗ್ಗಜರೊಂದಿಗೆ ವಾಣಿ ಅವರು ಕೆಲಸ ಮಾಡಿದ್ದರು. ಎಂ.ಎಸ್‌ ವಿಶ್ವನಾಥನ್‌, ಇಳಯರಾಜ, ಆರ್‌ಡಿ.ಬರ್ಮನ್‌, ಕೆ.ವಿ. ಮಹದೇವನ್‌, ಒ.ಪಿ. ನಯ್ಯರ್‌, ಮದನ್‌ ಮೋಹನ್‌ ಸಹಿತ ಪ್ರಸಿದ್ಧ ಸಂಗೀತ ಸಂಯೋಜಕರೊಂದಿಗೆ ಕೆಲಸ ಮಾಡಿ¨ªಾರೆ. ಇನ್ನು ಕನ್ನಡದಲ್ಲಿ ಹೇಳಬೇಕಾದರೆ ಸಂಗೀತ ನಿರ್ದೇಶಕರಾದ ಜಿ.ಕೆ.ವೆಂಕಟೇಶ್‌, ವಿಜಯ ಭಾಸ್ಕರ್‌, ಟಿ.ಜಿ.ಲಿಂಗಪ್ಪ, ಉಪೇಂದ್ರ ಕುಮಾರ್‌, ಎಂ.ರಂಗರಾವ್‌, ಎಲ್‌.ವೈದ್ಯನಾಥನ್‌, ಶಂಕರ್‌- ಗಣೇಶ್‌, ರಾಜನ್‌ ನಾಗೇಂದ್ರ, ಹಂಸಲೇಖಾ ಸಹಿತ ಅನೇಕ ಸಂಗೀತ ನಿರ್ದೇಶಕರ ಜತೆ ವಾಣಿ ಜಯರಾಂ ಸಂಗೀತ ಪಯಣ ಮಾಡಿದ್ದಾರೆ.

ಗಾಯಕಿಗೆ 60 ವರ್ಷ, ಧ್ವನಿಗೆ 16 ವರ್ಷ !
ಆರೇಳು ವರ್ಷಗಳ ಹಿಂದಿನ ಮಾತು. ಬೆಂಗಳೂರು ಬಸವನಗುಡಿ ಗಣೇಶೋತ್ಸವದಲ್ಲಿ ಹಳೆಯ ಚಿತ್ರಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಾಡಾಗಿತ್ತು. ಖ್ಯಾತ ಗಾಯಕಿಯರಾದ ವಾಣಿ ಜಯರಾಂ ಮತ್ತು ಪಿ.ಸುಶೀಲಾ ಹಿಂದೊಮ್ಮೆ ತಾವೇ ಹಾಡಿದ್ದ ಗೀತೆಗಳಿಗೆ ದನಿಯಾಗಲಿದ್ದುದು ಅಂದಿನ ವಿಶೇಷ ಆಕರ್ಷಣೆಯಾಗಿತ್ತು. ಈ ಗಾಯಕಿಯರಿಬ್ಬರಿಗೂ ವಯಸ್ಸಾಗಿದೆ. ಅದರ ಪ್ರಭಾವ ಅವರ ಕಂಠದ ಮೇಲೂ ಆಗಿರಬಹುದು. ಈ ಹಿಂದಿನಷ್ಟೇ ಮಧುರವಾಗಿ, ಸ್ಪಷ್ಟವಾಗಿ ಅವರು ಹಾಡಬಲ್ಲರಾ?ಎಂಬ ಪ್ರಶ್ನೆ ಅನುಮಾನ ಹಲವರನ್ನು ಕಾಡಿತ್ತು. ಅವತ್ತು ಮೊದಲು ವೇದಿಕೆಗೆ ಬಂದ ಪಿ. ಸುಶೀಲಾ- “ಮೆಲ್ಲುಸಿರೇ ಸವಿಗಾನ…’ ಎಂದು ಹಾಡಿದಾಗ, ಅಲ್ಲಿ ಕೂತಿದ್ದ ಸಾವಿರಾರು ಜನ ರೋಮಾಂಚನಕ್ಕೆ ಈಡಾದರು. ಅದಾಗಿ ಸ್ವಲ್ಪ ಹೊತ್ತಿಗೆ ವೇದಿಕೆಗೆ ಬಂದ ವಾಣಿ ಜಯರಾಂ- “ಪ್ರಿಯತಮಾ, ಕರುಣೆಯಾ ತೋರೆಯಾ…’ ಎಂದು ಹಾಡಿದಾಗ ಆ ದನಿಯ ಮೋಹಕತೆಗೆ ಪರವಶರಾದ ಜನ- ಗಾಯಕಿಗೆ 60 ವರ್ಷ ಮತ್ತು ಅವರ ಧ್ವನಿಗೆ ಈಗಲೂ 16 ವರ್ಷ ಎಂದು ಉದ್ಗರಿಸಿದ್ದರು.

