Advertisement

Valmiki Nigama case:ಸಿಬಿಐ ತನಿಖೆಯಿಂದ ಸಿಎಂ ಹೇಗೆ ಭಾಗಿಯಾಗಿದ್ದಾರೆಂದು ತಿಳಿಯಲಿದೆ: ಜೋಶಿ

03:16 PM Jun 02, 2024 | Team Udayavani |

ಹುಬ್ಬಳ್ಳಿ: ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಎಂ ಆದಿಯಾಗಿ ಎಲ್ಲರೂ ಭಾಗಿಯಾಗಿದ್ದಾರೆ. ಹೀಗಾಗಿ ಮೊದಲು ಮಂತ್ರಿಯನ್ನು ಬಂಧಿಸಬೇಕು. ನಂತರ ಸಿಬಿಐ ತನಿಖೆಗೆ ವಹಿಸಬೇಕು.‌ ಆಗ ಸಿಎಂ ಇದರಲ್ಲಿ ಹೇಗೆ ಭಾಗಿಯಾಗಿದ್ದಾರೆಂಬ ಸಂಗತಿ ಗೊತ್ತಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುವುದರಲ್ಲಿ, ದಾರಿ ತಪ್ಪಿಸುವಲ್ಲಿ ನಿಸ್ಸೀಮವಾಗಿದೆ. ಇದೀಗ ವಾಲ್ಮೀಕಿ ನಿಗಮದ ಹಗರಣದಲ್ಲಿ ಯಾವುದೇ ಸಂಪರ್ಕವಿಲ್ಲದ ಒಂಬತ್ತು ಕಂಪನಿಗಳಿಗೆ ಹಣ ವರ್ಗಾವಣೆಯಾಗಿದೆ. ಇಷ್ಟಾದರೂ ಆರೋಪ ಹೊತ್ತಿರುವ ಸಚಿವನಿಂದ ರಾಜೀನಾಮೆ ಕೊಡಿಸಲು ಆಗುತ್ತಿಲ್ಲ ಎಂದು ಹರಿಹಾಯ್ದರು.

ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಚಂಡ ಬಹುಮತದೊಂದಿಗೆ ಜಯಸಾಧಿಸಲಿದೆ ಎನ್ನುವುದು ಬಂದಿದೆ.‌ ಚುನಾವಣೆ ಮೊದಲು, ನಂತರವೂ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಮೋದಿ ನೇತೃತ್ವದಲ್ಲಿ ನಾವು ಜಯಗಳಿಸಲಿದ್ದೇವೆ ಎಂಬ ಮಾತು ಹೇಳಿದ್ದೆ. ಅದೇ ತರಹ ಅಮಿತ್ ಶಾ, ರಾಜನಾಥ್ ಸಿಂಗ್ ಎಲ್ಲರೂ ಹೇಳಿದ್ದರು. ಅದರ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ್ದರು. ಇದೀಗ ಹೆಚ್ಚು ಕಡಿಮೆ ಪಕ್ಷದ ನಾಯಕರ ಭವಿಷ್ಯಗಳು ಖಚಿತವಾಗಿವೆ. ಚುನಾವಣೆ ಫಲಿತಾಂಶ ಬಳಿಕ ಎಕ್ಸಿಟ್ ಪೋಲ್‌ಗಿಂತಲೂ ಬಿಜೆಪಿ 400ಕ್ಕಿಂತ ಅಧಿಕ ಸೀಟ್‌ಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರಿಗೆ ದೇಶದ ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ಸಿಎಜಿ ಸೇರಿದಂತೆ ಯಾವುದೇ ರೀತಿಯಾದ ಸಂವಿಧಾನ ಆಧಾರದ ಮೇಲೆ ನಿರ್ಮಾಣವಾದ ಸ್ವಾಯತ್ತ ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲ. ಜನತಾ ಜನಾರ್ಧನನ ಮೇಲೆ ವಿಶ್ವಾಸವಿಲ್ಲ. ಹೀಗಾಗಿ ಜನರು ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿಲ್ಲ ಎಂದು ಜೋಶಿ ಕುಟುಕಿದರು.

ನೇಹಾ, ಅಂಜಲಿ ರೀತಿಯಲ್ಲಿ ಹತ್ಯೆ ಮಾಡಲಾಗುವುದು ಎಂದು ಶಿಕ್ಷಕಿ ದೀಪಾಗೆ ಬೆದರಿಕೆ ಪತ್ರ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಪೊಲೀಸರಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಜನಪ್ರತಿನಿಧಿಗಳೆಂದರೆ ಪೋಲಿಸರಿಗೆ ಭಯವೇ ಇಲ್ಲದಾಗಿದೆ. ಸಿಎಂ ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕು‌. ಬೆದರಿಕೆ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ಇಂತಹ ಘಟನೆಗಳು ನಡೆಯಲು ರಾಜ್ಯ ಸರ್ಕಾರದ ನಡವಳಿಕೆಯೇ ಕಾರಣ ಎಂದು ದೂರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next