Advertisement

ಮೌಲ್ಯಮಾಪನಕ್ಕೂ ಸೂಕ್ತ ಮಾನದಂಡವಿರಲಿ

11:18 PM Jul 04, 2022 | Team Udayavani |

ಸುಲಭದ ಪ್ರಶ್ನೆ ಪತ್ರಿಕೆಯಿಂದ ಪರೀಕ್ಷೆಯನ್ನು ಸುಲಭವಾಗಿಸಿ ಮೌಲ್ಯಮಾಪನವನ್ನು ಸರಳವಾಗಿಸಿದಷ್ಟು ಗಳಿಸಿದ ಅಂಕಗಳ ಬೆಲೆ ಕಡಿಮೆಯಾಗುತ್ತಾ ಹೋಗುತ್ತದೆ. ಬಹುತೇಕ ಉನ್ನತ ವ್ಯಾಸಂಗದಲ್ಲಿ ಎಲ್ಲಿಯೂ ಅಂಕ ಗಣನೆಗೆ ಬರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಶಿಕ್ಷಣ ಇಲಾಖೆಯೂ ಪ್ರಶ್ನೆ ಪತ್ರಿಕೆಗಳು ತೀರ ಸುಲಭವು ಇಲ್ಲದೇ, ತೀರ ಕಠಿನವೂ ಆಗಿರದಂತೆ ನೋಡಿಕೊಳ್ಳಬೇಕು. ಮೌಲ್ಯಮಾಪನಕ್ಕೂ ಸರಿಯಾದ ಮಾನದಂಡವನ್ನಿರಿಸಬೇಕು. ಭಾಷಾ ವಿಷಯಗಳಲ್ಲಿ ಸುಂದರವಾದ ಕೈ ಬರೆಹಕ್ಕೆಂದೇ ಕೆಲವು ಅಂಕಗಳನ್ನು ಮೀಸಲಾಗಿಡಬೇಕು. ಹಾಗೆಂದು ಇಷ್ಟೊಂದು ಅಂಕ ಗಳಿಸುತ್ತಿರುವ ಮಕ್ಕಳ ಸಾಧನೆ ಕಡಿಮೆಯದ್ದೇನಲ್ಲ. ಆದರೆ ನಾವು ಅದಕ್ಕೆ ಹೆಚ್ಚಿನ ಮಹತ್ವವನ್ನು ನೀಡದೆ ಮುಂದಿನ ಕಲಿಕೆಯ ದಾರಿ ಎಷ್ಟು ಕಠಿನ ಮತ್ತು ದೀರ್ಘ‌ ಎಂದು ಮಕ್ಕಳಿಗೆ ಅರಿವು ಮೂಡಿಸಬೇಕು. ಅಂಕಗಳ ವ್ಯಾಪ್ತಿಗೆ ಒಳಪಡದ ಬದುಕುವ ವಿದ್ಯೆಯನ್ನು ಕಲಿಸಬೇಕು.

Advertisement

ಹತ್ತನೇ ತರಗತಿ ಪರೀಕ್ಷೆಯ ಫ‌ಲಿತಾಂಶ ಹಾಗೂ ಮರುಮೌಲ್ಯಮಾಪನದ ಫ‌ಲಿತಾಂಶ ಈಗಾಗಲೇ ಪ್ರಕಟವಾಗಿದೆ. ಫ‌ಲಿತಾಂಶವನ್ನು ಗಮನಿಸಿದಾಗ ಎಲ್ಲರಿಗೂ ಮೊಗೆಮೊಗೆದು ಅಂಕಗಳನ್ನು ಕೊಟ್ಟ ಹಾಗಿದೆ. ಆದರೆ ಖಂಡಿತಾ ಇದು ಮಕ್ಕಳ ಶ್ರಮದ ಪರಿಹಾಸ್ಯವಲ್ಲ. ಸ್ವತಃ ಆಪ್ತವಲಯದ ಕೆಲವು ಮಕ್ಕಳನ್ನು ಕೇಳಿದಾಗ ಅವರ ನಿರೀಕ್ಷೆಗಿಂತ ಹೆಚ್ಚಿನ ಅಂಕ ಬಂದಿರುವುದನ್ನು ಒಪ್ಪಿಕೊಂಡರು. ಉತ್ತರ ಪತ್ರಿಕೆಯಲ್ಲಿನ ಸಣ್ಣ ಪುಟ್ಟ ತಪ್ಪುಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಅಂಕಗಳನ್ನು ಕೊಟ್ಟಿರಬಹುದು. ಹಿಂದಿನ ಎರಡು ವರ್ಷ ಕೊರೊನಾದಿಂದ ಆದ ತೊಂದರೆಗಳನ್ನು ಗಮನ ದಲ್ಲಿಟ್ಟುಕೊಂಡು ಈ ಬಾರಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ಮೌಲ್ಯಮಾಪನ ಪ್ರಕ್ರಿಯೆಯನ್ನು ಸರಳಗೊಳಿಸಿರಬಹುದು. ಆದರೆ ಇದು ನಿಜವಾಗಿಯೂ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸು ತ್ತದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಸುಲಭದಲ್ಲಿ ಸಿಕ್ಕಿದ್ದರ ಸಂತೋಷವೂ ಅಲ್ಪಾಯುವಂತೆ! ಸ್ವಂತ ಬುದ್ಧಿಯಿಂದ ಒಂದು ಸ್ವತಂತ್ರ ವಾಕ್ಯವನ್ನೂ ರಚಿಸಲಾ ಗದ ವಿದ್ಯಾರ್ಥಿ ಬಾಯಿಪಾಠ ಹೊಡೆದು ಪೂರ್ಣ ಅಂಕ ಗಳಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ಆದರೆ ನಮ್ಮ ಪರೀಕ್ಷಾ ಪದ್ಧತಿಯು ಇರುವುದು ಹಾಗೇ ತಾನೇ?

