ಪ್ರೇಮಿಗಳ ಪಾಲಿಗೆ ಫೆಬ್ರವರಿ ಬಂತೆಂದರೇ, ಎಲ್ಲಿಲ್ಲದ ಉತ್ಸಾಹ, ಸಂಭ್ರಮ, ಸಡಗರ, ಸಂತೋಷ. ಫೆಬ್ರವರಿ 7 ರಿಂದ 14ರ ತನಕ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಪ್ರಣಯದ ಭಾವನೆಗಳಿಗೆ ಮುದ ನೀಡುವ ಸಂತೋಷದ ದಿನಗಳನ್ನು ಆಚರಿಸಲಾಗುತ್ತದೆ.
ಫೆಬ್ರವರಿ 12 ನೇ ತಾರೀಕಿನಂದು ಪ್ರೇಮಿಗಳು “ಹಗ್ ಡೇ” ಅಥವಾ ಅಪ್ಪುಗೆಯ ದಿನವನ್ನು ಆಚರಿಸುತ್ತಾರೆ. ಪರಸ್ಪರ ಪ್ರೀತಿ ಭಾವನೆಗಳನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಬಿಗಿಯಾಗಿ ಅಪ್ಪಿಕೊಂಡು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ.
ರೋಸ್ ಡೇ, ಪ್ರಪೋಸ್ ಡೇ, ಚಾಕಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ ನಂತರ ವ್ಯಾಲೆಂಟೈನ್ಸ್ ವೀಕ್ ನ ಮತ್ತೊಂದು ಅವಿಸ್ಮರಣೀಯ ದಿನವಾಗಿ ಬರುವುದೇ ಅಪ್ಪುಗೆಯ ದಿನ ಅಥವಾ “ಹಗ್ ಡೇ”.
ಸುಖ, ದುಃಖ, ಸಂತೋಷ, ನಲಿವು ಎಲ್ಲದರ ಸುಂದರ ಸಂಕಲನವೇ ಪ್ರೇಮ. ಪ್ರೇಮಿಗಳ ಒಂದೊಂದು ಆಚರಣೆಗೂ ಒಂದೊಂದು ಅರ್ಥವಿದೆ. ಇಬ್ಬರೂ ಪ್ರೀತಿಸುವುದಕ್ಕೆ ಆರಂಭಿಸಿದಾಗಿನಿಂದ ಜೊತೆಯಾಗಿ ಅನುಭವಿಸಿದ ಒಂದೊಂದು ಕ್ಷಣಗಳನ್ನು ಮತ್ತೆ ನೆನಪಿಸಿಕೊಡುತ್ತದೆ ಈ ವ್ಯಾಲೆಂಟೈನ್ಸ್ ವೀಕ್.
ವ್ಯಾಲೆಂಟೈನ್ಸ್ ವೀಕ್ ಪ್ರೇಮಿಗಳ ಪಾಲಿಗೆ “ಮೊದಲ ಭೇಟಿ, ಮೊದಲ ಮಾತುಕತೆ, ಮೊದಲ ಡೇಟಿಂಗ್, ಫರ್ಸ್ಟ್ ಚಾಕಲೇಟ್ ಗಿಫ್ಟ್, ಮೊದಲ ಅಪ್ಪುಗೆ, ಪ್ರೇಮ ಪಯಣದ ಮೊದಲ ಖುಷಿ, ಮೊದಲ ಬಯಕೆ, ಮೊದಲ ನೆನಪು” ಹೀಗೆ ‘ಎಲ್ಲಾ ಮೊದಲುಗಳ’ ಹಿತವಾದ, ಮೃದುವಾದ, ರೋಮಾಂಚಕ ಕ್ಷಣಗಳನ್ನು ಮತ್ತೆ ಸ್ಮರಿಸಿಕೊಡುವ ಪರ್ವಕಾಲ.
ಪ್ರೀತಿಯೆಂದರೇ, ಎಲ್ಲಾ ಖುಷಿಯ ಶಿಖರಗಳನ್ನು ಬಿಂಬಿಸುವ ಅನುರಾಗ, ಸಮೃದ್ಧ ಸೊಬಗಿನ ಬೆಳಗಿನ ತೀರದಿ ಕಾಂತಿಯ ಸೂಸುವ ಉಷೆಯನನುಸರಿಸಿ ಹೊರಟ ನೆರಳು. ಅದು ಅಷ್ಟು ಸ್ಪಷ್ಟ ಮತ್ತು ಶುದ್ಧ.
