ಕುಷ್ಟಗಿ : ಪರಿಶಿಷ್ಟ ವರ್ಗ ಸಮುದಾಯಕ್ಕೆ ಶೇ.7.5 ಮೀಸಲಾತಿ ಹಾಗೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ಶೇ.17 ಮೀಸಲಾತಿ ಕಲ್ಪಿಸುವವರೆಗೂ ಅ.9ರ ಮಹರ್ಷಿ ವಾಲ್ಮೀಕಿ ಜಯಂತಿ ಭಾಗವಹಿಸುವುದಿಲ್ಲ ಎಂದು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ತಹಶಿಲ್ದಾರರ ಕಛೇರಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿಯನ್ನು ಸಭೆ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಇಲ್ಲಿನ ತಹಶಿಲ್ದಾರರ ಕಛೇರಿಯ ಸಭಾಂಗಣದಲ್ಲಿ ತಹಶೀಲ್ದಾರ ಗುರುರಾಜ್ ಚಲವಾದಿ ಅಧ್ಯಕ್ಷತೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಆರಂಭದಲ್ಲಿ ವಿರೋಧ ವ್ಯಕ್ತವಾಯಿತು.
ಆರಂಭದಲ್ಲಿ ವಿರೋಧಿಸಿದ ವಾಲ್ಮೀಕಿ ನಾಯಕ ಸಮಾಜದ ತಾಲೂಕಾ ಅಧ್ಯಕ್ಷ ಬಸವರಾಜ ನಾಯಕ ಅವರು, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಗಳು ಕಳೆದ 240 ದಿನಗಳಿಂದ ಬೆಂಗಳೂರು ಪ್ರೀಡಂ ಪಾರ್ಕಿನಲ್ಲಿ ಸಮಾಜಕ್ಕೆ ಶೇ.7.5 ಮೀಸಲಾತಿಗೆ ಧರಣಿ ನಿರತರಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಸೌಜನ್ಯಕ್ಕೂ ಇಲ್ಲಿಯವರೆಗೂ ಸ್ಪಂಧಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಾಲ್ಮೀಕಿ ಆಚರಣೆ ಶೋಭೆ ಅಲ್ಲ. ಅ.9ರೊಳಗೆ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಶೇ.7.5 ಹಾಗೂ ಪರಿಶಿಷ್ಟ ಜಾತಿಗೆ ಶೇ17 ಮೀಸಲಾತಿ ನೀಡಿದರೆ ಸರ್ಕಾರದ ಆಚರಣೆಯಲ್ಲಿ ಭಾಗವಹಿಸಲಿದ್ದೇವೆ. ಅ.9 ರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ವಾಲ್ಮೀಕಿ ಸಮಾಜದ ಯಾವ ವ್ಯಕ್ತಿ ಭಾಗವಹಿಸುವುದಿಲ್ಲ ಸಭೆಯನ್ನು ಬಹಿಷ್ಕರಿಸಿ ಅಲ್ಲಿಂದ ನಿರ್ಗಮಿಸಿದರು ಈ ವೇಳೆ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಾಹಿತಿ ವಾಲ್ಮೀಕೆಪ್ಪ ಯಕ್ಕರನಾಳ ಅವರು, ವಾಲ್ಮೀಕಿ ಸಂಘಟನೆಯ ನಡೆಗೆ ಅಲ್ಲಿಯೇ ವಿರೋಧ ವ್ಯಕ್ತಪಡಿಸಿದರು. ಸದರಿಯವರ ವಿರೋಧಕ್ಕೆ ವಾಲ್ಮೀಕಿ ಸಮಾಜದ ಮುಖಂಡರು ಲೆಕ್ಕಿಸದೇ ಹೊರ ನಡೆದರು. ಬಳಿಕ ಮಾತನಾಡಿದ ಅವರು, ನಮ್ಮ ಸಮಾಜದವರು ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಭಾಗವಹಿಸಬೇಕೆ ವಿನಃ ಬಹಿಷ್ಕರಿಸಿ ಮಹರ್ಷಿ ವಾಲ್ಮೀಕಿಗೆ ನಮ್ಮ ಸಮುದಾಯದಿಂದ ಅವಮಾನವಾಗಬಾರದು. ಇದರಲ್ಲಿ ರಾಜಕಾರಣ ತರಲೇಬಾರದು. ನಮ್ಮ ಸಮಾಜದ ಸಂಘಟನೆಯವರು ಭಾಗವಹಿಸದಿದ್ದರೆ ಏನಂತೆ ಸರ್ಕಾರ ಆಚರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಸ್ಪಷ್ಟಪಡಿಸಿದರು. ಇದೇ ವೇಳೆ ತಹಶಿಲ್ದಾರರ ಎಂ. ಗುರುರಾಜ್ ಚಲವಾದಿ ಮಾತನಾಡಿ ಸರ್ಕಾರ ನಿಗದಿ ಮಾಡಿದ ಮಹರ್ಷಿ ವಾಲ್ಮೀಕಿ ಜಯಂತಿ ನಿಗದಿಯಂತೆ ನಡೆಯಲಿದೆ. ಯಾವೂದೇ ಕಾರಣಕ್ಕೂ ನಿಲ್ಲಿಸಲು ಬರುವುದಿಲ್ಲ ಎಂದರು.
ವೇದಿಕೆಯಲ್ಲಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪರಿಶಿಷ್ಟ ವರ್ಗ ಕಲ್ಯಾಣ ಅಧಿಕಾರಿ ವೀರಪ್ಪ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.