Advertisement

ಹುತಾತ್ಮರ ಕುಟುಂಬಗಳಿಗೆ ನೆರವಾಗಲು ವಾಲಾ ಸಲಹೆ

11:55 AM Dec 08, 2018 | Team Udayavani |

ಬೆಂಗಳೂರು: ದೇಶಕ್ಕಾಗಿ ತಮ್ಮ ಪ್ರಾಣ ಕೊಡುವ ಸೈನಿಕರು ಹಾಗೂ ಅವರ ಕುಟುಂಬಗಳಿಗೆ ಸಹಾಯ ಮಾಡುವುದು ದೇಶದ ಪ್ರತಿಯೊಬ್ಬರ ಕರ್ತವ್ಯ ಎಂದು ರಾಜ್ಯಪಾಲ ವಿ.ಆರ್‌. ವಾಲಾ ಅವರು ಅಭಿಪ್ರಾಯಪಟ್ಟರು.

Advertisement

ಸೈನಿಕ ಮತ್ತು ಅರೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಶುಕ್ರವಾರ ರಾಜಭವನದಲ್ಲಿ ಆಯೋಜಿಸಿದ್ದ “ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ’ ಕಾರ್ಯಕ್ರಮದಲ್ಲಿ ಧ್ವಜ ಬಿಡುಗಡೆ ಮಾಡಿ ಮಾತನಾಡಿದ ಅವರು, ವಯೋ ವೃದ್ಧರು, ಮಕ್ಕಳಿಗೆ ನಾವು ಸಹಾಯ ಮಾಡದಿದ್ದರೂ ಪರವಾಗಿಲ್ಲ. ಆದರೆ, ದೇಶಕ್ಕಾಗಿ ತಮ್ಮ ಪ್ರಾಣ ಬಲಿದಾನ ನೀಡಿದ ಸೈನಿಕರು ಹಾಗೂ ಪೊಲೀಸರ ಕುಟುಂಬಗಳಿಗೆ ಆಸರೆಯಾಗಬೇಕು ಎಂದರು.

ಮೂರು ವಿವಿಧ ಸೇನೆಗಳು ದೇಶದ ಗಡಿ ರಕ್ಷಣೆಯಲ್ಲಿ ತೊಡಗಿದ್ದು, ಸಶಸ್ತ್ರ ಪಡೆಗಳು ದೇಶದೊಳಗಿನ ವೈರಿಗಳ ವಿರುದ್ಧ ಹೋರಾಡುತ್ತಿದ್ದಾರೆ. ನಮ್ಮ ನಡುವೆಯೇ ಇರುವ ಆತಂಕವಾದಿಗಳು, ಮಾವೋವಾದಿಗಳು, ನಕ್ಸಲರ ವಿರುದ್ಧ ಇವರು ಹೋರಾಡುತ್ತಿದ್ದಾರೆ. ಆತಂಕವಾದಿಗಳಿಗಿಂತಲೂ ಅವರನ್ನು ಬೆಂಬಲಿಸುವವರು ದೇಶಕ್ಕೆ ಹೆಚ್ಚು ಅಪಾಯಕಾರಿಯಾಗಿದ್ದು, ಅಂತಹವರನ್ನು ಮೊದಲು ಮಟ್ಟ ಹಾಗಬೇಕಿದೆ ಎಂದು ಹೇಳಿದರು. 

ಸುಭದ್ರವಾಗಿರುವ ದೇಶದ ಮೇಲೆ ಯುದ್ಧಕ್ಕೆ ಬರಲು ಮತ್ತೂಂದು ದೇಶದವರು ಯೋಚಿಸುತ್ತಾರೆ. ಆದರೆ, ಆತಂಕವಾದಿಗಳು, ನಕ್ಸಲರ ಉಪಳಟ ಹೆಚ್ಚಾದಾಗ, ಇತರರು ನಮ್ಮ ಮೇಲೆ ಯುದ್ಧ ಸಾರುತ್ತಾರೆ. ಹೀಗಾಗಿ ಇವರನ್ನು ಪೋಷಿಸುವವರ ವಿರುದ್ಧ ಹೋರಾಡಲು ಸೈನಿಕರು ಹಾಗೂ ಪೊಲೀಸರಿಗೆ ನೆರವಾಗುವ ಮೂಲಕ ಸುಭದ್ರ ಭಾರತ ಕಟ್ಟಬೇಕಿದೆ ಎಂದ ರಾಜ್ಯಪಾಲರು, ಸೈನಿಕರಿಗೆ ನೆರವಾಗಲು ವಿವಿಧ ಇಲಾಖೆಗಳು ಹೆಚ್ಚಿನ ಅನುದಾನ ಸಂಗ್ರಹಿಸಿರುವುದೂ ಸಹ ದೇಶ ಸೇವೆಯೇ ಆಗಿದೆ ಎಂದು ಅಭಿನಂದಿಸಿದರು. 