ನೀವು ಯಾರನ್ನಾದರೂ ಇಷ್ಟಪಡುತ್ತಿದ್ದರೇ, ಈ ಒಂದು ವಾರ ನಿಮ್ಮ ಸಂಗಾತಿಯೊಂದಿಗೆ ಇರಲು ಪ್ರಯತ್ನ ಮಾಡಿ. ಅವರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯುತ್ತಾ ನಿಮ್ಮ ಪ್ರೀತಿ ನಡೆದು ಬಂದ ದಾರಿಯನ್ನು ಮೇಲ್ಮೇಲೆ ಮೆಲುಕು ಹಾಕಿಕೊಳ್ಳಿ. ನಿಜಕ್ಕೂ ನಿಮ್ಮ ಪ್ರೀತಿ ಅಜರಾಮರವಾಗುತ್ತದೆ ಎನ್ನುವುದಕ್ಕೆ ಅನುಮಾನ ಪಡಬೇಕಾಗಿಲ್ಲ. ಈ ವ್ಯಾಲೆಂಟೈನ್ಸ್ ವೀಕ್ ನ ಸಂದರ್ಭದಲ್ಲಿ ನಿಮ್ಮ ಸಂಗಾತಿಯ ಸನಿಹ ಸ್ಪರ್ಶ ನಿಮ್ಮ ಬದುಕಿನಲ್ಲಿ ಅತ್ಯಂತ ಶ್ರೇಷ್ಠವಾದ ಅನುಭೂತಿ ಎನ್ನುವುದನ್ನು ಮರೆಯದಿರಿ.
ಇನ್ನು, ನಿಮ್ಮ ಅಪ್ಪುಗೆಯ ದಿನವನ್ನು ಹೀಗೆ ಆಚರಿಸಿಕೊಳ್ಳಿ. ನಿಜಕ್ಕೂ ನೀವು ಎಂದಿಗೂ ಮರೆಯುವುದಿಲ್ಲ.
ಟೆಡ್ಡಿ ಹಗ್ :
ಟೆಡ್ಡಿ ಹಗ್ ನ್ನು ಯಾವ ಪ್ರೇಮಿಗಳು ಇಷ್ಟ ಪಡುವುದಿಲ್ಲ ಹೇಳಿ..?! ಈ ದಿನ ನಿಮ್ಮ ಸಂಗಾತಿಗೆ ಮುದ್ದು ಮುದ್ದಾಗಿರುವ ಟೆಡ್ಡಿ ಹಗ್ ನ್ನು ಪ್ರೀತಿಯ ಸಂಕೇತವಾಗಿ ಉಡುಗೊರೆಯಾಗಿ ನೀಡಿ. ನಿಮ್ಮ ಪ್ರೀತಿಯ ಅಪ್ಪುಗೆ ಭಾವಶುದ್ಧದ ಪ್ರತೀಕವದು. ನಿಮ್ಮ ಸಂಗಾತಿಗದು, ನೀವು ಅವರನ್ನು ಎಷ್ಟರ ಮಟ್ಟಿಗೆ ಕೇರ್ ಅಥವಾ ಆರೈಕೆ ಮಾಡುತ್ತೀರಿ ಎನ್ನುವುದನ್ನು ಹೇಳುತ್ತದೆ. ಹಾಗಾಗಿ ಇಂದು ನಿಮ್ಮ ಸಂಗಾತಿಗೆ ಪ್ರೀತಿಯ ಟೆಡ್ಡಿ ಹಗ್ ವೊಂದನ್ನು ನೀಡಿ.
ಟೈಟ್ ಹಗ್ ಅಥವಾ ಬಿಗಿಯಾದ ಅಪ್ಪುಗೆ.
ಯಾರು ನಿಜವಾಗಿ ಪ್ರೀತಿಸುತ್ತಾರೋ ಅವರು ಖಂಡಿತವಾಗಿ ಆಗಾಗ ಬಿಗಿಯಾಗಿ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾರೆ. ಇವತ್ತಿನ ದಿನಕ್ಕೆ ಈ ಥರದ ಅಪ್ಪುಗೆ ನಿಮ್ಮ ಸಂಗಾತಿಯ ಪಾಲಿಗೆ ಶ್ರೇಷ್ಠವಾದ ಭಾವನೆಯನ್ನು ನೀಡುತ್ತದೆ. ಇಂದು ನಿಮ್ಮ ಹೃದಯಾಲದ ಸಂಗಾತಿಗೆ ಬಿಗಿಯಾದ ಅಪ್ಪುಗೆ ನೀಡುವುದರ ಮೂಲಕ ಅವರನ್ನು ಎಷ್ಟು ಖುಷಿಯಲ್ಲಿಡಲು ಸಾಧ್ಯವಾಗುತ್ತೋ ಅಷ್ಟು ಖುಷಿಯಲ್ಲಿರಿಸಿ.
