Advertisement
ಬುಧವಾರ ಬೆಳಗ್ಗೆ ಸೂರ್ಯೋದಯ ಕಾಲದಲ್ಲಿ ವರ್ಣಮಯ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಕಣಿವೆ ಮಾರಮ್ಮನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ದೇವಾಲಯದ ಪ್ರಾಕಾರದಲ್ಲಿ ಪ್ರದಕ್ಷಿಣಾ ಉತ್ಸವ ನಡೆಸಲಾಯಿತು. ನಂತರ ರಥದಲ್ಲಿ ಉತ್ಸವಮೂರ್ತಿಯನ್ನು ಇರಿಸಲಾಯಿತು. ದೇವರನ್ನು ರಥದಲ್ಲಿ ಕೂರಿಸುತ್ತದ್ದಂತೆ ಸಾವಿರಾರು ಸಂಖ್ಯೆಯಲ್ಲಿದ್ದ ಭಕ್ತಾದಿಗಳು ದೇವಿಗೆ ಜಯಕಾರ ಹಾಕಿದರು.
ಸಾವಿರಾರು ಜನರು ಆಗಮಿಸಿದ್ದರು. ದೇವಿಗೆ ಆರತಿ ಮಾಡಿದ ನಂತರ ಜನರು ದೇವಿಗೆ ಜಯಕಾರ ಹಾಕುತ್ತಾ ರಥದ ಮೇಲೆ ಬಾಳೆ ಹಣ್ಣು ಕರಿ ಕಾಳುಮೆಣಸನ್ನು ಬೀರಿದರು. ನಂತರ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ಬೇವಿನ ಸೀರೆ ಕಾರ್ಯಕ್ರಮ ನೆರವೇರಿತು. ಗುರುವಾರ ಬೆಳಗ್ಗೆ ಓಕುಳಿ ಹಾಗೂ ಸಂಜೆ ಹೂವಿನ ಅಲಂಕಾರದೊಂದಿಗೆ ದೇವಿಯ ರಾಜಬೀದಿ ಉತ್ಸವ ನಡೆಸಲಾಯಿತು. ದೇವಾಲಯದ ಸಮಿತಿ ಹಾಗೂ ಗ್ರಾಮಸ್ಥರು ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ತೀರ್ಥಪ್ರಸಾದ, ಅನ್ನ ದಾನದ ವ್ಯವಸ್ಥೆ ಮಾಡಿದ್ದರು.