ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಾ| ಶರಣ ಪ್ರಕಾಶ್ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿ ಜುಲೈ 3ರಂದು ಬಿಜೆಪಿಯು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಚುರುಕುಗೊಂಡಿದ್ದು, ದಿಲ್ಲಿ ನಾಯಕರ ನಿರ್ದೇಶನದ ಅನ್ವಯ ರಾಜ್ಯ ಸರಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಹೀಗಾಗಿ ವಿಧಾನ ಮಂಡಲ ಅಧಿವೇಶನಕ್ಕೆ ಮುನ್ನವೇ ಸರಕಾರದ ಅಕ್ರಮದ ವಿರುದ್ಧ ಚರ್ಚೆ ಹುಟ್ಟು ಹಾಕಲು ನಿರ್ಧರಿಸಲಾಗಿದೆ.
ಬಿಜೆಪಿ ಹೋರಾಟ ನಡೆಸಿದರೆ, ಕೇಂದ್ರದಿಂದ ಅನುದಾನ ಕೊಡಿಸಿ ಎಂದು ಸಿಎಂ ಸಿದ್ದರಾಮಯ್ಯ ಪಟ್ಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಬಿಜೆಪಿ ನಾಯಕರಲ್ಲಿ ತುಸು ಅಳುಕು ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಗ್ಗೆ ನಾವು ಉತ್ತರ ಕೊಡುತ್ತೇವೆ. ನೀವು ಮುನ್ನುಗ್ಗಿ ಎಂದು ವಿಜಯೇಂದ್ರಗೆ ಅಮಿತ್ ಶಾ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈಗ ಸಿಎಂ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಬಿಜೆಪಿ ವಾದವೇನು?: 187 ಕೋಟಿ ರೂ. ಅವ್ಯವಹಾರದ ಬಗ್ಗೆ ಹಣಕಾಸು ಇಲಾಖೆಯನ್ನೂ ನಿಭಾಯಿಸುತ್ತಿರುವ ಸಿಎಂ ಸಿದ್ದರಾಮಯ್ಯನವರಿಗೆ ಮಾಹಿತಿ ಸಿಗದೇ ಇರುವುದಕ್ಕೆ ಸಾಧ್ಯವೇ ಇಲ್ಲ. ಈ ಬಗ್ಗೆ ಗೊತ್ತಿದ್ದರೂ ಸುಮ್ಮನಿದ್ದಾರೆ. ಲೋಕಸಭಾ ಚುನಾವಣೆಗೆ ಅನ್ಯ ರಾಜ್ಯಗಳ ಅಭ್ಯರ್ಥಿಗೆ ಈ ರೀತಿ ವರ್ಗಾ ವಣೆಯಾದ ಹಣವನ್ನೇ ಪಾರ್ಟಿ ಫಂಡ್ ರೂಪದಲ್ಲಿ ನೀಡಲಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂಬುದು ಬಿಜೆಪಿಯ ವಾದ.