Surprise Hug ಅಥವಾ ಆಶ್ಚರ್ಯದ ಅಪ್ಪುಗೆ.
ಇದು ಅತ್ಯಂತ ಪ್ರೀತಿಯಿಂದ ಕೂಡಿದ ಅಪ್ಪುಗೆ. ನಿಮ್ಮ ಸಂಗಾತಿಗೆ ನಿಮ್ಮ ಭೇಟಿಯ ಬಗ್ಗೆ ಯಾವುದೇ ವಿಚಾರ ತಿಳಿಸದೆ ಇಂದು ಅವರನ್ನು ಭೇಟಿ ಮಾಡಲು ಪ್ರಯತ್ನಿಸಿ. ಮತ್ತು ಅವರಿಗೆ ಭೇಟಿಯಾದ ತಕ್ಷಣವೇ ಸಿಹಿಯಾದ ಅಪ್ಪುಗೆಯನ್ನು ನೀಡಿ. ಆದರೇ, ಈ ಅಪ್ಪುಗೆ ನಿಮ್ಮ ಸಂಗಾತಿ ನಿರೀಕ್ಷಿಸಿರಬಾರದು, ಆಗ ಮಾತ್ರ ಈ ಅಪ್ಪುಗೆ ನಿಮಗೆ ತುಂಬಾ ಇಷ್ಟವಾಗುತ್ತದೆ. ನೀವು ನಿಮ್ಮ ಸಂಗಾತಿಯಿಂದ ದೂರವಿದ್ದೀರಿ ಎಂದು ಭಾವಿಸುವಾಗ ಹಿಂದಿನಿಂದ ಅಪ್ಪಿಕೊಳ್ಳುವುದರಿಂದ ಕಳೆದು ಹೋಗಿದ್ದ ನಗು ಮತ್ತೆ ಮರಳಿ ಬರುತ್ತದೆ ಎನ್ನುವುದನ್ನು ನೀವೇ ಸ್ವತಃ ನೋಡುತ್ತೀರಿ.
ಸೈಡ್ ಹಗ್ :
ಈ ಹಗ್ ಅಥವಾ ಅಪ್ಪುಗೆ ಒನ್ ಸೈಡ್ ಲವ್ ಇರುವವರಿಗೆ ಖುಷಿಯನ್ನುಂಟು ಮಾಡುತ್ತದೆ. ಈ ವಿಶೇಷ ದಿನದಂದು ನೀವು ಇಷ್ಟ ಪಡುತ್ತಿರುವವರಿಗೆ ಸೈಡ್ ಹಗ್ ಮಾಡಿ ಶುಭಾಶಯ ತಿಳಿಸಿ. ನೀವು ಖಂಡಿತ ಖುಷಿಯಾಗಿರುತ್ತೀರಿ. ಅಷ್ಟಲ್ಲದೇ, ನಿಮ್ಮ ಪ್ರೀತಿ ಗೆಲ್ಲುವ ಸಾಧ್ಯತೆಯೂ ಹೆಚ್ಚಿದೆ.
ಈ ವಿಶೇಷ ದಿನ ಬರಿ ಅಪ್ಪುಗೆಯಷ್ಟೇ ಅಲ್ಲ ಎನ್ನುವುದನ್ನು ಮರೆಯದಿರಿ. ಇದು ನೀವು ನಿಮ್ಮ ಸಂಗಾತಿಗೆ ನೀಡುವ ಧೈರ್ಯ ಮತ್ತು ಸುರಕ್ಷತೆಯೂ ಹೌದು.
ಶುದ್ಧ ಸಲಿಲದಂತಿರುವ ಪ್ರೇಮಿಗಳಿಗೆ ಅಪ್ಪುಗೆ ದಿನದ ಶುಭಾಶಯಗಳು.
–ಶ್ರೀರಾಜ್ ವಕ್ವಾಡಿ