ವೀರ ಮರಣ ಹೊಂದಿದ್ದ ಮದ್ರಾಸ್‌ ರೆಜಿಮೆಂಟ್‌ನ ಸುಬೇದಾರ್‌ ಬಸಪ್ಪ ಪಾಟೀಲ್‌ ಅವರ ಪತ್ನಿ ಶಕುಂತಲಾ, ಸಿಆರ್‌ಸಿಎಫ್ನ ಪೇದೆಗಳಾದ ಮಂಜುನಾಥ ಜಕ್ಕಣ್ಣವರ್‌ ಪತ್ನಿ ಲಲಿತಾ, ಎಚ್‌.ಎಸ್‌.ಚಂದ್ರ ಅವರ ಪತ್ನಿ ಪೃಥ್ವಿ ಎಂ.ಕೆ. ಅವರಿಗೆ ರಾಜ್ಯಪಾಲರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಜತೆಗೆ ಅತಿ ಹೆಚ್ಚು ಧ್ವಜ ನಿಧಿ ಸಂಗ್ರಹಿಸಿದ ಸರ್ಕಾರಿ ಸಂಸ್ಥೆಗಳನ್ನು ಅಭಿನಂದಿಸಿ, ಹೆಚ್ಚಿನ ನಿಧಿ ಸಂಗ್ರಹಿಸಿದ ಕೆಎಸ್‌ಆರ್‌ಟಿಸಿಗೆ ಟ್ರೋಫಿ ವಿತರಿಸಿದರು.

Advertisement

ಸಿಎಂ, ಡಿಸಿಎಂ ಗೈರು: ರಾಜ್ಯ ಸರ್ಕಾರದ ಸೈನಿಕ ಮತ್ತು ಅರೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಶುಕ್ರವಾರ ರಾಜಭವನದಲ್ಲಿ ಆಯೋಜಿಸಿದ್ದ ವೀರ ಮರಣ ಹೊಂದಿದ ಸೈನಿಕರ ಕುಟುಂಬಗಳಿಗೆ ನೆನಪಿನ ಕಾಣಿಕೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಗೈರಾಗಿದ್ದರು.

ಸಿಪಾಯಿ ಪತ್ನಿಯರಿಗೆ ಕನಿಷ್ಠ 18 ಸಾವಿರ ಪಿಂಚಣಿ ಕೊಡಿ: ಮೃತಪಟ್ಟ ಸಿಪಾಯಿಗಳ ಪತ್ನಿಯರಿಗೆ ಅತ್ಯಂತ ಕಡಿಮೆ ಪಿಂಚಣಿ ದೊರೆಯುತ್ತಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಮಾಸಿಕ ಕನಿಷ್ಠ 18 ಸಾವಿರ ರೂ. ಪಿಂಚಣಿ ನೀಡಲು ಸರ್ಕಾರ ಯೋಜನೆ ಜಾರಿಗೊಳಿಸಬೇಕು ಎಂದು ನಿವೃತ್ತ ಏರ್‌ ಮಾರ್ಷಲ್‌ ಕೆ.ಎಂ.ರಾಮಸುಂದರ ಸರ್ಕಾರವನ್ನು ಕೋರಿದರು. 

ಬಹುತೇಕ ಗ್ರಾಮೀಣ ಭಾಗದಲ್ಲೇ ವಾಸವಿರುವ ಸೈನಿಕರ ಪತ್ನಿಯರು ಹೆಚ್ಚು ಓದಿರುವುದಿಲ್ಲ. ತಂದೆ-ತಾಯಿ ಆಶ್ರಯದಲ್ಲಿರುತ್ತಾರೆ. ಹೀಗಾಗಿ ಮೃತ ಸೈನಿಕರ ಪತ್ನಿಯರಿಗೆ ಸ್ವಂತ ಜಿಲ್ಲೆಯಲ್ಲಿಯೇ ಉದ್ಯೋಗ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ. ಜತೆಗೆ, ಆಸ್ತಿ ತೆರಿಗೆಯಲ್ಲಿ ಸರ್ಕಾರ ಸೈನಿಕರಿಗೆ ಶೇ.50ರಷ್ಟು ವಿನಾಯ್ತಿ ನೀಡಿದರೂ, ಜಂಟಿಯಾಗಿರುವ ಆಸ್ತಿಗಳಲ್ಲಿ ಈ ಸೌಲಭ್ಯ ಪಡೆಯಲಾಗುತ್ತಿಲ್ಲ. ಇಂತಹ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next