ದೊಡ್ಡಬಳ್ಳಾಪುರ : ಪ್ರೇಮಿಗಳ ದಿನಾಚರಣೆ, ಮದುವೆ ಸೀಸನ್‌ನಿಂದಾಗಿ ಗುಲಾಬಿ ಹೂಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಡಚ್ ರೋಸ್ ಸೇರಿದಂತೆ ವಿವಿಧ ಜಾತಿಯ ಗುಲಾಬಿ ಹೂಗಳು ಮಾರು ಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಬಿಕರಿಯಾಗುತ್ತಿರುವುದು ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.
ಡಚ್ ರೋಸ್ಗಳ ಬೆಳೆ :ಡಚ್ ರೋಸ್‌ಗಳು ಸಾಧಾರಣವಾಗಿ ಕೆಂಪು,ಬಿಳಿ,ಪಿಂಕ್, ಹಳದಿ, ಕಿತ್ತಳೆ ಬಣ್ಣಗಳಲ್ಲಿ ಬೆಳೆಯಲಾಗುತ್ತಿದೆ. ಅತಿ ಹೆಚ್ಚು ಉಷ್ಣತೆಯಾದರೆ ಹೂಗಳು ಬೇಗ ಅರಳುತ್ತವೆ. ಹೂಗಳು ಬೇಗ ಅರಡುವುದನ್ನು ತಡೆಯಲು ಮೊಗ್ಗುಗಳಿಗೆ ಕ್ಯಾಪ್ ಹಾಕಲಾಗುತ್ತದೆ. ಆ ನಂತರ ಹೂಗಳನ್ನು ಕಾಂಡದ ಸಮೇತ ಕಿತ್ತು ಹೆಚ್ಚುವರಿ ಎಲೆಗಳನ್ನು ತೆಗೆಯಲಾಗುತ್ತದೆ. ಆನಂತರ ಇವುಗಳನ್ನು ಉದ್ದದ ಆಧಾರದ ಮೇಲೆ ಗ್ರೇಡಿಂಗ್ ಮಾಡಲಾಗುತ್ತದೆ.ಸಾಮಾನ್ಯವಾಗಿ ಹೂಗಳನ್ನು ಕಾಂಡದ ಅಳತೆ 40 ಸೆ.ಮೀ ನಿಂದ 80 ಸೆ.ಮೀನವರೆಗೆ ಉದ್ದವನ್ನು ವಿಂಗಡಿಸಲಾಗುತ್ತದೆ.ಆಮೇಲೆ 20 ಹೂಗಳಿಗೆ ಒಂದು ಹೂ ಗುಚ್ಛವನ್ನು ಮಾಡಿ , ಶ್ಯೇತ್ಯಾಗಾರದಲ್ಲಿ ಇರಿಸಲಾಗುತ್ತದೆ.
ಈಗ ಬೇಡಿಕೆ ಹೆಚ್ಚು: ಫೆಬ್ರವರಿಯಲ್ಲಿ ಗುಲಾಬಿ ಹೂಗಳಿಗೆ ಹೆಚ್ಚಿನ ಬೇಡಿಕೆ ಆರಂಭವಾಗುತ್ತದೆ. ಹೂಗಳು ತೋಟಗಳಲ್ಲಿ ಉಳಿಯದೇ ಎಲ್ಲವೂ ಖಾಲಿಯಾಗುತ್ತವೆ. ಈ ಹಿಂದೆ ವಿದೇಶಗಳಿಗೆ ಹೆಚ್ಚಾಗಿ ರಪ್ತಾಗುತ್ತಿತ್ತು. ಈಗ ಸ್ಥಳೀಯ ಮಾರುಕಟ್ಟೆಯಲ್ಲಿಯೇ ಬೇಡಿಕೆಯಿದೆ. ಒಂದು ಬಂಚ್‌ಗೆ (ಒಂದು ಬಂಚ್‌ಗೆ 20 ಹೂ) 200 ರೂ ಮುಟ್ಟಿದ್ದು, ಗುಣಮಟ್ಟಕ್ಕನುಗುಣವಾಗಿ ಬೆಲೆ ಸಿಗುತ್ತದೆ. ಬೆಂಗಳೂರಿನ ಹೆಬ್ಟಾಳದಲ್ಲಿರುವ ಅಂತಾರಾಷ್ಟ್ರೀಯ ಹೂ ಮಾರುಕಟ್ಟೆಗೆ ಹೂಗಳನ್ನು ಮಾರಾಟ ಮಾಡಲಾಗುತ್ತದೆ.
ಸಾಧಾರಣವಾಗಿ ಮದುವೆ ಸೀಸನ್‌ಗಳಲ್ಲಿ ಹೆಚ್ಚು ಮಾರಾಟವಾಗುವ ಗುಲಾಬಿ ಹೂಗಳಿಗೆ ಪ್ರೇಮಿಗಳ ದಿನಾಚರಣೆ ಬೋನಸ್ ಸಿಕ್ಕಿದ್ದು, ಪಂಚತಾರಾ ಹೋಟೆಲ್‌ಗಳಿಗೂ ಹೂಗಳನ್ನು ಸರಬರಾಜು ಮಾಡಲಾಗುತ್ತಿದೆ ಎನ್ನುತ್ತಾರೆ ತಾಲೂಕಿನ ಕುಂಟನಹಳ್ಳಿಯ ಆರ್ನೇಟ್ ಬಯೋಟೆಕ್ ಮಾಲೀಕರಾದ ಜಗನ್ನಾಥ್ ರಾಜು
ಕಳೆದ ಆರು ವರ್ಷಗಳಿಂದ ಗುಲಾಬಿ ಹೂವನ್ನು ಬೆಳೆಯುತ್ತಿದ್ದೇವೆ. ಪ್ರೇಮಿಗಳ ದಿನಾಚರಣೆ ಹಾಗೂ ಇನ್ನಿತರೆ ವಿಶೇಷ ದಿನದಂದೂ ಒಂದು ಬಂಚ್‌ಗೆ ಕೇವಲ 20 ರೂ.ಗೆ ನೀಡುತ್ತಾರೆ. ತೋಟದಲ್ಲಿ ಹೂ ಬೆಳೆದರೆ ತಿಂಗಳಿಗೆ 50-60 ಸಾವಿರ ಹಣ ಗಳಿಸಬಹುದು.
–ದೇವರಾಜ್ ,ರೈತ
-ಡಿ.ಶ್ರೀಕಾಂತ