3 ಬಾರಿ ರಾಷ್ಟ್ರಪ್ರಶಸ್ತಿ
ವಾಣಿ ಜಯರಾಂ ಅವರ ಸಂಗೀತ ಪಯಣದಲ್ಲಿ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ವಿಶೇಷವೆಂದರೆ ಅವರು ಮೂರು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿ¨ªಾರೆ. ಇದರ ಜತೆಗೆ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಗುಜರಾತ್‌ ಮತ್ತು ಒಡಿಶಾದ ರಾಜ್ಯ ಪ್ರಶಸ್ತಿಗಳು ಅವರ ಮುಡಿ ಸೇರಿವೆ.

ವಾಣಿ ಕನ್ನಡ ಹಿಟ್ಸ್‌

ನಗು ನೀ ನಗು, ಕಿರು ನಗೆ ನಗು

ಮೋಹನಾಂಗ ನಿನ್ನ ಕಂಡು ಓಡಿ ನಾ ಬಂದೆನೋ

ಈ ಶತಮಾನದ ಮಾದರಿ ಹೆಣ್ಣು

ದಾರಿ ಕಾಣದಾಗಿದೆ ರಾಘವೇಂದ್ರನೆ

ಸವಿ ನೆನಪುಗಳು ಬೇಕು ಸವಿಯಲೀ ಬದುಕು

ಓ ತಂಗಾಳಿಯೇ ನೀನಿಲ್ಲಿಗೆ ಓಡೋಡಿ ನಲಿದು ಒಲಿದು ಬಾ

ಲೈಫ್‌ ಈಸ್‌ ಎ ಮೆರ್ರಿ ಮೆಲೋಡಿ

ದಿವ್ಯ ಗಗನ ವನವಾಸಿನಿ

ಆ ದೇವರೆ ನುಡಿದ ಮೊದಲ ನುಡಿ

ಬಂದಿದೆ ಬದುಕಿನ ಬಂಗಾರದಾ ದಿನ, ನನ್ನಾ ದೇವನ ವೀಣಾವಾದನ

ಜೀವನ ಸಂಜೀವನ

ಹಾಡು ಹಳೆಯದಾದರೇನು ಭಾವ ನವ ನವೀನ

ಭಾವಯ್ಯ ಭಾವಯ್ನಾ ಇಲ್ಲೇ ನಿಂತಿರೇಕಯ್ಯ

ಸದಾ ಕಣ್ಣಲಿ ಒಲವಿನಾ ಕವಿತೆ ಹಾಡುವೆ

ಪ್ರಿಯತಮಾ… ಕರುಣೆಯಾ ತೋರೆಯಾ

ಏನೇನೋ ಆಸೆ… ನೀ ತಂದಾ ಭಾಷೆ

ರಾಗಾ ಜೀವನ ರಾಗಾ

ಬೆಸುಗೆ… ಬೆಸುಗೆ… ಜೀವನವೆಲ್ಲಾ ಸುಂದರ ಬೆಸುಗೆ

ಶ್ರಾವಣಮಾಸ ಬಂದಾಗ

ಕನಸಲೂ ನೀನೆ ಮನಸಲೂ ನೀನೆ

ನಾ ನಿನ್ನ ಮರೆಯಲಾರೆ

ಶುಭಮಂಗಳ ಸುಮುಹೂರ್ತವೇ

ತೆರೆದಿದೆ ಮನೆ ಓ ಬಾ ಅತಿಥಿ

“ಎಂದೆಂದೂ ನಿನ್ನನು ಮರೆತು ಬದುಕಿರಲಾರೆ

ಮಧು ಮಾಸ ಚಂದ್ರಮ ನೈದಿಲೆಗೆ ಸಂಭ್ರಮ

ವಸಂತ ಬರೆದನು ಒಲವಿನ ಓಲೆ

ಗಾಡಾಂಧಕಾರದ ಇರುಳಲ್ಲಿ, ಕಾರ್ಮೋಡ ನೀರಾದ ವೇಳೆಯಲಿ

ಗೌರಿ ಮನೋಹರಿಯ ಕಂಡೆ

ನೀಲ ಮೇಘ ಶ್ಯಾಮ, ನಿತ್ಯಾನಂದ ಧಾಮ

ಈ ಜೀವ ನಿನದೇ, ಈ ಭಾವ ನಿನದೇ

ಅಧರಂ ಮಧುರಂ, ವದನಂ ಮಧುರಂ

ನನ್ನೆದೆ ವೀಣೆಯು ಮಿಡಿಯುವುದು

ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next