ಇತ್ತೀಚಿನ ವರ್ಷದ ಮತ್ತೂಂದು ಬೆಳವಣಿಗೆ ಎಂದರೆ ಮರು ಮೌಲ್ಯ ಮಾಪನ. ಹಿಂದೆಲ್ಲ ಮರು ಮೌಲ್ಯಮಾಪನವೆಂದರೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ನಾವು ಪಾಸಾಗುತ್ತಿದ್ದೆವು ಎಂಬ ನಂಬಿಕೆ ಇದ್ದರೆ ಮರು ಎಣಿಕೆಗೆ ಹಾಕುತ್ತಿದ್ದರು. ಆಗೆಲ್ಲ ಮರು ಮೌಲ್ಯಮಾಪನ ಹೆಚ್ಚು ಬಳಕೆಯಲ್ಲಿರಲಿಲ್ಲ. ಕೊನೆಯಲ್ಲಿ ಒಟ್ಟು ಗಳಿಸಿದ ಅಂಕ ಲೆಕ್ಕ ಹಾಕುವಾಗ ನಡುವಿನ ಪುಟ ಎಲ್ಲಾದರು ತಪ್ಪಿ ಹೋಗಿದ್ದರೆ ಮರು ಎಣಿಕೆಯಲ್ಲಿ ಹೆಚ್ಚಿನ ಅಂಕಗಳು ದೊರಕುತ್ತಿದ್ದವು. ಅನಂತರದ ದಿನಗಳಲ್ಲಿ ಮರುಮೌಲ್ಯಮಾಪನ ಮತ್ತು ಮರುಎಣಿಕೆ ಎರಡೂ ಸಾಮಾನ್ಯ ವಾಗತೊಡಗಿದವು.

ಸ್ವತಃ ಕಂಡಂತೆ 90ರ ದಶಕದಲ್ಲಿ ಮರುಎಣಿಕೆಯಲ್ಲಿ 26ಅಂಕಗಳ ವರೆಗೆ ಹೆಚ್ಚು ಅಂಕ ಗಳಿಸಿದ ನಿದರ್ಶನ ಗಳಿದ್ದವು. ಆದರೆ ಅಲ್ಲೊಂದು ಇಲ್ಲೊಂದು ಎಂಬಂತೆ. ಸ್ವತಃ ಅಧ್ಯಾಪಕರೇ ವಿದ್ಯಾರ್ಥಿಗಳಿಗೆ ಮರುಮೌಲ್ಯ ಮಾಪನಕ್ಕೆ ಹಾಕುವಂತೆ ಸಲಹೆ ಕೊಡುತ್ತಿರಲಿಲ್ಲ. ಅದೆಲ್ಲ ಆಗುವ ಹೋಗುವ ವಿಷಯ ವಲ್ಲ ಎಂದೇ ಹೇಳುತ್ತಿದ್ದರು. ಮತ್ತೆ ಮರು ಎಣಿಕೆಯ ಫ‌ಲಿತಾಂಶ ಬರುವಾಗ ಕಾಲೇಜು ಪ್ರಾರಂಭವಾಗಿ ಒಂದೆರಡು ತಿಂಗಳುಗಳಾದರೂ ಆಗಿರುತ್ತಿತ್ತು. ಆದರೆ ಈಗ ಎಲ್ಲವೂ ಕ್ಷಣದಲ್ಲೇ ಮುಗಿದು ಹೋಗುತ್ತವೆ. ಉತ್ತರ ಪತ್ರಿಕೆಯ scanned copyಯನ್ನು download ಮಾಡಿಕೊಂಡು ನೋಡಿ, ಬೇಕಿದ್ದರೆ ಮರುಮೌಲ್ಯಮಾಪನಕ್ಕೆ ಹಾಕಬಹುದು. 625ರಲ್ಲಿ 624 ಅಂಕ ಗಳಿಸಿದ ವಿದ್ಯಾರ್ಥಿಯೂ ಮರು ಮೌಲ್ಯಮಾಪನಕ್ಕೆ ಹಾಕಿದ ಉದಾಹರಣೆಗಳಿವೆ. ಸ್ವತಃ ಶಾಲೆಯ ಅಧ್ಯಾಪಕರೇ ಕೇವಲ ಎರಡೋ ಮೂರೋ ಅಂಕ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನಕ್ಕೆ ಹಾಕುವಂತೆ ಸಲಹೆ ನೀಡುತ್ತಾರೆ. ಶಾಲೆಯ ಪಟ್ಟಿ ಬದಲಾಗುತ್ತಾ ಇರುತ್ತದೆ. ಫ‌ಲಿತಾಂಶ ಬಂದ ಮೊದಲಲ್ಲಿ ಯಾರನ್ನೂ ಕೂಡ ತಾಲೂಕಿಗೆ ಪ್ರಥಮ, ಜಿಲ್ಲೆಗೆ ಪ್ರಥಮ ಎಂದೆಲ್ಲ ಘೋಷಣೆ ಮಾಡುವಂತೆ ಇಲ್ಲ.

