Advertisement

30 ವರ್ಷದ ಮರಕ್ಕೆ ಮರುಜೀವ ಕೊಟ್ಟ ವನಸಿರಿ: ಕಿತ್ತ ಮರವನ್ನು ಮತ್ತೇ ನೆಟ್ಟು ಪ್ರಯೋಗ

06:26 PM Aug 02, 2022 | Team Udayavani |

ಸಿಂಧನೂರು: ರೈತರೊಬ್ಬರ ಜಮೀನಿನಲ್ಲಿ ಕಿತ್ತು ಹಾಕಿದ್ದ ಆಲದ ಮರವೊಂದಕ್ಕೆ ನಗರದ ವನಸಿರಿ ಫೌಂಡೇಶನ್‌ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮರುಜೀವ ಕಲ್ಪಿಸಿದ್ದಾರೆ.

Advertisement

ತಾಲೂಕಿನ ಏಳುರಾಗಿ ಕ್ಯಾಂಪಿನ ಜಮೀನಿನನ್ನು ಸ್ವತ್ಛಗೊಳಿಸಲು ಮುಂದಾದ ಹಿನ್ನೆಲೆಯಲ್ಲಿ 30 ವರ್ಷದ ಹಳೆಯ ಆಲದಮರವನ್ನು ಬೇರು ಸಮೇತ ಕಿತ್ತು ಹಾಕಲಾಗಿತ್ತು. ಬೇರು ಸಮೇತ ಕಿತ್ತು ಹಾಕಲು ಜೆಸಿಬಿ ಬಳಸಲಾಗಿತ್ತು. ಆಲದಮರದೊಟ್ಟಿಗೆ ಮೂವತ್ತು ವರ್ಷ ನಂಟಿದ್ದ ಜನರು ಮಾಹಿತಿ ನೀಡುತ್ತಿದ್ದಂತೆ ಆ ಮರದ ಬೇರನ್ನು ಹಿಡಿದು ಬೊಡ್ಡೆಯ ಸಮೇತ ಅದನ್ನು ತಂದು ಸರಕಾರದ ಜಾಗೆಯಲ್ಲಿ ಇಡುವ ಪ್ರಯತ್ನ ಮಾಡಲಾಗಿತ್ತು. ಮೇ. 25ರಂದು ಮಾಡಿದ ಈಪ್ರಯತ್ನ ಇಂದು ಫಲ ಕೊಟ್ಟಿದೆ.

ಚಿಗುರುಬಿಟ್ಟ ಆಲದ ಮರ: ಬಿದ್ದಲ್ಲಿ ಬೇರೂರಿ, ಗಗನಕ್ಕೆ ಕೈಎತ್ತಿ ಹೂ ಬಿಡುವ ಗಿಡಮರಕ್ಕೆ ವಾಸ್ತುವೆಲ್ಲಿ? ಎಂಬ ಪ್ರಶ್ನೆಗೆ ಈ ಆಲದ ಮರ ಉತ್ತರವಾಗಿದೆ. ನೆಲ ಸಿಕ್ಕರೆ ಸಾಕು ಚಿಗುರಿ ನೆರಳು ನೀಡಲು ಸಿದ್ಧ ಎಂಬುದನ್ನು ಸಾಬೀತುಪಡಿಸಿದೆ. ಆರಂಭದಲ್ಲಿ ಪರಿಸರ ತಜ್ಞರೊಂದಿಗೆ ಚರ್ಚಿಸಿ, ಆಲದಮರಕ್ಕೆ ಮರುಪೂರಣ ಮಾಡುವ ಕೆಲಸಕ್ಕೆ ಕೈ ಹಾಕಲಾಗಿತ್ತು. ಪಿಡಬ್ಲ್ಯೂಡಿ ಕ್ಯಾಂಪಿನ ನೀರಾವರಿ ಇಲಾಖೆಯ ಜಾಗದಲ್ಲಿ ಮರಳಿ ಆಲದ ಮರದ ಬೊಡ್ಡೆಯನ್ನು ನೆಡುವಾಗ, ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿತ್ತು. ಮರುದಿನ ತಜ್ಞರ ಮಾಹಿತಿ ಪ್ರಕಾರ, 30 ಕೆಜಿ ಬೆಲ್ಲ, 5 ಕೆಜಿ ಉಪ್ಪು, ಜೇನುತುಪ್ಪ ಮಿಶ್ರಣ ಮಾಡಿ, ಬೇರಿಗೆ ಬಿಡಲಾಗಿತ್ತು. ಕೊನೆಗೂ ಈ ಪ್ರಯತ್ನ ಯಶಸ್ಸು ಕಂಡಿದ್ದು, ಆಲದಮರದ ಬೊಡ್ಡೆ ಚಿಗುರು ಬಿಟ್ಟು ಎಲೆಯಾಗಿ ಪಸರಿಸಿದೆ.

ನೋಡುವುದೇ ಸೊಬಗು: ಬೇರು ಸಮೇತ ಕಿತ್ತುಹಾಕಿದ 30 ವರ್ಷದ ಗಿಡ ಮರುಜೀವ ಪಡೆದ ವಿಷಯ ಕೇಳಿ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಮುನೇನಕೊಪ್ಪ, ಶಾಸಕ ವೆಂಕಟರಾವ್‌ ನಾಡಗೌಡ, ಡಾ.ಕೆ.ಶಿವರಾಜ್‌ ಸೇರಿದಂತೆ ಅನೇಕರು ಗಿಡವನ್ನು ನೋಡಿ ಬಂದಿದ್ದಾರೆ. ಯದ್ದಲದೊಡ್ಡಿ ವಿರಕ್ತಮಠದ ಮಹಾಲಿಂಗ ಮಹಾಸ್ವಾಮಿಗಳು, ಅಮರಯ್ಯ ತಾತನವರು ಆಲದಮರ ಮರುನೆಟ್ಟ ಸ್ಥಳ ನೋಡಿ, ಸಂತಸ ವ್ಯಕ್ತಪಡಿಸಿದ್ದಾರೆ.

ಮೂವತ್ತು ವರ್ಷದ ಆಲದಮರವನ್ನು ಕಿತ್ತುಹಾಕಿದಾಗ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಾಯಿತು. ನೀರಾವರಿ ಇಲಾಖೆ ಸ್ಥಳ ಕೊಟ್ಟ ಹಿನ್ನೆಲೆಯಲ್ಲಿ ಮರುಜೀವ ಪಡೆದಿದ್ದು, ಆಲದಮರ ಎಲೆ ಬಿಡುತ್ತಿದ್ದು, ಸಂತಸ ಮೂಡಿಸಿದೆ. -ಅಮರೇಗೌಡ ಮಲ್ಲಾಪುರ, ಸಂಸ್ಥಾಪಕ ಅಧ್ಯಕ್ಷ, ವನಸಿರಿ ಪೌಂಢೇಶನ್‌, ರಾಯಚೂರು.

Advertisement

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next