ಮರುಮೌಲ್ಯಮಾಪನದ ಫ‌ಲಿತಾಂಶ ಬಂದ ಮೇಲೆ ಈ ಎಲ್ಲ ಸ್ಥಾನಗಳು ಅದಲು ಬದಲಾಗುತ್ತವೆ. ಮರುಮೌಲ್ಯಮಾಪನಕ್ಕೆ ಹಾಕಿದವರಲ್ಲಿ ಹೆಚ್ಚಿನವರಿಗೆ ಅಂಕಗಳಲ್ಲಿ ವ್ಯತ್ಯಾಸ ಕಂಡುಬಂದು ತರಗತಿಯಲ್ಲಿ ಮೊದಲಿಗನಾದ ವಿದ್ಯಾರ್ಥಿ ಎರಡನೆಯ ಸ್ಥಾನಕ್ಕೆ ಅಥವಾ ರಾಜ್ಯಕ್ಕೆ ಐದನೆಯ ಸ್ಥಾನದಲ್ಲಿದ್ದವರು ಮೂರನೆಯ ಸ್ಥಾನಕ್ಕೆ ಹೀಗೆಲ್ಲ ಬದಲಾವಣೆ ಆಗುತ್ತಿರುತ್ತದೆ. ನಮ್ಮ ಉತ್ತರ ಪತ್ರಿಕೆಯನ್ನು ನಾವೇ ನೋಡಿ, ಹೆಚ್ಚಿನ ಅಂಕ ಬರಬಹುದೇ ಎಂದು ಸ್ವತಃ ತಿಳಿದುಕೊಳ್ಳುವುದು ಒಂದು ಉತ್ತಮ ಬೆಳವಣಿಗೆ. ಗಳಿಸಿದ ಅಂಕವೇ ಹೆಚ್ಚಿದ್ದು ಕಡಿಮೆ ಬರಬೇಕಿತ್ತು ಎಂದವರು ಇಲ್ಲಿ ತನಕ ಯಾರಿಲ್ಲ! ಒಟ್ಟಾರೆಯಾಗಿ ಈ ಮರು ಮೌಲ್ಯಮಾಪನದಲ್ಲಿ ಬಹುತೇಕ ಮಕ್ಕಳಿಗೆ ಹೆಚ್ಚುವರಿ ಅಂಕ ಸಿಗುತ್ತಿರುವುದು, ಮೊದಲು ಮಾಡಿದ ಮೌಲ್ಯಮಾಪನದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡುತ್ತದೆ. ನಾನೂ ಮರು ಮೌಲ್ಯಮಾಪನಕ್ಕೆ ಹಾಕಿದ್ದರೆ ನನಗೂ ಹೆಚ್ಚುವರಿ ಅಂಕ ಬರುತ್ತಿತ್ತೋ ಏನೋ ಎಂದು ಪ್ರತೀ ವಿದ್ಯಾರ್ಥಿಯೂ ಭಾವಿಸುವಂತಾಗಿದೆ. ಈಗಿನ ಸಂಭಾಷಣೆಯ ಪರಿ ಹೇಗಿದೆ ಎಂದರೆ ಮೊದಲಿಗೆ “SSLCಯಲ್ಲಿ ಮಾರ್ಕ್ಸ್ ಎಷ್ಟು’ ಎಂದು ಕೇಳುವುದು ಅನಂತರ revaluvationಗೆ ಹಾಕಿದ್ದೀಯಾ ಎಂದು ಕೇಳುವುದು.

Advertisement

ಸುಲಭದ ಪ್ರಶ್ನೆ ಪತ್ರಿಕೆಯಿಂದ ಪರೀಕ್ಷೆಯನ್ನು ಸುಲಭವಾಗಿಸಿ ಮೌಲ್ಯಮಾಪನವನ್ನು ಸರಳವಾಗಿಸಿದಷ್ಟು ಗಳಿಸಿದ ಅಂಕಗಳ ಬೆಲೆ ಕಡಿಮೆಯಾಗುತ್ತಾ ಹೋಗುತ್ತದೆ. ಬಹುತೇಕ ಉನ್ನತ ವ್ಯಾಸಂಗದಲ್ಲಿ ಎಲ್ಲಿಯೂ ಅಂಕ ಗಣನೆಗೆ ಬರುವು ದಿಲ್ಲ. ಪರಿಸ್ಥಿತಿ ಹೀಗಿರುವಾಗ ಶಿಕ್ಷಣ ಇಲಾಖೆಯೂ ಪ್ರಶ್ನೆ ಪತ್ರಿಕೆಗಳು ತೀರ ಸುಲಭವು ಇಲ್ಲದೇ, ತೀರ ಕಠಿನವೂ ಆಗಿರದಂತೆ ನೋಡಿಕೊಳ್ಳಬೇಕು. ಮೌಲ್ಯ ಮಾಪನಕ್ಕೂ ಸರಿಯಾದ ಮಾನದಂಡವನ್ನಿರಿಸಬೇಕು. ಭಾಷಾ ವಿಷಯಗಳಲ್ಲಿ ಸುಂದರವಾದ ಕೈ ಬರೆಹಕ್ಕೆಂದೇ ಕೆಲವು ಅಂಕಗಳನ್ನು ಮೀಸಲಾಗಿ ಡಬೇಕು. ಹಾಗೆಂದು ಇಷ್ಟೊಂದು ಅಂಕ ಗಳಿಸು ತ್ತಿರುವ ಮಕ್ಕಳ ಸಾಧನೆ ಕಡಿಮೆಯದ್ದೇನಲ್ಲ. ಆದರೆ ನಾವು ಅದಕ್ಕೆ ಹೆಚ್ಚಿನ ಮಹತ್ವವನ್ನು ನೀಡದೆ ಮುಂದಿನ ಕಲಿಕೆಯ ದಾರಿ ಎಷ್ಟು ಕಠಿನ ಮತ್ತು ದೀರ್ಘ‌ ಎಂದು ಮಕ್ಕಳಿಗೆ ಅರಿವು ಮೂಡಿಸಬೇಕು. ಅಂಕಗಳ ವ್ಯಾಪ್ತಿಗೆ ಒಳಪಡದ ಬದುಕುವ ವಿದ್ಯೆ ಯನ್ನು ಕಲಿಸಬೇಕು. ಬದುಕಿನುದ್ದಕ್ಕೂ ಈ ವಿದ್ಯೆಯ ಮೌಲ್ಯಮಾಪನ-ಮರುಮೌಲ್ಯಮಾಪನ ಆಗಾಗ ಆಗುತ್ತಿರುತ್ತದೆ ಎಂದು ಮನದಟ್ಟು ಮಾಡಬೇಕು. ಜೀವನದ ದಾರಿಯಲ್ಲಿ ಪ್ರತಿಯೊಬ್ಬರ ಸಾಧನೆಯೂ ವಿಶಿಷ್ಟವೇ.
ಇಲ್ಲಿ ಯಾರೊಬ್ಬರೂ ಮೇಲಲ್ಲ, ಕೀಳಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಪಟ್ಟಿ ಇರುತ್ತದೆ ಎಂಬ ತಿಳಿವಳಿಕೆ ಮಕ್ಕಳಿಗೆ ಬರುವಂತೆ ಮಾಡಬೇಕು. ಸೋಲು ಗೆಲುವಿನಲ್ಲಿ ಸಮಚಿತ್ತ ದಿಂದಿರಲು ಕಲಿಸಬೇಕು.

– ಶಾಂತಲಾ ಎನ್‌. ಹೆಗ್ಡೆ, ಸಾಲಿಗ್ರಾಮ

Advertisement

Udayavani is now on Telegram. Click here to join our channel and stay updated with the latest news.

Next